ಕೋವಿಡ್‌ನಿಂದ ಚೇತರಿಸಿಕೊಂಡ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅನುಭವ ಹೇಗಿತ್ತು?
ಬೆಂಗಳೂರು, ಸೆಪ್ಟೆಂಬರ್ 1: ಕಳೆದ ತಿಂಗಳು ಕೊರೊನಾ ವೈರಸ್ ಸೋಂಕಿಗೆ ಒಳಪಟ್ಟಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಕೋವಿಡ್-19ಕ್ಕೆ ಒಳಗಾದ ನಂತರದ ತಮ್ಮ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.
Recommended Video
ಆಗಸ್ಟ್ 16ರ ಸಂಜೆಯಿಂದ ಸಣ್ಣನೆಯ ಜ್ವರದ ಅನುಭವ ಆಗುತ್ತಿತ್ತು. ಇದು ನನ್ನ ಮೊದಲ ಕೋವಿಡ್ ಲಕ್ಷಣ. ಜೂನ್‌ನಲ್ಲಿಯೂ ಇದೇ ರೀತಿಯ ಲಕ್ಷಣ ಕಂಡುಬಂದಿತ್ತು. ಆದರೆ ಆಗ ನೆಗೆಟಿವ್ ವರದಿಯಾಗಿತ್ತು. ಹೀಗಾಗಿ ನಾನು ಕ್ರೋಸಿನ್ ತೆಗೆದುಕೊಂಡೆ. ಇಷ್ಟು ಸಾಕು ಎಂದು ನಾನು ಭಾವಿಸಿದ್ದೆ. ಮರುದಿನ ಬೆಳಿಗ್ಗೆಯೂ ನನಗೆ ಜ್ವರದ ಅನುಭವ ಮುಂದುವರಿದಿತ್ತು ಮತ್ತು ನನ್ನ ದೇಹದ ಉಷ್ಣಾಂಶ 99 ಡಿಗ್ರಿ ಇತ್ತು.
ಹೀಗಾಗಿ ನಾನು ಮತ್ತು ನನ್ನ ಇಡೀ ಮನೆಯವರನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಿದೆ. ಮನೆಯಲ್ಲಿ ಕ್ಯಾನ್ಸರ್ ವಿರುದ್ಧ ಗೆದ್ದಿದ್ದ 89 ವರ್ಷದ ನನ್ನ ಅಮ್ಮ ಮತ್ತು ಕ್ಯಾನ್ಸರ್ ರೋಗಿಯಾಗಿರುವ 71 ವರ್ಷದ ನನ್ನ ಗಂಡ ಇದ್ದಿದ್ದರಿಂದ ನನ್ನ ಚಿಂತೆ ಹೆಚ್ಚಾಗಿತ್ತು. ನಾನು ಕೂಡಲೇ ಪ್ರತ್ಯೇಕವಾದ ಕೊಠಡಿಯಲ್ಲಿ ಸ್ವಯಂ ಕ್ವಾರೆಂಟೈನ್‌ಗೆ ಒಳಗಾದೆ. ಮತ್ತು ನನ್ನ ತಪಾಸಣೆಯ ಪರೀಕ್ಷೆಗಾಗಿ ಚಡಪಡಿಸುತ್ತಾ ಕಾದಿದ್ದೆ. ಮುಂದೆ ಓದಿ...

