ಸರ್ಕಾರದ ವಿರುದ್ಧ ಹೋರಾಟಕ್ಕೆ ರಾಜ್ಯ ಕೋರ್ ಕಮಿಟಿ ನಿರ್ಧಾರ: ಸಿ ಟಿ ರವಿ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 22: ರಾಜ್ಯ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗೆ ಮೂರು ಪಕ್ಷಗಳು ತಯಾರಿ ನಡೆಸುತ್ತಿದ್ದು, ಕಾಂಗ್ರೆಸ್ ನ ಆಪರೇಷನ್ ಹಸ್ತಕ್ಕೆ ಬಿಜೆಪಿ ಪಾಳಯದಲ್ಲಿ ನಡುಕ ಶುರುವಾಗಿದ್ದು, ಸೋಮವಾರ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯನ್ನ ನಡೆಸಿದ್ದು, ಸರ್ಕಾರದ ವಿರುದ್ದ ಹೋರಾಟಕ್ಕೆ ರಾಜ್ಯ ಕೋರ್ ಕಮಿಟಿ ನಿರ್ಧಾರಿಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸಿ ಟಿ ರವಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅನಿಯಮಿತ ವಿದ್ಯುತ್ ಕಡಿತ ರಾಜ್ಯ ಸರಕಾರದ ಕೊಡುಗೆಯಾಗಿದೆ. ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ಸರಕಾರ ತೊಡಗಿದೆ. ಹುದ್ದೆಗಳನ್ನು ಹರಾಜಿಗೆ ಹಾಕಲಾಗುತ್ತಿದೆ. ವರ್ಗಾವಣೆ ದಂಧೆ ಸಂಬಂಧವಾಗಿ ಶಾಸಕರು ಮತ್ತು ಸಚಿವರ ನಡುವೆ ಜಗಳ ನಡೆಯುತ್ತಿದೆ. ಶಾಸಕರು ಮಂತ್ರಿಗಳ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ವರ್ಗಾವಣೆ ದಂಧೆಯೂ ಪ್ರಮುಖ ಕಾರಣ ಎಂದು ಕಿಡಿಕಾರಿದರು.

ಭ್ರಷ್ಟ್ಟಾಚಾರದ ವಿರುದ್ಧ ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟ್ಟಾಚಾರದಲ್ಲಿ ತೊಡಗಿದೆ. ಎಸ್.ಸಿ.ಎಸ್.ಪಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಇದಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿದ್ದ ಮತ್ತು ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಸೋಷಿಯಲ್ ಮೀಡಿಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಮೊಕದ್ದಮೆ ಹೂಡುತ್ತಿದ್ದಾರೆ. ಈ ಮೂಲಕ ಯಾರು ತನ್ನನ್ನು ಪ್ರಶ್ನಿಸುತ್ತಾರೋ ಅವರ ವಿರುದ್ಧ ಕೇಸು ದಾಖಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿಸಿದರು.
ಇನ್ನೂ ಸರ್ಕಾರದ ಹಲವು ವೈಪಲ್ಯಗಳ ಕುರಿತು ಇದೇ 28ರಂದು ಸೋಮವಾರ ಬೆಂಗಳೂರಿನಲ್ಲಿ ಒಂದು ಹೋರಾಟ ಹಮ್ಮಿಕೊಂಡಿದ್ದೇವೆ. ಇದಲ್ಲದೆ ಸೆಪ್ಟೆಂಬರ್ 8ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸ್ಥಳೀಯ ವಿಚಾರವನ್ನೂ ಮುಂದಿಟ್ಟು ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಬೇಕಿಲ್ಲ. ಈ ಸರಕಾರದ ಕಾರ್ಯವೈಖರಿಗೆ ನಾವೇನೂ ಕನ್ನಡಿ ಹಿಡಿಯಬೇಕಾಗಿಲ್ಲ. ಬಿ.ಆರ್.ಪಾಟೀಲ, ಬಸವರಾಜ ರಾಯರೆಡ್ಡಿಯವರು ಕನ್ನಡ ಹಿಡಿಯುತ್ತಿದ್ದಾರೆ ಎಂದು ಅವರು ನುಡಿದರು. ಹಿರಿಯ ಸಚಿವರು ತಮ್ಮ ಅಸಹನೆಯನ್ನು ಪತ್ರ ಮೂಲಕ ಹೊರಹಾಕುತ್ತಿದ್ದಾರೆ. ಇದೆಲ್ಲವನ್ನೂ ಬಿಜೆಪಿ ಹೋರಾಟದ ವೇಳೆ ಜನರ ಮುಂದಿಡುತ್ತೇವೆ.
