ಬೆಳಗಾವಿ ಅಧಿವೇಶನ: ಜಮೀರ್ ಖಾನ್‌ರನ್ನು ವಜಾಗೊಳಿಸಲು ವಿಪಕ್ಷಗಳ ಆಗ್ರಹ
ತೆಲಂಗಾಣದ ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದ ಹೇಳಿಕೆ ವಿವಾದವಾಗಿದ್ದು, ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಬಿಜೆಪಿ ಸೋಮವಾರ ವಿಧಾನಸಭೆಯೊಳಗೆ ಅಹೋರಾತ್ರಿ ಪ್ರತಿಭಟನೆ ನಡೆಸಿತು.
ಸೋಮವಾರ ಬಿಜೆಪಿ ಶಾಸಕರು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಘೋಷಣೆ ಕೂಗಿದ್ದಲ್ಲದೆ ವಜಾಗೊಳಿಸುವಂತೆ ಒತ್ತಾಯಿಸಿದರು. ತೆಲಂಗಾಣದಲ್ಲಿ ಭಾಷಣ ಮಾಡಿದ ಖಾನ್, ಕರ್ನಾಟಕ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಶಾಸಕರು ಮುಸ್ಲಿಂ ಸ್ಪೀಕರ್‌ಗೆ ಕೈ ಜೋಡಿಸಿ ಗೌರವ ತೋರಿಸಬೇಕು ಎಂದು ಹೇಳಿದ್ದರು, ಸದನದಲ್ಲಿ ಸದ್ಯ ಈ ವಿಚಾರ ಭಾರಿ ವಾದ ವಿವಾದಕ್ಕೆ ಕಾರಣವಾಗಿದೆ.

ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಲು ಜಮೀರ್ ಖಾನ್ ಅವರು ಎದ್ದುನಿಂತ ತಕ್ಷಣ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮತ್ತು ಇತರ ಬಿಜೆಪಿ ಶಾಸಕರು ಪ್ರತಿಭಟನೆಯನ್ನು ಪ್ರಾರಂಭಿಸಿದರು. ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದಲ್ಲದೆ, ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ವಿಪಕ್ಷ ನಾಯಕ ಅಶೋಕ್ ಒತ್ತಾಯಿಸಿದರು.
ಸ್ಪೀಕರ್ ಸ್ಥಾನಕ್ಕೆ ಅವಮಾನ
ಜಮೀರ್ ಖಾನ್ ಸ್ಪೀಕರ್ ಕುರ್ಚಿಗೆ ಅಪಖ್ಯಾತಿ ತಂದಿದ್ದಾರೆ ಎಂದು ಅಶೋಕ್ ಹೇಳಿದರು, ಮತ್ತೊಬ್ಬ ಶಾಸಕ ಡಾ ಸಿ. ಎನ್ ಅಶ್ವಥ್ ನಾರಾಯಣ ಅವರು ಸಚಿವ ಸ್ಥಾನಕ್ಕೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದು ಅವರು "ಶಾಸಕರಾಗಲು ಅರ್ಹರಲ್ಲ" ಎಂದು ಹೇಳಿದರು.
ಸ್ಪೀಕರ್ ಯುಟಿ ಖಾದರ್ ಅವರು ಈ ವಿಷಯದ ಬಗ್ಗೆ ನೋಟಿಸ್ ನೀಡುವಂತೆ ಪ್ರತಿಪಕ್ಷಗಳನ್ನು ಒತ್ತಾಯಿಸಿದರು. ಈ ವಿಚಾರವಾಗಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ಸದನವನ್ನು ಮುಂದೂಡಿ ಉಭಯ ಪಕ್ಷಗಳ ನಾಯಕರ ಜತೆ ಮಾತುಕತೆ ನಡೆಸಿ ಸದನ ಸುಗಮವಾಗಿ ನಡೆಯುವಂತೆ ಮಾಡಿದರು.
ಕಲಾಪ ಪುನರಾರಂಭಗೊಂಡಾಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಜಮೀರ್ ಖಾನ್ ಅವರನ್ನು ಸಮರ್ಥಿಸಿಕೊಂಡರು. "ಅವರು ಯಾರನ್ನೂ ಅವಮಾನಿಸಲು ಯಾವುದೇ ಭಾಷೆಯನ್ನು ಬಳಸಿಲ್ಲ" ಎಂದರು.
"ಕಾಂಗ್ರೆಸ್ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳೆಂದು ಪರಿಗಣಿಸುತ್ತದೆ. ಹಿಂದೂಗಳನ್ನು ಅವಮಾನಿಸಿದಾಗ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗುವುದಿಲ್ಲವೇ? ಎಂದು ಅಶೋಕ್ ಕೆಂಡಾಮಂಡಲವಾದರು.
ಮಧ್ಯಾಹ್ನ ಊಟದ ವಿರಾಮದ ಬಳಿಕ ಸದನ ಪ್ರಾರಂಭವಾದಾಗಲೂ ಪ್ರತಿಭಟನೆ ಮುಂದುವರೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, "ತಾವು ಯಾವುದೇ ಅಸಂವಿಧಾನಿಕ ಪದಗಳನ್ನು ಬಳಸಿಲ್ಲ. ಈ ವಿಷಯವು ಪ್ರಮುಖ ವಿಷಯವಾಗಿದ್ದರೆ, ಕಳೆದ ವಾರ ಅಧಿವೇಶನ ನಡೆದಾಗ ಬಿಜೆಪಿ ಶಾಸಕರು ಅದನ್ನು ಏಕೆ ಪ್ರಸ್ತಾಪಿಸಲಿಲ್ಲ?" ಎಂದು ಪ್ರಶ್ನೆ ಮಾಡಿದರು.
ಬಿಜೆಪಿ ಶಾಸಕರು ಸದನದ ನೆಲದ ಮೇಲೆಯೇ ಇದ್ದರು, ಈ ಸಂದರ್ಭದಲ್ಲಿ ಐದು ಮಸೂದೆಗಳನ್ನು ವಿಧಾನಸಭೆ ಅಂಗೀಕರಿಸಿತು ಮತ್ತು ಇತರ ವಿಷಯಗಳ ಬಗ್ಗೆ ಶಾಸಕರು ಸಂಜೆ 7 ರವರೆಗೂ ಚರ್ಚಿಸಿದರು.












Click it and Unblock the Notifications