ಕರುಣೆ ತೋರಿದ ವೈರಸ್
ಸಂಜೆ 5 ಗಂಟೆಗೆ ನನಗೆ ಕರೆ ಬಂತು. ನನ್ನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಇರುವುದಾಗಿ ತಿಳಿಸಿದರು. ಆದರೆ ನನ್ನ ಸಿಬ್ಬಂದಿ ಸೇರಿದಂತೆ ಮನೆಯಲ್ಲಿನ ಎಲ್ಲರಲ್ಲಿಯೂ ನೆಗೆಟಿವ್ ಬಂದಿತ್ತು. ಆ ವೈರಸ್ ದಯೆಯಿಂದ ನನ್ನ ಅಮ್ಮ ಮತ್ತು ಪತಿಯನ್ನು ಬಿಟ್ಟುಬಿಟ್ಟಿತ್ತು.
ನನ್ನಲ್ಲಿನ ವೈರಾಣು ಸ್ಥಿತಿಯ ಮಟ್ಟವನ್ನು ತಿಳಿಯಲು ಸಿ.ಟಿ (ಸೈಕಲ್ ಥ್ರೆಶೋಲ್ಡ್) ಕೇಳಿದೆ. ಅದರಲ್ಲಿ 23 ಂದು ತೋರಿಸಿದ್ದರಿಂದ ಮನೆಯಲ್ಲಿಯೇ ಟೆಲಿ ಸೂಪರ್‌ವಿಷನ್ ಮೂಲಕ ಕ್ವಾರೆಂಟೈನ್ ಆಗಿ ಇದ್ದರೂ ಸುರಕ್ಷಿತವಾಗಿರಬಹುದು ಎಂದು ಅಂದುಕೊಂಡೆ.

ತೆಗೆದುಕೊಂಡ ಔಷಧಗಳು
ಬೆಂಗಳೂರಿನ ನಾರಾಯಣ ಹೆಲ್ತ್‌ನ ಡಾ. ಮುರಳಿ ಮೋಹನ್ ಮತ್ತು ಮುಂಬೈನ ಲೀಲಾವತಿ ಆಸ್ಪತ್ರೆಯ ಡಾ. ಶಶಾಂಕ್ ಜೋಷಿ ಇಬ್ಬರೂ ನನ್ನ ಮುಖ್ಯ ವೈದ್ಯಕೀಯ ಉಸ್ತುವಾರಿಗಳಾಗಿದ್ದರು. ನನಗೆ ಫವಿಪಿರಾವಿರ್, ಅಜಿಥ್ರೋಮಿಸಿನ್ ಮತ್ತು ಪ್ಯಾರಾಸಿಟಾಮಲ್ ಮಾತ್ರೆಗಳನ್ನು ನೀಡಿದ್ದರು. ಇದರ ಜತೆಗೆ ವಿಟಮಿನ್ ಸಿ, ಡಿ, ಜಿಂಕ್ ಬೇಬಿ ಆಸ್ಪಿರಿನ್ ಮತ್ತು ಚ್ಯವನಪ್ರಾಶ್ ಅನ್ನು ದಿನವೂ ತೆಗೆದುಕೊಳ್ಳುತ್ತಿದ್ದೆ. ವಾರಕ್ಕೆ ಎರಡು ಡೋಸ್ 200 ಎಂಜಿ ಎಚ್‌ಸಿಕ್ಯೂ ಇತ್ತು.
2 ಮತ್ತು 3ನೇ ದಿನ ವಿಶೇಷವೇನೂ ಇರಲಿಲ್ಲ. ದಿನಕ್ಕೆ ಆರು ಬಾರಿ ನನ್ನ ಆಕ್ಸಿಜನ್ ಮಟ್ಟ ಪರೀಕ್ಷಿಸಿಕೊಳ್ಳುತ್ತಿದ್ದೆ. ಆರು ನಿಮಿಷದ ಬಿರುಸಿನ ನಡಿಗೆ ಬಳಿಕವೂ ಅದು 96-98% ಇರುತ್ತಿತ್ತು. ಮೂರನೇ ದಿನದ ಸಂಜೆವರೆಗೆ ನನ್ನ ಉಷ್ಣಾಂಶ ಸಹಜವಾಗಿತ್ತು. ಆದರೆ ಸಣ್ಣನೆಯ ಜ್ವರ 4 ಮತ್ತು 5ನೇ ದಿನದವರೆಗೂ ಇತ್ತು. ಆಗಾಗ ಬೆವರುವುದು ನನ್ನ ದೇಹ ವೈರಸ್ ಜತೆಗೆ ಹೋರಾಡುವುದನ್ನು ತಿಳಿಸುತ್ತಿತ್ತು.

