'ಜನವರಿಯಲ್ಲಿ ರಾಜ್ಯ ಸರ್ಕಾರ ಪತನ; ಮಧ್ಯಂತರ ಚುನಾವಣೆ ನಿಶ್ಚಿತ!'
ಮಂಗಳೂರು, ನವೆಂಬರ್ 06: ನವೆಂಬರ್‌ನಲ್ಲಿ ಯಾರು ಮುಖ್ಯಮಂತ್ರಿ ಆಗ್ತಾರೆ ಅನ್ನೋ ಬಗ್ಗೆ ಬಿಜೆಪಿಗೆ ಸಂಬಂಧ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ನವೆಂಬರ್ ಕ್ರಾಂತಿ ಅನ್ನೋದು ಕಾಂಗ್ರೆಸ್ ನವರೇ ಹುಟ್ಟು ಹಾಕಿರೋದು. ಸದ್ಯದ ಪರಿಸ್ಥಿತಿ ನೋಡಿದರೆ ಜನವರಿಯಲ್ಲಿ ಸರ್ಕಾರ ಪತನವಾಗಿ ಮಧ್ಯಂತರ ಚುನಾವಣೆಯಾಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದೆ ಎಂದು ಬಿಜೆಪಿ ನಾಯಕ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಇಂದು(ಗುರುವಾರ) ಮಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸುನೀಲ್ ಕುಮಾರ್ ಅವರು, ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ಸಂಪೂರ್ಣ ನೆಲಕಚ್ಚಿದ್ದು, ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಗೊಂದಲದಲ್ಲೇ ಆಡಳಿತ ನಡೆಸುವವರು ಕಾಲ ಹರಣ ಮಾಡುತ್ತಿದ್ದಾರೆ. ಗ್ರಾಮ ಮಟ್ಟದಿಂದ ವಿಧಾನಸೌಧತನಕ ಆಡಳಿತ ವ್ಯವಸ್ಥೆ ಕುಸಿದಿದೆ.

ಇವರ ಗೊಂದಲದ ಒಟ್ಟು ವಾತಾವರಣ ನೋಡಿದ್ರೆ ಆಡಳಿತ ಪಕ್ಷದ ಶಾಸಕರು ಬೇರೆ ಬೇರೆ ಗುಂಪಾಗಿ ವಿಂಗಡನೆಯಾಗಿ ಸಭೆ ಮಾಡ್ತಾ ಇದ್ದಾರೆ. ಇದನ್ನೆಲ್ಲಾ ನೋಡಿದರೆ ಜನವರಿ ಹೊತ್ತಿಗೆ ಈ ಸರಕಾರ ಪತನವಾಗುವುದು ಕಣ್ಣ ಮುಂದೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮಧ್ಯಂತರ ಚುನಾವಣೆಗೆ ಸಿದ್ದತೆ ಮಾಡಿಕೊಳ್ತಾ ಇದ್ದೀವಿ. ಬಹುಮತವನ್ನು ರಾಜ್ಯದ ಜನರು ಕೊಟ್ಟಾಗ ಒಳ್ಳೆಯ ಆಡಳಿತದ ನಿರೀಕ್ಷೆ ಮಾಡಿದ್ದೆವು. ಆದರೆ ಅದರ ಬದಲು ಆಂತರಿಕ ಕಚ್ಚಾಟದಲ್ಲಿ ಈ ಸರಕಾರ ಮುಳುಗಿದೆ ಎಂದರು.
ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟು ದೆಹಲಿಗೆ ಹೋಗೋದನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮರೆತು ಬಿಟ್ಟಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರವಿಟ್ಟುಕೊಂಡು ದೆಹಲಿಗೆ ಹೋಗ್ತಾ ಇಲ್ಲ. ಈ ಹಿಂದೆ ಪ್ರಧಾನ ಮಂತ್ರಿ ವಿರುದ್ದ ಪ್ರತಿಭಟನೆಗೆ ವಿಶೇಷ ವಿಮಾನದಲ್ಲಿ ಹೋಗಿದ್ರು. ಈ ಸರಕಾರ ಯಾವಾಗ ಕುಸಿದು ಬೀಳುತ್ತೆ, ಅನ್ನೋದನ್ನ ಜನರು ಕೂಡ ನಿರೀಕ್ಷೆಯಿಂದ ನೋಡ್ತಾ ಇದ್ದಾರೆ. ರಾಜ್ಯದಲ್ಲಿ ಶೇ.80 ಕಮಿಷನ್ ಆಗಿದೆ, ದುಟ್ಟು ಕೊಟ್ಟರೂ ಕೆಲಸ ಆಗದ ವಾತಾವರಣ ಗ್ರಾ.ಪಂ ತನಕ ಬಂದಿದೆ. ಕರಾವಳಿ ಭಾಗದ ಜಿಲ್ಲೆಗಳ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ ಎಂದರು.
ಆರೆಸ್ಸೆಸ್ ವಿರುದ್ದ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ವಿಚಾರ ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಮಾತನಾಡಿ, ಯಾರಿಗೆ ಅಜ್ಞಾನ ಇದ್ಯೋ ಅವರು ಆರೆಸ್ಸೆಸ್ ಬಗ್ಗೆ ನಿರಂತರವಾಗಿ ಮಾತನಾಡುತ್ತಾ ಇರುತ್ತಾರೆ. ಅಜ್ಞಾನಿಗಳ ಹಾಗೂ ಅಪ್ರಬುದ್ದರ ಬಗ್ಗೆ ಹೆಚ್ಚು ಮಾತನಾಡೋದು ಒಳ್ಳೆಯದಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.












Click it and Unblock the Notifications