ಲೋಕಸಭಾ ಚುನಾವಣೆ: ‘ಕೈ’ ಟಿಕೆಟ್‌ಗಾಗಿ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಆಕಾಂಕ್ಷಿ!
ಮೈಸೂರು, ಫೆಬ್ರವರಿ 24: ಮೈಸೂರು ಕೊಡಗು ಲೋಕಸಭಾ ಕ್ಷೇತ್ರವು ತಮ್ಮ ತವರು ಕ್ಷೇತ್ರವಾಗಿರುವ ಕಾರಣ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಟಿಕೆಟ್ ಯಾರಿಗೆ ಎಂಬ ಗೊಂದಲ ಮುಂದುವರೆದಿದ್ದು, ಗೆಲ್ಲುವ ಕುದುರೆಗಾಗಿ ಹುಡುಕಾಟ ನಡೆಯುತ್ತಿರುವ ಹೊತ್ತಲ್ಲೇ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಾನು ಟಿಕೆಟ್ ಆಕಾಂಕ್ಷಿ ಎಂಬ ಹೇಳಿಕೆಯನ್ನು ಬಹಿರಂಗವಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ.
ಎಚ್.ವಿಶ್ವನಾಥ್ ನಡೆ ನುಡಿಗಳನ್ನು ಅರ್ಥ ಮಾಡಿಕೊಳ್ಳುವುದೇ ಈಗ ಕಷ್ಟವಾಗಿದ್ದು, ಅವರು ಕಳೆದ ಕೆಲವು ವರ್ಷಗಳಿಂದಲೇ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದತ್ತ ಕಣ್ಣಿಟ್ಟಿದ್ದಾರೆ ಎನ್ನುವುದು ಅವರ ನಡೆಯಿಂದಲೇ ಗೊತ್ತಾಗುತ್ತಿತ್ತು. ಅವರು ಇವತ್ತಿಗೂ ಬಿಜೆಪಿಯಲ್ಲಿಯೇ ಇದ್ದಾರೆ. ಮತ್ತು ಅಲ್ಲಿದ್ದುಕೊಂಡೇ ಪ್ರಧಾನಿ ನರೇಂದ್ರಮೋದಿಯಿಂದ ಸ್ಥಳೀಯ ನಾಯಕರ ತನಕವೂ ಎಲ್ಲರನ್ನೂ ಟೀಕಿಸುತ್ತಾ ಕಾಂಗ್ರೆಸ್ ನಾಯಕರನ್ನು ಹೊಗಳುತ್ತಾ ಬಿಜೆಪಿ ಎಂಎಲ್ಸಿಯಾಗಿಯೇ ಮುಂದುವರೆಯುತ್ತಿದ್ದಾರೆ. ಹೀಗಾಗಿ ಇವರು ಯಾವ ಪಕ್ಷದಲ್ಲಿದ್ದಾರೆ ಎಂಬುದು ಮತದಾರರನ್ನು ಗೊಂದಲಕ್ಕೀಡು ಮಾಡಿದೆ.

ಹಾಗೆನೋಡಿದರೆ ಎಚ್.ವಿಶ್ವನಾಥ್ ಅವರು 2014ರ ತನಕವೂ ಕಾಂಗ್ರೆಸ್ ನ ಸಂಸದರಾಗಿ ಕೆಲಸ ಮಾಡಿದ್ದರು. ಸುಮಾರು ಐದು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಕಾಲಾವಧಿಯಲ್ಲಿ ಕೆಲಸ ಮಾಡಿದ್ದರಾದರೂ 2014ರ ವೇಳೆ ನರೇಂದ್ರ ಮೋದಿ ಹವಾ ಎದ್ದಿತ್ತು. ಈ ವೇಳೆ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಅವರನ್ನು ಬಿಜೆಪಿಯಿಂದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ತಂದು ನಿಲ್ಲಿಸಲಾಗಿತ್ತು. ಆಗ ಜನ ಅನುಭವಿ ರಾಜಕಾರಣಿ ಎಚ್.ವಿಶ್ವನಾಥ್ ಅವರ ಮುಂದೆ ರಾಜಕೀಯದ ಎಬಿಸಿಡಿ ತಿಳಿಯದ ಪ್ರತಾಪ್ ಸಿಂಹ ಗೆಲ್ಲಲು ಸಾಧ್ಯವೇ ಎಂದು ಮಾತನಾಡಿಕೊಂಡಿದ್ದರು.