12 ದಿನದವರೆಗೂ ಪಾಸಿಟಿವ್ ಇತ್ತು
ನನ್ನ ಸಿಆರ್‌ಪಿ ಮಟ್ಟ 0.5ಕ್ಕಿಂತ ಕಡಿಮೆಯಿತ್ತು. ಇದರಿಂದ ಬೇರೆ ಯಾವುದೇ ಉರಿಯೂತದ ಲಕ್ಷಣಗಳಿರಲಿಲ್ಲ. ಆರೋಗ್ಯದ ಬೇರೆ ಎಲ್ಲ ತಪಾಸಣೆಗಳಲ್ಲಿಯೂ ಯಾವುದೇ ತೊಂದರೆ ಕಂಡುಬಂದಿರಲಿಲ್ಲ. ಆರನೇ ದಿನದಿಂದ ಸ್ವಲ್ಪ ಚೇತರಿಕೆ ಕಂಡುಬರತೊಡಗಿತು. 10ನೇ ದಿನದ ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿಯೇ ಇದ್ದರೂ ಸಿಟಿ ಮೌಲ್ಯ 33ಕ್ಕೆ ತಲುಪಿತ್ತು. ಇದರಿಂದ ವೈರಸ್‌ನ ಶಕ್ತಿ ಕುಂದಿರುವುದು ಗೊತ್ತಾಯಿತು. 9ನೇ ದಿನ ಆಂಟಿಬಾಡಿಗಳು ಮತ್ತು ಟಿ-ಸೆಲ್‌ಗಳಿಗಾಗಿ ರಕ್ತ ಪರೀಕ್ಷೆ ಮಾಡಿಸಿಕೊಂಡೆ. 12ನೆಯ ದಿನದ ಪರೀಕ್ಷೆಯಲ್ಲಿಯೂ ಪಾಸಿಟಿವ್ ಬಂದಿತು. ಆದರೆ ಸಿಟಿ ಮೌಲ್ಯ 36ಕ್ಕೆ ಏರಿತ್ತು. ಅಲ್ಲಿಂದ ನಾನು ವೈರಸ್‌ನಿಂದ ಮುಕ್ತಿ ಹೊಂದುತ್ತಾ ಬಂದೆ.

ಸಣ್ಣ ಲಕ್ಷಣವಿದ್ದರೂ ಪರೀಕ್ಷಿಸಿ
ನನ್ನ ಅನುಭವ ಅಷ್ಟೇನೂ ತೀವ್ರವಾಗಿರಲಿಲ್ಲ ಮತ್ತು ವಿಶೇಷದ್ದಾಗಿರಲಿಲ್ಲ. ವಾಸನೆ ಅಥವಾ ರುಚಿ ಶಕ್ತಿ ಕಳೆಯುವಂಥದ್ದೇನೂ ಆಗಿರಲಿಲ್ಲ. ಆಕ್ಸಿಜನ್ ಸೇವನೆಯಲ್ಲಿಯೂ ಇಳಿಕೆಯಾಗಿರಲಿಲ್ಲ. ಸಣ್ಣ ಪ್ರಮಾಣದ ಫ್ಲೂ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ವೈರಾಣುವಿನ ಪ್ರಮಾಣಕ್ಕೆ ತಕ್ಕಂತೆ ಆಸ್ಪತ್ರೆಗೆ ದಾಖಲು ಅಥವಾ ಹೋಮ್ ಕ್ವಾರೆಂಟೈನ್‌ಗೆ ಒಳಗಾಗುವುದನ್ನು ಆಯ್ದುಕೊಳ್ಳಿ. 20ಕ್ಕಿಂತ ಕಡಿಮೆ ಸಿ.ಟಿ ಮಟ್ಟವಿದ್ದರೆ ಮನೆ ಐಸೋಲೇಷನ್ ಖಂಡಿತಾ ಬೇಡ. ದಿನಕ್ಕೆ ಹಲವು ಬಾರಿ ಆಕ್ಸಿಜನ್ ಪ್ರಮಾಣವನ್ನು ಗಮನಿಸುವುದು ವೈರಸ್ ವಿರುದ್ಧದ ಮಾನಸಿಕ ಹೋರಾಟದ ನಿಮ್ಮ ನೈತಿಕ ಶಕ್ತಿ ಹೆಚ್ಚಿಸಲು ಅಗತ್ಯ.

