ಬಿವೈ ವಿಜಯೇಂದ್ರ, ಯತ್ನಾಳ್ ಬಣದ ನಾಯಕರಿಗೆ ನೋಟಿಸ್
ಬೆಂಗಳೂರು, ಮಾರ್ಚ್ 26: ಬಿಜೆಪಿಯ ಕೇಂದ್ರ ನಾಯಕರು ಕರ್ನಾಟಕ ಬಿಜೆಪಿ ಬಣ ರಾಜಕೀಯದ ಕುರಿತು ಗಮನ ನೀಡಿದ್ದಾರೆ. ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರಿಗೆ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ಮೂವರು ಶಾಸಕರು, ಇಬ್ಬರು ಮಾಜಿ ಸಚಿವರು ನೋಟಿಸ್ ಪಡೆದಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಣ ಕರ್ನಾಟಕ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಪ್ರಯತ್ನ ನಡೆಸಿದೆ.
ಬಿಜೆಪಿ ಬಣ ರಾಜಕೀಯಕ್ಕೆ ಕಡಿವಾಣ ಹಾಕಲು ಬಿಜೆಪಿ ಮೊದಲು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ನೀಡಿತ್ತು. ಅವರು ದೆಹಲಿಗೆ ತೆರಳಿ ನೋಟಿಸ್‌ಗೆ ಉತ್ತರ ನೀಡಿ ಬಂದಿದ್ದರು. ಈಗ ಯತ್ನಾಳ್ ಮತ್ತು ವಿಜಯೇಂದ್ರ ಬಣದಲ್ಲಿರುವ ನಾಯಕರಿಗೆ ನೋಟಿಸ್ ನೀಡಲಾಗಿದೆ.

ಯಾರು-ಯಾರಿಗೆ ನೋಟಿಸ್?: ಪಕ್ಷದ ಆಂತರಿಕ ವಿಚಾರವನ್ನು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಚರ್ಚೆ ಮಾಡಿದ ಕಾರಣಕ್ಕೆ ಯಶವಂತಪುರ ಶಾಸಕ ಎಸ್. ಟಿ. ಸೋಮಶೇಖರ್, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಹರಿಹರ ಶಾಸಕ ಬಿ. ಪಿ. ಹರೀಶ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರಾದ, ಬಿ. ವೈ. ವಿಜಯೇಂದ್ರ ಬಣದ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಸಹ ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿ ನೋಟಿಸ್‌ನಲ್ಲಿ 72 ಗಂಟೆಗಳಲ್ಲಿ ನಾಯಕರು ನೋಟಿಸ್‌ಗೆ ಉತ್ತರ ನೀಡಬೇಕು ಎಂದು ಸೂಚನೆ ನೀಡಿದೆ. ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಈಗ ಹೈಕಮಾಂಡ್ ನೋಟಿಸ್ ನೀಡಿದ್ದು, ರಾಜ್ಯ ಬಿಜೆಪಿಯ ಚಟುವಟಿಕೆಗಳು ಇನ್ನಷ್ಟು ಬಿರುಸಾಗಲಿವೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಬಣದಲ್ಲಿ ಎಂ. ಪಿ. ರೇಣುಕಾಚಾರ್ಯ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗುರುತಿಸಿಕೊಂಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಬಣದ ಇತರ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ವಿಜಯೇಂದ್ರ ಮತ್ತು ಯಡಿಯೂರಪ್ಪ ಬೆಂಬಲಿಸಲು ಸಮಾವೇಶ ಮಾಡುವ ಸಿದ್ಧತೆಯನ್ನು ರೇಣುಕಾಚಾರ್ಯ ನಡೆಸಿದ್ದರು, ಯಡಿಯೂರಪ್ಪ ಸೂಚನೆಯಂತೆ ಈ ತೀರ್ಮಾನ ಕೈ ಬಿಟ್ಟಿದ್ದರು.
ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಾಯಕರು ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕೆಗಳನ್ನು ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ದೆಹಲಿಯ ತನಕ ಹೋಗಿ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಅಮಿತ್ ಶಾ ಬೆಂಗಳೂರಿಗೆ ಬಂದಾಗ ಯಡಿಯೂರಪ್ಪ, ವಿಜಯೇಂದ್ರ ಜೊತೆ ಈ ಕುರಿತು ಮಾತುಕತೆ ನಡೆಸಿ, ಮಾಹಿತಿ ಸಂಗ್ರಹ ಮಾಡಿದ್ದರು.
ಕೇಂದ್ರಿಯ ಬಿಜೆಪಿ ಘಟಕ ಕೇರಳ ರಾಜ್ಯದ ಅಧ್ಯಕ್ಷರನ್ನು ಬದಲಾವಣೆ ಮಾಡಿದೆ. ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಚಿಂತನೆ ನಡೆಸಿದೆ. ಒಂದೊಂದೆ ರಾಜ್ಯದ ಬಿಜೆಪಿ ಘಟಕದ ಸಮಸ್ಯೆಗಳನ್ನು ಗುರುತಿಸುತ್ತಿದ್ದು, ಕರ್ನಾಟಕ ಬಿಜೆಪಿಯ ಬಣ ರಾಜಕೀಯವನ್ನು ಗಮನಿಸಿ ಈಗ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಮೂವರು ಶಾಸಕರು, ಇಬ್ಬರು ಮಾಜಿ ಸಚಿವರು ಶಿಸ್ತು ಸಮಿತಿ ನೋಟಿಸ್‌ಗೆ ಯಾವ ರೀತಿ ಉತ್ತರ ನೀಡುತ್ತಾರೆ? ಎಂದು ಕಾದು ನೋಡಬೇಕಿದೆ. ಶೋಕಾಸ್ ನೋಟಿಸ್ ಜಾರಿ ಕುರಿತು ಯಾವುದೇ ನಾಯಕರು ಇಲ್ಲಿಯ ತನಕ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications