ತೇಜಸ್ವಿ ಸೂರ್ಯ ಸ್ಥಾನಕ್ಕೆ ಗುಜರಾತ್‌ನ ಡಾ. ಹೇಮಾಂಗ್ ಜೋಶಿ; ಬಿಜೆಪಿ ಯುವ ಮೋರ್ಚಾದ ಹೊಸ ಸಾರಥಿ ಯಾರು?
ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗಳು ನಡೆದಿದ್ದು, ಪಕ್ಷದ ಹೊಸ ರಾಷ್ಟ್ರೀಯ ತಂಡದಲ್ಲಿ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಭಾಗವಾಗಿ ಬಿಜೆಪಿ ಯುವ ಮೋರ್ಚಾ (BJYM) ರಾಷ್ಟ್ರೀಯ ಅಧ್ಯಕ್ಷರಾಗಿ ಗುಜರಾತ್‌ನ ವಡೋದರಾ ಸಂಸದ ಡಾ. ಹೇಮಾಂಗ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ.
ತೇಜಸ್ವಿ ಸೂರ್ಯ ಅವರ ಭಾಷಣ ಶೈಲಿ, ಕಾರ್ಯತಂತ್ರವನ್ನು ನೋಡಿದ ಹೈಕಮಾಂಡ್ ಅವರಿಗೆ 6 ವರ್ಷಗಳ ಹಿಂದೆ ಯುವಮೋರ್ಚಾದ ಜವಾಬ್ದಾರಿಯನ್ನು ನೀಡಿತ್ತು. ಸದ್ಯ ಕೈಬಿಟ್ಟಿದ್ದು, ಆ ಜಾಗಕ್ಕೆ ಗುಜರಾತ್‌ನ ಡಾ. ಹೇಮಾಂಗ್ ಜೋಶಿ ಅವರನ್ನು ನೇಮಕ ಮಾಡಿದೆ. ಈ ಮೂಲಕ ಕಳೆದ ಸುಮಾರು ಆರು ವರ್ಷಗಳಿಂದ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕರ್ನಾಟಕದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಸ್ಥಾನವನ್ನು ಹೇಮಾಂಗ್ ಜೋಶಿ ತುಂಬಿದ್ದಾರೆ.

35 ವರ್ಷದ ಹೇಮಾಂಗ್ ಜೋಶಿ ಗುಜರಾತ್ ಬಿಜೆಪಿಯ ಯುವ ಮುಖಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ವಡೋದರಾ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು, ಇದಕ್ಕೂ ಮೊದಲು ಗುಜರಾತ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಯುವ ಮೋರ್ಚಾದ ಜವಾಬ್ದಾರಿ ದೊರೆತಿರುವುದು ಅವರ ರಾಜಕೀಯ ಪಯಣದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಹೇಮಾಂಗ್ ಜೋಶಿ ಮೂಲತಃ ಗುಜರಾತ್‌ನ ಪೋರಬಂದರ್ ನವರು. ಶಿಕ್ಷಣಕ್ಕಾಗಿ ಅವರು ವಡೋದರಾಗೆ ತೆರಳಿ, ಅಲ್ಲಿನ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನೊಂದಿಗೆ ಗುರುತಿಸಿಕೊಂಡರು. 2010-11ರ ಅವಧಿಯಲ್ಲಿ ಎಬಿವಿಪಿಯ ಮಾಧ್ಯಮ ಉಸ್ತುವಾರಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದರು. 2015-16ರಲ್ಲಿ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ನಂತರ 2013ರಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ರಾಜಕೀಯ ಪ್ರವೇಶಿಸಿದರು.
ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಹಂತ ಹಂತವಾಗಿ ಪಕ್ಷದ ಸಂಘಟನೆಯಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಿದ ಹೇಮಾಂಗ್ ಜೋಶಿ, ಗುಜರಾತ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸ್ಥಾನಕ್ಕೂ ಏರಿದರು. ಬಳಿಕ 2024ರ ಲೋಕಸಭಾ ಚುನಾವಣೆಯಲ್ಲಿ ವಡೋದರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಸಂಸದರಾದರು. ವಡೋದರಾ ಕ್ಷೇತ್ರಕ್ಕೆ ಬಿಜೆಪಿಯೊಂದಿಗೆ ವಿಶೇಷ ರಾಜಕೀಯ ನಂಟು ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಡೋದರಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಗೆದ್ದಿದ್ದರು. ನಂತರ ಅವರು ವಾರಾಣಸಿ ಕ್ಷೇತ್ರವನ್ನು ತಮ್ಮ ಪ್ರಮುಖ ಲೋಕಸಭಾ ಕ್ಷೇತ್ರವನ್ನಾಗಿ ಮಾಡಿಕೊಂಡರು.