2014ರಲ್ಲಿ ಸೋಲುಕಂಡ ಎಚ್.ವಿಶ್ವನಾಥ್
ಅವತ್ತು ಹಾಲಿ ಸಂಸದರಾಗಿದ್ದ ಎಚ್.ವಿಶ್ವನಾಥ್ ಅವರು ಎರಡನೇ ಬಾರಿಗೆ ಲೋಕ ಅಖಾಡಕ್ಕೆ ಇಳಿದಿದ್ದರು. ಚುನಾವಣೆಯ ಫಲಿತಾಂಶ ಬಂದಾಗ ಅಚ್ಚರಿ ಎಂಬಂತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರತಾಪ್ ಸಿಂಹ ಅವರು ಗೆಲುವು ಕಂಡಿದ್ದರು. ಇಲ್ಲಿ ಪ್ರತಾಪ್ ಸಿಂಹ ಅವರ ಗೆಲುವಿಗಿಂತ ಎಚ್.ವಿಶ್ವನಾಥ್ ಅವರ ಸೋಲಿಗೆ ಕಾರಣಗಳೇನು ಎಂಬುದೇ ಹೆಚ್ಚು ಚರ್ಚೆಯಾಗಿತ್ತು. ಅವತ್ತಿನ ದಿನಗಳಲ್ಲಿ ಸದಾ ಟೀಕೆಗಳನ್ನು ಮಾಡುತ್ತಿದ್ದ ವಿಶ್ವನಾಥ್ ಅವರು ಹೋದಲ್ಲಿ ಬಂದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಅವರ ಕುಟುಂಬವನ್ನು ಹಿಗ್ಗಾಮುಗ್ಗಾ ಟೀಕೆ ಮಾಡುತ್ತಿದ್ದರು.
ಇನ್ನು ತನಗೆ ಸರಿಸಮಾನರಾದ ಅಭ್ಯರ್ಥಿಗಳು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಇಲ್ಲ ಎಂಬುದು ಅವರ ಆಲೋಚನೆಯಾಗಿತ್ತು. ಆದರೆ ಮೋದಿ ಅಲೆ ಜತೆಗೆ ದೇವೇಗೌಡರನ್ನು ನಿಂದಿಸುವ ಮೂಲಕ ಒಕ್ಕಲಿಗರ ವಿರೋಧ ಕಟ್ಟಿಕೊಂಡಿದ್ದು, ಹೀಗೆ ಎಲ್ಲವೂ ಸೇರಿ ಅವರನ್ನು ಸೋಲಿಸಿ ಮನೆಗೆ ಕಳುಹಿಸಿ ಬಿಟ್ಟವು. ಸೋಲಿನ ಬಳಿಕ ಕಾಂಗ್ರೆಸ್ ಪಕ್ಷವೂ ಅವರನ್ನು ಮರೆತು ಬಿಟ್ಟಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇತ್ತಲ್ಲದೆ, ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದರೂ ವಿಶ್ವನಾಥ್ ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ಅವರಿಗೊಂದು ಸ್ಥಾನ ಮಾನವನ್ನೂ ನೀಡಲಿಲ್ಲ.

ಪಕ್ಷಾಂತರದ ರಾಜಕೀಯದಲ್ಲಿ ಹಳ್ಳಿಹಕ್ಕಿ
ಇದರಿಂದ ಕೇವಲ ಮಾಜಿ ಸಂಸದರಾಗಿ ಉಳಿದ ಎಚ್ ವಿಶ್ವನಾಥ್ ಅವರು ಒಂದು ಹಂತದಲ್ಲಿ ಕಾಂಗ್ರೆಸ್ ನಲ್ಲಿ ಮೂಲೆ ಗುಂಪಾಗಿದ್ದರು. ಇದಕ್ಕೆಲ್ಲ ಸಿದ್ದರಾಮಯ್ಯ ಅವರೇ ಕಾರಣ ಎಂದರಿತು ಅವರ ವಿರುದ್ಧವೇ ಸಮರ ಸಾರಲು ಆರಂಭಿಸಿದ್ದರು. ಇವತ್ತಿನಂತೆ ಆ ದಿನಗಳಲ್ಲೂ ಕಾಂಗ್ರೆಸ್ ನಲ್ಲಿದ್ದುಕೊಂಡೇ ಕಾಂಗ್ರೆಸ್ ನಾಯಕರ ಬಗ್ಗೆ, ಸಿಎಂ ಬಗ್ಗೆ ಮಾತನಾಡಲು ಆರಂಭಿಸುವುದರೊಂದಿಗೆ ಸಿದ್ದರಾಮಯ್ಯ ಅವರ ಆಕ್ರೋಶಕ್ಕೂ ಕಾರಣರಾದರು. ಏನೇ ಮಾಡಿದರೂ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ ಎಂದರಿತು ಮತ್ತೆ 2018 ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜೆಡಿಎಸ್ ಕಡೆಗೆ ಮುಖ ಮಾಡಿದ್ದರು.