ನೆಗೆಟಿವ್ ಸುದ್ದಿಗಳಿಂದ ದೂರ ಇರಿ
ನಿಮ್ಮ ದೇಹವನ್ನು ಸದೃಢವಾಗಿರಿಸಿಕೊಳ್ಳಲು ಸಣ್ಣ ನಡಿಗೆ ಅಥವಾ ವ್ಯಾಯಾಮ ಮಾಡಿ. ನನಗೆ ಹಸಿವು ಕಡಿಮೆಯಾದ ಯಾವುದೇ ಅನುಭವ ಆಗಲಿಲ್ಲ. ಹಣ್ಣು, ತರಕಾರಿ, ಧಾನ್ಯಗಳಂತಹ ಆಹಾರ ಸೇವನೆಗೆ ನಾನು ಸಲಹೆ ನೀಡುತ್ತೇನೆ. ಸೂಪ್ ಮತ್ತು ಸಲಾಡ್‌ಗಳು ನನ್ನ ದೈನಂದಿನ ಊಟದಲ್ಲಿ ಸಾಮಾನ್ಯವಾಗಿರುತ್ತಿದ್ದವು. ಈ ಸಮಯದಲ್ಲಿ ನೆಟ್‌ಪ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ನನ್ನ ಸಂಗಾತಿಗಳಾಗಿದ್ದವು. ಕೋವಿಡ್-19 ವಿರುದ್ಧದ ಹೋರಾಟದ ವೇಳೆ ಟಿವಿ ಮತ್ತು ಸಾಮಾಜಿಕ ಜಾಲತಾಣಗಳು ನೆಗೆಟಿವ್ ಸುದ್ದಿಗಳನ್ನು ನೀಡುವುದರಿಂದ ಅವುಗಳಿಂದ ದೂರ ಇರುವುದು ಒಳಿತು.

ಗಮನಿಸಬೇಕಾದ ಅಂಶಗಳು
* ಪಾಸಿಟಿವ್ ಬಂದರೆ ಭಯಪಡಬೇಡಿ.
* ಸಿ.ಟಿ ವ್ಯಾಲ್ಯೂ ಆಧಾರದಲ್ಲಿ ನಿಮ್ಮಲ್ಲಿನ ವೈರಾಣು ಮಟ್ಟವನ್ನು ತಿಳಿದುಕೊಳ್ಳಿ
* ಸಣ್ಣ ಲಕ್ಷಣಗಳು ಮತ್ತು ಅಲ್ಪ ವೈರಾಣು ಗುಣಮಟ್ಟವಿದ್ದರೆ ಮನೆಯಲ್ಲಿಯೇ ಪ್ರತ್ಯೇಕವಾಗಿಇರಬಹುದು.
* ದಿನಕ್ಕೆ ಹಲವು ಬಾರಿ ಆಕ್ಸಿಜನ್ ಮಟ್ಟ ಪರಿಶೀಲಿಸಿ. ಅದು ಶೇ 95ಕ್ಕಿಂತ ಕಡಿಮೆ ಹೋಗದಂತೆ ನೋಡಿಕೊಳ್ಳಿ.
* ಟೆಲಿ-ಹೆಲ್ತ್ ಕಾರ್ಯಕ್ರಮದ ಮೂಲಕ ವೈದ್ಯರ ಉಸ್ತುವಾರಿ ಇರಲಿ.
* ಸಾಧ್ಯವಾದಷ್ಟು ಯೋಗ ಮತ್ತು ನಡಿಗೆ ಮಾಡಿ ಎಂದು ಕಿರಣ್ ಮಜುಂದಾರ್ ಶಾ ಮಾಹಿತಿ ನೀಡಿದ್ದಾರೆ.












Click it and Unblock the Notifications