ತೇಜಸ್ವಿ ಸೂರ್ಯ ಬಳಿಕ ಯುವ ಮೋರ್ಚಾ ಸಾರಥ್ಯ
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು 2020ರ ಸೆಪ್ಟೆಂಬರ್‌ನಲ್ಲಿ ತೇಜಸ್ವಿ ಸೂರ್ಯ ವಹಿಸಿಕೊಂಡಿದ್ದರು. ಸುಮಾರು ಆರು ವರ್ಷಗಳ ಕಾಲ ಈ ಜವಾಬ್ದಾರಿ ನಿರ್ವಹಿಸಿದ ಅವರು, ರಾಷ್ಟ್ರಮಟ್ಟದಲ್ಲಿ ಯುವ ಮೋರ್ಚಾದ ಹಲವು ಕಾರ್ಯಕ್ರಮಗಳು ಮತ್ತು ಹೋರಾಟಗಳಿಗೆ ನೇತೃತ್ವ ನೀಡಿದ್ದರು. ಈಗ ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೇಮಾಂಗ್ ಜೋಶಿ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ತೇಜಸ್ವಿ ಸೂರ್ಯ ಅವರು ತಮ್ಮ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ, ನಗರ ಘಟಕದ ಕಾರ್ಯಕರ್ತನಾಗಿ ಆರಂಭಿಸಿದ್ದ ತಮ್ಮ BJYM ಪಯಣ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೊಂಡೊಯ್ದಿರುವುದಕ್ಕೆ ಪಕ್ಷದ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಹೇಮಾಂಗ್ ಜೋಶಿ ಅವರಿಗೆ ಶುಭಾಶಯಗಳನ್ನೂ ತಿಳಿಸಿದ್ದಾರೆ.
ಯುವ ಮತದಾರರತ್ತ ಬಿಜೆಪಿಯ ಗಮನ?
ಬಿಜೆಪಿಯ ಹೊಸ ರಾಷ್ಟ್ರೀಯ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದ್ದು, ಸಂಘಟನೆಯಲ್ಲಿ ಯುವ ನಾಯಕತ್ವಕ್ಕೆ ಒತ್ತು ನೀಡಲಾಗಿದೆ. 35 ವರ್ಷದ ಹೇಮಾಂಗ್ ಜೋಶಿ ಅವರನ್ನು ದೇಶದ ಅತಿದೊಡ್ಡ ರಾಜಕೀಯ ಯುವ ಸಂಘಟನೆಯೊಂದರ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿರುವುದು ಇದೇ ಹಿನ್ನೆಲೆಯಲ್ಲಿನ ಪ್ರಮುಖ ನೇಮಕಾತಿಯಾಗಿದೆ. ಹೊಸ ಜವಾಬ್ದಾರಿಯೊಂದಿಗೆ ದೇಶಾದ್ಯಂತ ಯುವಜನರನ್ನು ಸಂಘಟನೆಯೊಂದಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸಂಪರ್ಕಿಸುವ ಸವಾಲು ಇದೀಗ ಹೇಮಾಂಗ್ ಜೋಶಿ ಅವರ ಮುಂದಿದೆ.
ಗುಜರಾತ್‌ಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಮತ್ತಷ್ಟು ಪ್ರಾತಿನಿಧ್ಯವೂ ದೊರೆತಿದೆ. ಹೇಮಾಂಗ್ ಜೋಶಿ ಅವರ ಜೊತೆಗೆ ಇತರ ಗುಜರಾತ್ ನಾಯಕರಿಗೂ ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಗಳನ್ನು ನೀಡಲಾಗಿದೆ. ಹೀಗಾಗಿ ಹೊಸ ತಂಡದಲ್ಲಿ ಗುಜರಾತ್‌ನ ರಾಜಕೀಯ ಮತ್ತು ಸಂಘಟನಾ ಪ್ರಭಾವವೂ ಗಮನ ಸೆಳೆಯುತ್ತಿದೆ.


Click it and Unblock the Notifications