ತಮ್ಮನ್ನು ನಿಂದಿಸಿದ್ದೆಲ್ಲವನ್ನು ಮರೆತ ದೇವೇಗೌಡರು ಪಕ್ಷದ ಅಧ್ಯಕ್ಷ ಸ್ಥಾ ನವನ್ನೇ ಎಚ್.ವಿಶ್ವನಾಥ್ ಅವರಿಗೆ ಬಿಟ್ಟುಕೊಟ್ಟರಲ್ಲದೆ, 2018ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಮೂಲಕ ಮತ್ತೆ ರಾಜ್ಯ ರಾಜಕೀಯದಲ್ಲಿ ಬೆಳೆಯಲು ಅವಕಾಶ ಮಾಡಿಕೊಟ್ಟರು. ಆದರೆ ಯಾವ ಪಕ್ಷಕ್ಕೂ ಬಹುಮತ ಬಾರದೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾದಾಗ ತನಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದರು. ತದನಂತರ 2019ರಲ್ಲಿ ನಡೆದ ರಾಜಕೀಯ ಸ್ಥಿತ್ಯಂಥರದ ವೇಳೆ ಜೆಡಿಎಸ್ ಗೆ ಕೈಕೊಟ್ಟು ಬಿಜೆಪಿಗೆ ಮುಖ ಮಾಡಿದರು.
ನಿಜವಾಗಿಯೂ ಕಾಂಗ್ರೆಸ್ ಟಿಕೆಟ್ ಕೊಡುತ್ತಾ?
ಆ ನಂತರ ನಡೆದ ಉಪಚುನಾವಣೆಯಲ್ಲಿ ಮತ್ತೆ ಹುಣಸೂರಿನಿಂದ ಸ್ಪರ್ಧಿಸಿ ಸೋಲು ಕಂಡರು. ಬಿಜೆಪಿ ಅವರಿಗೆ ಪಕ್ಷಕ್ಕೆ ಕರೆದುಕೊಂಡು ಬಂದ ತಪ್ಪಿಗೆ ವಿಧಾನಪರಿಷತ್ ಸ್ಥಾನವನ್ನು ದಯಪಾಲಿಸಿತು. ಹಾಗೆಯೇ ಬಿಜೆಪಿಯಲ್ಲಿ ಉಳಿದ ಅವರು ಇವತ್ತಿಗೂ ಬಿಜೆಪಿ ವಿರುದ್ಧ ಮಾತನಾಡುತ್ತಲೇ ಕಾಂಗ್ರೆಸ್ ಬಳಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅದರಲ್ಲೂ ನೇರವಾಗಿ ಮಾಜಿ ಪ್ರಧಾನಿ ದೇವೇಗೌಡರನ್ನೇ ಟಾರ್ಗೆಟ್ ಮಾಡಿ ಹರಿಹಾಯುತ್ತಿದ್ದಾರೆ. ಇದನ್ನೆಲ್ಲ ಗಮನಿದಾಗ ಅವರು ಕಾಂಗ್ರೆಸ್ ಟಿಕೆಟ್ ಪಡೆಯಲೆಂದೇ ಇದನ್ನೆಲ್ಲ ಮಾಡುತ್ತಿದ್ದಾರಾ ಎಂಬ ಸಂಶಯ ಮೂಡುತ್ತಿದೆ.

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ಸಮಯದಲ್ಲಿ ಮಾಧ್ಯಮದ ಮುಂದೆ ಬಂದಿರುವ ವಿಶ್ವನಾಥ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ ಆರೋಪಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ನಡೆಯಲ್ಲ ಎಂಬ ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೆ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ಇವರನ್ನು ಪರಿಗಣಿಸುತ್ತಾರಾ? ಅದು ಗೊತ್ತಿಲ್ಲ ಆದರೆ ಮತ್ತೊಬ್ಬ ಆಕಾಂಕ್ಷಿ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಮಾಹಿತಿಗಳು ರಾಜಕೀಯ ಪಡಸಾಲೆಯಿಂದ ಹೊರ ಬರುತ್ತಿವೆ. ಹಾಗೇನಾದರೂ ಆದರೆ ಎಚ್.ವಿಶ್ವನಾಥ್ ಅವರ ನಡೆಯೇನು? ಕಾದು ನೋಡಬೇಕಿದೆ.
-
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ












Click it and Unblock the Notifications