ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣ ದಿಕ್ಕು ತಪ್ಪಿಸಲು ಗಣೇಶೋತ್ಸವದಲ್ಲಿ ಗಲಭೆ- ವಿಜಯೇಂದ್ರ ಅನುಮಾನ
ಬೆಂಗಳೂರು, ಸೆಪ್ಟೆಂಬರ್ 20: ಕಾಂಗ್ರೆಸ್ ಸರ್ಕಾರ ತನ್ನ ಭ್ರಷ್ಟ ಹಗರಣಗಳ ಗಂಭೀರ ಚರ್ಚೆಯ ದಿಕ್ಕು ತಪ್ಪಿಸಿ ಜನರ ಗಮನ ಬೇರೆಡೆ ಸೆಳೆಯಲು ಕೆಲವು ಘಟನೆಗಳನ್ನು ಸೃಷ್ಟಿ ಮಾಡುತ್ತಿದೆ. ಅದರ ಒಂದು ಭಾಗವಾಗಿ ಹಿಂದೂ ಸಮುದಾಯದ ಭಾವನೆ ಕೆರಳಿಸಲು ಗಣೇಶೋತ್ಸವ ಮೆರವಣಿಗೆಗಳ ಮೇಲೆ ದಾಳಿ ನಡೆಸುವ ಮತಾಂಧ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗಷ್ಟೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಭಾರೀ ಗಲಭೆ ಉಂಟಾಗಿತ್ತು. ಈ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ದಾವಣಗೆರೆ ವೆಂಕಾ ಭೋವಿ ಕಾಲೋನಿಯಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆದಿದೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ವಾಹನಗಳು ಹಾಗೂ ಮನೆಗಳು ಹಾನಿಗೊಳಗಾಗಿದೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿ.ವೈ ವಿಜಯೇಂದ್ರ, ಗಣೇಶೋತ್ಸವಗಳ ಮೇಲೆ ಕ್ಷುದ್ರ ಶಕ್ತಿಗಳ ಅಟ್ಟಹಾಸ ನಿರಂತರವಾಗಿ ಸಾಗಿದೆ. ನಾಗಮಂಗಲದ ಘಟನೆ ಮಾಸುವ ಮುನ್ನವೇ ತಡರಾತ್ರಿ ದಾವಣಗೆರೆಯಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ದಾಳಿ ನಡೆದಿರುವ ಘಟನೆ ಗಮನಿಸಿದರೆ ಕಾನೂನು ಸುವ್ಯವಸ್ಥೆಯ ವಿಫಲತೆ ಹಾಗೂ ಗೃಹ ಇಲಾಖೆಯ ಸಂಪೂರ್ಣ ನಿಷ್ಕ್ರಿಯತೆ ಎದ್ದುಕಾಣುತ್ತದೆ ಎಂದರು.
ಹಿಂದೂ ಉತ್ಸವ ಹಾಗೂ ಆಚರಣೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತಾಳಿರುವ ಉಪೇಕ್ಷೆ ಧೋರಣೆಯನ್ನು ಸರಣಿ ಘಟನೆಗಳು ಸಾಕ್ಷಿಕರಿಸುತ್ತಿವೆ ಘಟನೆಯ ವಿಡಿಯೋ ತುಣುಕನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತಾಂಧ ಕಿಡಿಗೇಡಿಗಳು ಕಾಂಗ್ರೆಸ್ ಸರ್ಕಾರ ತಮ್ಮ ರಕ್ಷಣೆಗಿದೆ ಎಂಬ ನಂಬಿಕೆಯಲ್ಲೇ ದಾಳಿ ನಡೆಸುತ್ತಿರುವ ಪರಿ ಗೋಚರವಾಗುತ್ತದೆ ಎಂದಿದ್ದಾರೆ.
ದಾವಣಗೆರೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ದುರ್ಘಟನೆಗೆ ಕಾರಣರಾದ ಮತಾಂಧರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು. ಅಲ್ಲದೇ ನಾಗಮಂಗಲದಂತೆ ಅಮಾಯಕ ಹಿಂದೂ ಸಮುದಾಯಕ್ಕೆ ತೊಂದರೆ ನೀಡಿದರೆ ಬಿಜೆಪಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪುಂಡ-ಪೋಕರಿಗಳ, ವಿಧ್ವಂಸಕ ಮನಸ್ಥಿತಿಯ ದೇಶ ದ್ರೋಹಿಗಳ ತಾಣವಾಗುತ್ತಿರುವ ರಾಜ್ಯದಲ್ಲಿ ನಾಗರಿಕ ಸಮಾಜ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದ ಆತಂಕದ ನೆಲೆ ಸೃಷ್ಠಿಯಾಗುತ್ತಿದೆ. ಸಮಾಜಕ್ಕೆ ಸುರಕ್ಷತೆಯ ವಾತಾವರಣ ನಿರ್ಮಿಸುವ ಬದ್ಧತೆ ಹಾಗೂ ಸಾಮರ್ಥ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದ್ದಂತಿಲ್ಲ, ಈ ಸರ್ಕಾರ ಆಡಳಿತ ಬಿಟ್ಟು ತೊಲಗುವುದೇ ಸದ್ಯಕ್ಕೆ ಕಾಣುತ್ತಿರುವ ಪರಿಹಾರ ಎಂದು ಆಗ್ರಹಿಸಿದ್ದಾರೆ.












Click it and Unblock the Notifications