Corruption: 25 ವರ್ಷದ ಹಿಂದಿನ ಸಿದ್ದರಾಮಯ್ಯನಾಗಿದ್ದರೆ ರಾಜೀನಾಮೆ ನೀಡಲಿ: ಛಲವಾದಿ
ಬೆಂಗಳೂರು, ನವೆಂಬರ್ 16: ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು. ಇನ್ನೂ ವರ್ಗಾವಣೆ ದಂಧೆ ಮಾಡುತ್ತಿರುವ ಸಿಎಂ ಪುತ್ರ, ಶಾಸಕ ಡಾ.ಯತೀಂದ್ರರನ್ನು ತಕ್ಷಣ ಬಂಧಿಸಬೇಕು ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಸರ್ಕಾರ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯರು ಅಧಿಕಾರ ಮಾಡುತ್ತಿಲ್ಲ. ಜಿಪಿಎ ಹೊಂದಿದ ಡಾ. ಯತೀಂದ್ರರು ಅಧಿಕಾರ ಮಾಡುತ್ತಿದ್ದಾರೆ. ಎಲ್ಲ ತೀರ್ಮಾನಗಳನ್ನು ಯತೀಂದ್ರರೇ ತೆಗೆದುಕೊಳ್ಳುತ್ತಾರೆ. ಕಾನೂನಿನಲ್ಲಿ ಇಂತಹ ವರ್ತನೆಗೆ ಅವಕಾಶ ಇಲ್ಲ ಎಂದರು.

ಪ್ರಮಾಣವಚನಕ್ಕೆ ವಿರುದ್ಧವಾಗಿ ಡಾ.ಯತೀಂದ್ರರಿಂದ ಅಧಿಕಾರ ನಡೆದಿದೆ. ಸಿದ್ದರಾಮಯ್ಯನವರು 25 ವರ್ಷಗಳ ಹಿಂದಿನ ವ್ಯಕ್ತಿ ಆಗಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತಾರೆ. ಪರಿವರ್ತಿತ ಸಿದ್ದರಾಮಯ್ಯ ಆಗಿದ್ದರೆ ಭಂಡತನದಿಂದ ಹೀಗೇ ನಡೆದುಕೊಳ್ಳುತ್ತಾರೆ ಎಂದು ದೂರಿದರು. ಇದೆಲ್ಲ ಕಾರಣಗಳಿಂದ ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.
ಸಿಎಂ ಕುಟುಂಬ ಭ್ರಷ್ಟಾಚಾರದಲ್ಲಿ ತೊಡಗಿದೆ
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ವಿಡಿಯೋವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ರಾಜ್ಯದ ಜನರು ನೋಡುತ್ತಿದ್ದಾರೆ. ಈಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಸೇರಿ ಎಲ್ಲ ಮುಖ್ಯಮಂತ್ರಿಗಳ ಕುಟುಂಬಗಳು ಭ್ರಷ್ಟಾಚಾರದಲ್ಲಿ ತೊಡಗಿದೆ. ಅವರ ಮಕ್ಕಳಿಂದ ಅಧಿಕಾರ ದುರುಪಯೋಗ ಆಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದರು ಎಂದು ವಿವರಿಸಿದರು.

ಡಾ.ಯತೀಂದ್ರರ ಈ ವಿಡಿಯೋ ಬಿಡುಗಡೆ ಆದ ಬಳಿಕ ಈಗ ಸಿದ್ದರಾಮಯ್ಯನವರು ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು. ಸಿಎಸ್‍ಆರ್ ಫಂಡ್‍ಗಾಗಿ ಕೇಳಿದ್ದೆಂದು ಹೇಳಿದ್ದಾರೆ. ಇದು ಅಪ್ಪಟ ಸುಳ್ಳು. ಸಿದ್ದರಾಮಯ್ಯನವರು 25 ವರ್ಷಗಳ ಹಿಂದೆ ಇಷ್ಟು ಸುಳ್ಳುಗಾರ ಆಗಿರಲಿಲ್ಲ. ಆಗಿನ ಅವರ ಕಾರ್ಯವೈಖರಿ, ನಡೆನುಡಿ ಬೇರೆಯಾಗಿತ್ತು. ಕಾಂಗ್ರೆಸ್‌ಗೆ ಸೇರಿದ ಮೇಲೆ ಬಹಳ ಬದಲಾವಣೆ ಆಗಿದೆ ಎಂದು ಟೀಕಿಸಿದರು.
ವರ್ಗಾವಣೆ ದಂಧೆ ಸಾಬೀತಾದರೆ ನಿವೃತ್ತಿ
ವರ್ಗಾವಣೆ ದಂಧೆ ಸಾಭೀತಾದರೆ ನಾನು ರಾಜಕೀಯದಿಂದ ನಿವೃತ್ತಿ ಆಗುವುದಾಗಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಯತೀಂದ್ರ ಸಿದ್ದರಾಮಯ್ಯನವರು ಟ್ರಾನ್ಸ್‍ಫರ್ ದಂಧೆ ಬಗ್ಗೆಯೇ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ವರ್ಗಾವಣೆ ಕುರಿತು ವಿಡಿಯೋದಲ್ಲಿ ಯತೀಂದ್ರ ಮಾತು
ಸಿಎಸ್‍ಆರ್ ಫಂಡ್ ಆಗಿದ್ದರೆ ವಿವೇಕಾನಂದ ಯಾರು? ಮಹದೇವ್ ಅವರಿಗೆ ಫೋನ್ ಮಾಡಿ ನಾನು ಕೊಟ್ಟ 5 ಹೆಸರನ್ನು ಮಾತ್ರ ಮಾಡಬೇಕಿತ್ತು ಎಂದಿದ್ದಾರೆ. ಸಿದ್ದರಾಮಯ್ಯನವರು ವಿಷಯವನ್ನು ತಿರುಚಿ ಸುಳ್ಳು ಹೇಳುತ್ತಿದ್ದಾರೆ. ಈ ವಿಡಿಯೋಗಿಂತ ದೊಡ್ಡ ಸಾಕ್ಷಿ ಏನು ಬೇಕು ಎಂದು ನಾರಾಯಣಸ್ವಾಮಿ ಕೇಳಿದರು.
ಇಷ್ಟು ಮಾತ್ರವಲ್ಲ, ನಿಮ್ಮ ಮಗ ಯತೀಂದ್ರನವರೇ ನಿಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ನಿಮ್ಮ ಕಾರ್ಯದರ್ಶಿ ಮಹದೇವ್‍ರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಂದೆ ಅಧಿಕಾರ ದುರುಪಯೋಗ ಆಗಿರಲಿಲ್ಲ. ನಿಮ್ಮ ಅವಧಿಯಲ್ಲಿ ಸಂಪೂರ್ಣ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರವು ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅವರು ಹೇಳಿದರು.












Click it and Unblock the Notifications