ಇಂದಿನ ಕೋರ್ ಕಮಿಟಿ ಸಭೆಯು ಎರಡೂವರೆ ಗಂಟೆಗಳ ಕಾಲ ವಿವಿಧ ವಿಚಾರಗಳ ಕುರಿತು ಚರ್ಚಿಸಿದೆ. ಪ್ರಚಲಿತ ರಾಜಕಾರಣ, ಸಂಘಟನಾತ್ಮಕ ವಿಚಾರಗಳೂ ಒಳಗೊಂಡಂತೆ ಮುಂಬರುವ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ, ಲೋಕಸಭಾ ಚುನಾವಣೆ ಸೇರಿ ವಿವಿಧ ವಿಷಯಗಳ ವಿಸ್ತೃತವಾದ ಚರ್ಚೆ ನಡೆದಿದೆ ಎಂದರು.
40 ಶೇಕಡಾ ಆರೋಪದ ಕುರಿತು ತನಿಖೆ ನಡೆಸಲು ಹಿಂದಿನ ನ್ಯಾಯಾಧೀಶ ಮತ್ತು ಈಗ ವಕೀಲರಾಗಿರುವ ನಾಗಮೋಹನ್‍ದಾಸ್ ಅವರ ಸಮಿತಿಯನ್ನು ನೇಮಿಸಲಾಗಿದೆ. ನಾಗಮೋಹನ್‍ದಾಸ್ ಅವರು ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸುವ ವಿಶ್ವಾಸ ನಮಗಿಲ್ಲ. ದತ್ತಪೀಠದ ವಿಚಾರ ಸೇರಿದಂತೆ ಹಲವು ತನಿಖೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಮರ್ಜಿಗೆ ತಕ್ಕಂತೆ ಕಾರ್ಯನಿರ್ವಹಿಸಿದ್ದರು. ನಮಗೆ ಗೊತ್ತಿರುವ ಪ್ರಕಾರ ಒಂದು ಟೂಲ್‍ಕಿಟ್ ರೂಪದಲ್ಲಿ ನಾಗಮೋಹನ್‍ದಾಸ್ ಸಮಿತಿ ರಚಿಸಿದ್ದಾರೆ ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳು ಕಳೆದಿದೆ. ವಿದ್ಯುತ್ ದರ ಎರಡು ಪಟ್ಟು ಏರಿಕೆ ಆಗಿದೆ. ಇದರಿಂದ ಉತ್ಪಾದನೆ ಮೇಲೆ ಹೊಡೆತ ಬೀಳುತ್ತಿದೆ. 200 ಯೂನಿಟ್‍ಗಿಂತ ಹೆಚ್ಚು ಬಳಸುವವರಿಗೆ ವಿದ್ಯುಚ್ಛಕ್ತಿ ದುಬಾರಿಯಾಗಿದೆ. ಹಿಂದೆ 5 ಸಾವಿರ ಬಿಲ್ ಬರುವವರಿಗೆ 10 ಸಾವಿರ ಬಿಲ್ ಬರುತ್ತಿದೆ ಎಂದು ಕಿಡಿಕಾರಿದರು.












Click it and Unblock the Notifications