MLA Yatnal: ಕೊನೆಗೂ ನೋಟಿಸ್‌ಗೆ ಉತ್ತರಿಸಿದ ಯತ್ನಾಳ್, ಏನೆಲ್ಲ ಹೇಳಿದ್ದಾರೆ ಗೊತ್ತಾ?
ಬಿಜೆಪಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ಸಖತ್ ಸದ್ದು ಮಾಡಿದ ಬೆನ್ನಲ್ಲೇ ಅವರ ವಿರುದ್ಧ ಹೈಕಮಾಂಡ್ ನಾಯಕರಿಗೆ ದೂರು ಹೋಗಿತ್ತು. ಈ ಹಿನ್ನೆಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಇದಕ್ಕೆ ಯತ್ನಾಳ್ ಅವರು ಉತ್ತರ ನೀಡಿದ್ದು, ಹಲವು ಮಹತ್ವದ ಕಾರಣಗಳನ್ನೂ ಕೊಟ್ಟಿದ್ದಾರೆ.
ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೀಡಿದ ನೋಟಿಸ್‌ಗೆ ಉತ್ತರಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮುಖ್ಯವಾಗಿ ಸಮರ್ಥರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಅಲ್ಲದೆ, ನಾನು ಯಾವುದೇ ಬಣ ರಾಜಕಕೀಯ ಮಾಡಿಲ್ಲ. ನಾನು ಪಕ್ಷದ ಚೌಕಟ್ಟಿನಲ್ಲೇ ವಕ್ಫ್ ಹೋರಾಟ ಮಾಡಿದ್ದೇವೆ. ಬಿಜೆಪಿ ಪಕ್ಷಕ್ಕೆ ಧಕ್ಕೆಯಾಗುವ ಯಾವ ಕೆಲಸವನ್ನೂ ನಾನು ಮಾಡಿಲ್ಲ ಎಂದು ಯತ್ನಾಳ್ ತಿಳಿಸಿದ್ದಾರೆ ಎನ್ನಲಾಗಿದೆ.

ವಿಜಯೇಂದ್ರ ಬೇಡವೇ ಬೇಡ: ನೋಟಿಸ್‌ಗೆ ಯತ್ನಾಳ್ ನೀಡಿರುವ ಉತ್ತರದಲ್ಲಿ ಬಿವೈ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಜಯೇಂದ್ರ ಸ್ವಜನ ಪಕ್ಷಪಾತ ಮಾಡುತ್ತಿದ್ದು, ಹಿರಿಯರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲ್ಲ. ಇದರಿಂದಲೇ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಕುಟುಂಬ ರಾಜಕಾರಣ ನಿಲ್ಲಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂದೆ ಬರಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಸಂಘಟಿಸಬೇಕು. ಇದಕ್ಕಾಗಿ ರಾಜ್ಯದಲ್ಲಿ ತಕ್ಷಣವೇ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸಬೇಕು ಎಂದು ತಿಳಿಸಿದ್ದಾರೆ. ಬಿಜೆಪಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವವರು, ಈ ರೀತಿಯಲ್ಲಿ ಪಕ್ಷವನ್ನು ಒಗ್ಗಟ್ಟಿನಿಂದ ಮುನ್ನಡೆಸುವವರಿಗೆ ಅವಕಾಶ ಕೊಡಬೇಕು ಎಂದೂ ಯತ್ನಾಳ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ, ಮತ್ತೊಂದೆಡೆ ಸಿಎಂ ವಿರುದ್ಧ ಮುಡಾ ಕೇಸ್, ವಾಲ್ಮೀಕಿ ನಿಗಮದ ಹಗರಣ, ವಕ್ಫ್, ಅಧಿಕಾರಿಗಳು, ಗುತ್ತಿಗೆದಾರರ ಸೂಸೈಡ್ ವಿಚಾರವಾಗಿ ಬಿಜೆಪಿಯಿಂದ ಬೃಹತ್ ಹೋರಾಟ ನಡೆಸಬೇಕಿತ್ತು. ಆದರೆ, ರಾಜ್ಯಾಧ್ಯಕ್ಷರ ವಿಫಲತೆಯಿಂದ ಈ ಹೋರಾಟಗಳು ಸಫಲವಾಗಿಲ್ಲ ಎಂದೂ ಕಾರಣ ನೀಡಿದ್ದಾರೆ.

ಯತ್ನಾಳ್ ಅವರು ಪಕ್ಷದ ನಾಯಕತ್ವದ ವಿಚಾರವಾಗಿ ನೀಡಿದ ಹೇಳಿಕೆ ಆಧರಿಸಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಕಳೆದ ವಾರ ನೋಟಿಸ್ ನೀಡಿತ್ತು. ಇದಕ್ಕೆ 72 ಗಂಟೆಗಳಲ್ಲಿ ಉತ್ತರಿಸುವಂತೆಯೂ ಸೂಚಿಸಿತ್ತು. ಇದಕ್ಕೆ ಯತ್ನಾಳ್ ಅವರು ಪುಟಗಟ್ಟಲೆ ಸವಿಸ್ತಾರವಾದ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಐದು ಪುಟಗಳಷ್ಟು ವಿವರವಾದ ಉತ್ತರ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ 20ರಂದೇ ಬಸನಗೌಡ ಪಾಟೀಲ್ ಯತ್ನಾಳ್ ಬಣ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಲು ಮುಂದಾಗಿದೆ ಎಂದು ತಿಳಿದುಬಂದಿದೆ. ಮತ್ತೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಒತ್ತಾಯಿಸಲು ಪ್ಲ್ಯಾನ್ ಮಾಡಲು ಸಭೆ ಕರೆಯಲಾಗಿದ್ದು, ಇದೇ ವಿಚಾರವಾಗಿ ಚರ್ಚಿಸಲು ಫೆ.20ರಂದು ಬೆಂಗಳೂರಿನಲ್ಲಿರುವ ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲೇ ಸಭೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ಬಿವೈ ವಿಜಯೇಂದ್ರ ಫೆಬ್ರವರಿ 20ರಂದು ಎಲ್ಲವೂ ಸರಿಯಾಗುತ್ತೆ ಎಂದು ಹೇಳಿದ್ದು, ಎರಡೂ ಮಹತ್ವದ ವಿಚಾರಗಳಿಗೆ ಒಂದೇ ದಿನಾಂಕ ನಿಗದಿಯಾಗಿರುವುದು ಕುತೂಹಲ ಮೂಡಿಸಿದೆ.












Click it and Unblock the Notifications