ಟಿಪ್ಪು ವಿವಾದ : ಸಿದ್ದು ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು
ಬೆಂಗಳೂರು, ನವೆಂಬರ್ 12 : ಟಿಪ್ಪು ಸುಲ್ತಾನ್ ಜನ್ಮದಿನಾಚರಣೆಯ ಸಂದರ್ಭ ಮಡಿಕೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ , ಇದರ ಹೊಣೆ ಹೊತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೆ ರಾಜೀನಾಮೆ ನೀಡಬೇಕು ಎಂದು ಭಾರತೀಯ ಜನತಾ ಪಕ್ಷ ಗುರುವಾರ ಪಟ್ಟುಹಿಡಿದಿದೆ.
ಸಿದ್ದರಾಮಯ್ಯ ಅವರು ವಿಪರೀತ ಪರಿಸ್ಥಿತಿ ಎದುರಾದಾಗ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ಸಂಪೂರ್ಣ ವಿಫಲರಾಗಿದ್ದಾರೆ. ನಾಟಕಕಾರ ಗಿರೀಶ್ ಕಾರ್ನಾಡ್ ಮತ್ತು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ತನಿಖೆಗೂ ಆದೇಶಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸಾಹಿತಿ ಎಂಎಂ ಕಲಬುರ್ಗಿ ಅವರ ಹತ್ಯೆ ಮಾಡಿರುವ ಆರೋಪಿಯನ್ನೂ ಬಂಧಿಸಲು ಸರಕಾರ ವಿಫಲವಾಗಿದೆ ಎಂದು ಬಿಜೆಪಿ ದೂರಿದೆ. ಸಿದ್ದರಾಮಯ್ಯ ಅವರ ಪದಚ್ಯುತಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡುವರೆ ಎಂದು ಬಿಜೆಪಿ ವಕ್ತಾರ ಸಬ್ಮಿತ್ ಪಾತ್ರ ವ್ಯಂಗ್ಯವಾಡಿದ್ದಾರೆ. [ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?]

ಉತ್ತರಪ್ರದೇಶದ ದಾದ್ರಿಯಲ್ಲಿ ವ್ಯಕ್ತಿಯ ಹತ್ಯೆ ಮತ್ತು ದಲಿತ ಮಕ್ಕಳಿಬ್ಬರನ್ನು ಬರ್ಬರವಾಗಿ ಸುಟ್ಟುಹಾಕಿದ ನಂತರ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಆರೋಪಿಸಿ ಸೋನಿಯಾ ಗಾಂಧಿ ಅವರು ರಾಷ್ಟ್ರಭವನದವರೆಗೆ ಪಾದಯಾತ್ರೆ ಮಾಡಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಸಲ್ಲಿಸಿದ್ದರು.
ಕಾರ್ನಾಡ್‌ಗೆ ಜೀವಬೆದರಿಕೆ : ಸರಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅವರ ಬದಲು ಟಿಪ್ಪು ಸುಲ್ತಾನ್ ಅವರ ಹೆಸರು ಇಡಬೇಕಿತ್ತು ಎಂದು ತಮ್ಮ ಅಭಿಪ್ರಾಯ ಮಂಡಿಸಿದ್ದ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಜೀವಬೆದರಿಕೆ ಕರೆ ಬಂದಿತ್ತು. ಎಂಎಂ ಕಲಬುರ್ಗಿಗೆ ಆದ ಗತಿ ನಿಮಗೂ ಆಗುತ್ತದೆ ಎಂದು ಟ್ವಿಟ್ಟರಿನಲ್ಲಿ ಬೆದರಿಕೆ ಒಡ್ಡಲಾಗಿತ್ತು. [700 ಬ್ರಾಹ್ಮಣರನ್ನು ನೇಣಿಗೇರಿಸಿದ್ದ ಟಿಪ್ಪು]












Click it and Unblock the Notifications