16 ವರ್ಷಗಳ ಬಳಿಕ ಬೀದರ್-ಕಲಬುರಗಿ ರೈಲ್ವೆ ಮಾರ್ಗ ಪೂರ್ಣ!
ಬೀದರ್, ಅಕ್ಟೋಬರ್ 25 : ಬೀದರ್-ಕಲಬುರಗಿ ರೈಲು ಮಾರ್ಗ ಲೋಕಾರ್ಪಣೆಗೆ ಸಿದ್ಧವಾಗಿದೆ. ಈ ಮಾರ್ಗದಲ್ಲಿ ರೈಲುಗಳ ಸಂಚಾರ ಆರಂಭವಾದರೆ ದೆಹಲಿ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವಿನ ಪ್ರಯಾಣದಲ್ಲಿ 380 ಕಿ.ಮೀ.ಗಳು ಉಳಿತಾಯವಾಗಲಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೀದರ್‌ನಲ್ಲಿ ಅಕ್ಟೋಬರ್ 29ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ರೈಲು ಮಾರ್ಗ ಲೋಕಾರ್ಪಣೆಗೊಂಡ ಬಳಿಕ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಗೊಳ್ಳುವ ನಿರೀಕ್ಷೆ ಇದೆ.
104 ಕಿ.ಮೀ. ಉದ್ದದ ಬೀದರ್-ಕಲಬುರಗಿ ರೈಲು ಮಾರ್ಗ ಈ ಭಾಗದ ಜನರ ದಶಕಗಳ ಕನಸು. ಕುಂಟುತ್ತಾ ಸಾಗಿದ್ದ ಕಾಮಗಾರಿ ಈಗ ಪೂರ್ಣಗೊಂಡಿದೆ. ಈ ರೈಲು ಮಾರ್ಗದಲ್ಲಿ 2 ಕಿ.ಮೀ.ಸುರಂಗ ಮಾರ್ಗವೂ ಸೇರಿದೆ. ಬೀದರ್ ಮತ್ತು ಕಲಬುರಗಿ ನಡುವೆ 13 ನಿಲ್ದಾಣಗಳಿವೆ.
2000ದಲ್ಲಿ ಅಂದಿನ ರೈಲ್ವೆ ಸಚಿವ ಬಂಗಾರು ಲಕ್ಷ್ಮಣ್ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಮೊದಲು 369.7 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಸದ್ಯ, ಯೋಜನೆ ಪೂರ್ಣಗೊಳ್ಳುವಾಗ ಯೋಜನಾ ವೆಚ್ಚ 1, 542 ಕೋಟಿಗೆ ಏರಿಕೆಯಾಗಿದೆ.

ಬಜೆಟ್‌ನಲ್ಲಿ ಬಂದ ಹಣವೆಷ್ಟು?
2000ದಲ್ಲಿ ಯೋಜನೆಗೆ ಶಂಕುಸ್ಥಾಪನೆಯಾಯಿತು. 2000-01ರ ಬಜೆಟ್‌ನಲ್ಲಿ 5 ಕೋಟಿ, 2001-02ರಲ್ಲಿ 10 ಕೋಟಿ, 2002-03ರಲ್ಲಿ 15 ಕೋಟಿ, 2003-04 ರಲ್ಲಿ 15 ಕೋಟಿ, 2004-05ರಲ್ಲಿ ಯೋಜನೆಗೆ 10 ಕೋಟಿ ರೂ. ಅನುದಾನ ಮಂಜೂರಾಯಿತು. ಆದರೂ ಕಾಮಗಾರಿ ಕುಂಟುತ್ತಾ ಸಾಗಿತು.

ಭೂಮಿ ಸಿಗುವುದು ಕಷ್ಟವಾಯಿತು
ಬೀದರ್-ಕಲಬುರಗಿ ಮಾರ್ಗ ವಿಳಂಬವಾಗಲು ಭೂ ಸ್ವಾಧೀನವೂ ಪ್ರಮುಖ ಕಾರಣವಾಗಿದೆ. ಕಲಬುರಗಿ ಭಾಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು. ಇದೇ ಮಾರ್ಗದಲ್ಲಿ ಬರುವ ಬೀದರ್-ಹುಮನಾಬಾದ್ ಮಾರ್ಗವೂ 3 ವರ್ಷದ ಹಿಂದೆ ಸಂಚಾರ ಆರಂಭಿಸಿತ್ತು.

ರೈತರು ಕೋರ್ಟ್ ಮೆಟ್ಟಿಲೇರಿದರು
ಕಲಬುರಗಿ ಭಾಗದಲ್ಲಿ ರೈತರು ಹೆಚ್ಚಿನ ಪರಿಹಾರ ನೀಡಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದರು. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾದ ಬಳಿಕ ಯೋಜನೆಗೆ ವೇಗ ಸಿಕ್ಕಿತು. ಅಗತ್ಯ ಅನುದಾನಗಳನ್ನು ಬಿಡುಗಡೆ ಮಾಡಿ ಅವರು ಯೋಜನೆ ಪೂರ್ಣಗೊಳ್ಳಲು ಸಹಕಾರ ನೀಡಿದರು.

ಸುರಂಗ ಮಾರ್ಗದಿಂದ ವಿಳಂಬ
ಈ ಮಾರ್ಗದಲ್ಲಿ 2 ಕಿ.ಮೀ.ಸುರಂಗ ಮಾರ್ಗವಿದೆ. ಮಾರಗುತ್ತಿ ಸುರಂಗ ಮಾರ್ಗ ನಿರ್ಮಾಣ ಮಾಡುವಾಗ ಎದುರಾದ ಸಮಸ್ಯೆಗಳಿಂದಾಗಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಯಿತು. ಎಲ್ಲಾ ಅಡೆ-ತಡೆ ಮೀರಿ ಈಗ ಯೋಜನೆ ಪೂರ್ಣಗೊಂಡು ಲೋಕಾರ್ಪಣೆಗೆ ಸಜ್ಜಾಗಿದೆ.

ಹಸಿರು ನಿಶಾನೆ ತೋರಿಸಲಿದ್ದಾರೆ ಮೋದಿ
'ಅಕ್ಟೋಬರ್ 29ರಂದು ಸಂಜೆ 4 ಗಂಟೆಗೆ ಬೀದರ್‌ನಲ್ಲಿ ನಡೆಯುವ ಕಾರ್ಯಕ್ರದಲ್ಲಿ ರೈಲು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ' ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಾಬುರಾವ್ ಚೌವ್ಹಾಣ್ ಹೇಳಿದ್ದಾರೆ.












Click it and Unblock the Notifications