ಕರ್ನಾಟಕದ ಬಿಟ್ ಕಾಯಿನ್ ಹಗರಣ, ಪೊಲೀಸರಿಗೆ ಹಿನ್ನಡೆ
ಬೆಂಗಳೂರು, ಜುಲೈ 04: ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಬಹುಕೋಟಿ ರೂಪಾಯಿ ಬಿಟ್ ಕಾಯಿನ್ ಹಗರಣದಲ್ಲಿ ಪೊಲೀಸರಿಗೆ ಭಾರಿ ಹಿನ್ನಡೆಯಾಗಿದೆ. ಪ್ರಮುಖ ಆರೋಪಿ ಶ್ರೀಕಿ ಮತ್ತು ರಾಬಿನ್ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000) ಅಡಿಯಲ್ಲಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇದರಿಂದಾಗಿ ಕಾನೂನು ಹೋರಾಟದಲ್ಲಿ ಸಿಐಡಿ ಪೊಲೀಸರಿಗೆ ಮುಖಭಂಗವಾಗಿದೆ. ಜತೆಗೆ ಇದು ಇತರೆ ಪ್ರಕರಣಗಳಲ್ಲಿ ಕೋಕಾ ವಿಧಿಸುವಾಗ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದಕ್ಕೆ ಎಚ್ಚರಿಕೆ ಗಂಟೆಯಾಗಿದೆ.

ಕೋಕಾ ಅನ್ವಯಗೊಳಿಸಿದ್ದನ್ನು ಪ್ರಶ್ನಿಸಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ಹಾಗೂ ಪಶ್ಚಿಮ ಬಂಗಾಳದ ರಾಬಿನ್ ಖಂಡೇಲ್‌ವಾಲಾ ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ, ಕೋಕಾ ಕಾಯ್ದೆ ಅಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಿತು.
ಅರ್ಜಿದಾರರ ಪರ ಹಿರಿಯ ವಕೀಲರು, "ಆರೋಪಿಗಳಿಗೆ ಜಾಮೀನು ದೊರೆಯಬಾರದು ಎಂಬ ದುರುದ್ದೇಶದಿಂದ ಕೋಕಾ ಕಾಯ್ದೆಯನ್ನು ಕಾನೂನುಬಾಹಿರವಾಗಿ ಅನ್ವಯಿಸಲಾಗಿದೆ. ಈಗಾಗಲೇ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಈ ಪ್ರಕರಣದಲ್ಲಿ ಸಂಜ್ಞೇಯ ಅಪರಾಧ ದಾಖಲಿಸುವ ಮುನ್ನ ಪಾಲಿಸಬೇಕಾದ ಕಾನೂನು ಪಾಲನೆ ಆಗಿಲ್ಲ. ಆದ್ದರಿಂದ ಕೋಕಾ ಕಾಯ್ದೆ ರದ್ದುಪಡಿಸಬೇಕು" ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಇಬ್ಬರೂ ಆರೋಪಿಗಳ ವಿರುದ್ಧದ ಕೋಕಾ ಕಾಯ್ದೆ ರದ್ದುಗೊಳಿಸಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: ಬಿಟ್ ಕಾಯಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪೊಲೀಸರು ನ್ಯಾಯಾಲಯಕ್ಕೆ, 'ಅಪರಾಧ ನಡೆದಿರುವುದು ನಿಜ. ಆದರೆ ಯಾರು ಅಪರಾಧಿಗಳು ಎಂಬುದು ಪತ್ತೆಯಾಗಿಲ್ಲ ಎಂದು 'ಸಿ' ಅಂತಿಮ ವರದಿ ಸಲ್ಲಿಸಿದ್ದರು.
ನಂತರ ಇದನ್ನು ಸೈಬರ್ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 2023ರಲ್ಲಿ ಜುಲೈನಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತದನಂತರ ಶ್ರೀಕಿಯನ್ನು ಬಂಧಿಸಿದ್ದ ಪೊಲೀಸರು ಶ್ರೀಕಿಯ ಸ್ವ-ಇಚ್ಛಾ ಹೇಳಿಕೆ ಅನುಸಾರ ಕೋಕಾ ಕಾಯ್ದೆ ಅನ್ವಯಗೊಳಿಸಿ ರಾಬಿನ್ ಅನ್ನು ಬಂಧಿಸಿದ್ದರು. ಸಿಐಡಿ ತನಿಖೆ ನಡೆಸಿ ಆರೋಪಪಟ್ಟಿಯನ್ನು ಸಲ್ಲಿಸಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡಿತ್ತು. ಆಗ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಟ್ ಕಾಯಿನ್ ಹಗರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್‌ಐಟಿ)ಗೆ ವಹಿಸಿತು.
ಬಿಟ್ ಕಾಯಿನ್ ಹಗರಣದಲ್ಲಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕಿ ಮತ್ತು ಇತರರ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ದಾಖಲಾಗಿದ್ದ ಬಿಟ್ ಕಾಯಿನ್ ಅಕ್ರಮ ಹಗರಣವನ್ನು ಎಸ್‌ಐಟಿ ಮತ್ತೆ ವಿಚಾರಣೆ ನಡೆಸುತ್ತಿದೆ. ಈ ಹಿಂದೆ ಈ ಪ್ರಕರಣದ ಕುರಿತು ಸಿಸಿಬಿಯ ಇನ್ಸ್‌ಪೆಕ್ಟರ್ ಶ್ರೀಧರ್ ಪೂಜಾರ್ ನೇತೃತ್ವದ ತಂಡ ಶ್ರೀಕಿ ಹಾಗೂ ಇತರರ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 2021ರ ಫೆಬ್ರವರಿ 22ರಂದು 757 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದರು.












Click it and Unblock the Notifications