ಎಚ್‌ಡಿಕೆ ಆಡಿಯೋ ಅಸ್ತ್ರಕ್ಕೆ ಪ್ರತಿಯಾಗಿ ಬಿಜೆಪಿಯಿಂದ ವಿಡಿಯೋ ಬಾಂಬ್
ಬೆಂಗಳೂರು, ಫೆಬ್ರವರಿ 09: ನಿನ್ನೆ ಬಜೆಟ್ ಮಂಡನೆಗೂ ಮುನ್ನಾ ಯಡಿಯೂರಪ್ಪ ಅವರ ಧ್ವನಿ ಹೊಂದಿದೆ ಎನ್ನಲಾಗಿದ್ದ ಆಡಿಯೋ ಒಂದನ್ನು ಬಿಡುಗಡೆ ಮಾಡಿ ಬಿಜೆಪಿಗೆ ಹಿನ್ನಡೆ ಆಗುವಂತೆ ಮಾಡಿದ್ದ ಕುಮಾರಸ್ವಾಮಿ ವಿರುದ್ಧ ಬಿಜೆಪಿಯು ವಿಡಿಯೋ ಬಾಂಬ್ ಅನ್ನು ಪ್ರಯೋಗಿಸಲು ತಯಾರಾಗಿದೆ.
ಮುಖಂಡರೊಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲು ಕುಮಾರಸ್ವಾಮಿ ಅವರು 25 ಕೋಟಿ ಹಣ ಕೇಳಿದ ವಿಡಿಯೋ ನಮ್ಮ ಬಳಿ ಇದ್ದು ಅದನ್ನು ಸೋಮವಾರದಂದು ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಸೋಮವಾರ ಆ ವಿಡಿಯೋವನ್ನು ಸಭಾಧ್ಯಕ್ಷರಿಗೆ ತಲುಪಿಸಿ ಸಿಎಂ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಲಿಂಬಾವಳಿ ಹೇಳಿದ್ದಾರೆ.

ಯಡಿಯೂರಪ್ಪ ಅವರು ಶಾಸಕ ನಾಗನಗೌಡ ಅವರ ಪುತ್ರನೊಂದಿಗೆ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿರುವ ಆಡಿಯೋವನ್ನು ಕುಮಾರಸ್ವಾಮಿ ಅವರು ನಿನ್ನೆ ಬಿಡುಗಡೆ ಮಾಡಿದ್ದರು. ಇದು ರಾಜ್ಯರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ದೆಹಲಿಯಲ್ಲಿ ಸಹ ಈ ವಿಷಯ ಮಾರ್ದನಿಸುತ್ತಿದೆ.
ಎಚ್‌ಡಿಕೆ ಅವರ ಆಡಿಯೋ ಅಸ್ತ್ರದಿಂದ ಬಿಜೆಪಿಗೆ ಹಿನ್ನಡೆ ಆಗಿದ್ದು, ಅದರಿಂದ ಸಾವರಿಸಿಕೊಳ್ಳಲು, ಪ್ರತಿ ದಾಳಿ ಮಾಡಲು ಕುಮಾರಸ್ವಾಮಿ ವಿರುದ್ಧ ವಿಡಿಯೋ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಲು ಮುಂದಾಗಿದೆ.
ಮುಂಚೆ ಜೆಡಿಎಸ್‌ನಲ್ಲಿದ್ದ ಈಗ ಬಿಜೆಪಿ ಸೇರಿರುವ ವಿಜುಗೌಡ ಪಾಟೀಲ್ ಅವರನ್ನು ಎಂಎಲ್‌ಸಿ ಮಾಡಲು ಕುಮಾರಸ್ವಾಮಿ ಅವರು 2013 ರಲ್ಲಿ 25 ಕೋಟಿ ಕೇಳಿದ್ದರು ಎಂದು ಬಿಜೆಪಿ ಆರೋಪ ಹೊರಿಸುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬಿಜೆಪಿ ಹೇಳುತ್ತಿರುವುದು.











Click it and Unblock the Notifications