ಬೀದರ್ ಉಪ ಚುನಾವಣೆ : ಸೂರ್ಯಕಾಂತ್‌ಗೆ ಬಿಜೆಪಿ ಟಿಕೆಟ್?

Posted By:
Subscribe to Oneindia Kannada

ಬೀದರ್, ಜನವರಿ 22 : ಬೀದರ್ ಉಪ ಚುನಾವಣೆ ಕಣ ರಂಗೇರುತ್ತಿದ್ದು ಬಿಜೆಪಿ ಅಭ್ಯರ್ಥಿ ಯಾರು? ಎಂಬ ಕುತೂಹಲಕ್ಕೆ ತೆರೆ ಬಿದ್ದಿಲ್ಲ. ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಧಾರ ತಿಳಿಸಲು ಪಕ್ಷ, ಸೂರ್ಯಕಾಂತ್ ನಾಗಮಾರಪಲ್ಲಿ ಅವರಿಗೆ ಶುಕ್ರವಾರ ಸಂಜೆಯವರೆಗೆ ಗಡುವು ನೀಡಿದೆ.

ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಫೆ.13ರಂದು ಚುನಾವಣೆ ನಡೆಯಲಿದೆ. ಗುರುಪಾದಪ್ಪ ನಾಗಮಾರಪಲ್ಲಿ ಅವರ ಪುತ್ರ ಸೂರ್ಯಕಾಂತ್ ನಾಗಮಾರಪಲ್ಲಿ ಅವರಿಗೆ ಟಿಕೆಟ್ ನೀಡಲು ಪಕ್ಷ ಬಯಸಿದೆ. [ಉಪ ಚುನಾವಣೆ ವೇಳಾಪಟ್ಟಿ]

Suryakanth Nagamarapalli

ಆದರೆ, ಸೂರ್ಯಕಾಂತ್ ನಾಗಮಾರಪಲ್ಲಿ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ಅಂತಿಮ ನಿರ್ಧಾರ ತಿಳಿಸಿಲ್ಲ. ಅವರು ಕಾಂಗ್ರೆಸ್ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ, ಬಿಜೆಪಿ ಶುಕ್ರವಾರ ಸಂಜೆಯೊಳಗೆ ನಿರ್ಧಾರ ತಿಳಿಸುವಂತೆ ಅವರಿಗೆ ಸೂಚಿಸಿದೆ. [ಹೆಬ್ಬಾಳ ಉಪ ಚುನಾವಣೆ : ಅಭ್ಯರ್ಥಿ ಆಯ್ಕೆ ಕಸರತ್ತು ಮುಗಿದಿಲ್ಲ!]

ಯಾರು ಅಭ್ಯರ್ಥಿ? : ಒಂದು ವೇಳೆ ಸೂರ್ಯಕಾಂತ್ ನಾಗಮಾರಪಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದರೆ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ಬಿಜೆಪಿಯ ಅಭ್ಯರ್ಥಿಯಾಗಲಿದ್ದಾರೆ. ಸೋಮವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿಯೂ ಪ್ರಕಾಶ್ ಖಂಡ್ರೆ ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.[ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ]

ಸ್ಪರ್ಧಿಸಲು ಹಿಂದೇಟು ಏಕೆ? : ಉಪಚುನಾವಣೆಗೆ ಸ್ಪರ್ಧಿಸುವ ಕುರಿತು ಸೂರ್ಯಕಾಂತ ನಾಗಮಾರಪಲ್ಲಿ ಅವರು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದರೆ, ಆಡಳಿತದಲ್ಲಿರುವ ಕಾಂಗ್ರೆಸ್ ಅವರ ಕುಟುಂಬದ ಮೇಲಿರುವ ಪ್ರಕರಣಗಳನ್ನು ಕೆದಕಿ ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಉಪ ಚುನಾವಣೆಯಲ್ಲಿ ಜಯಗಳಿಸಿದರೆ ಎರಡು ವರ್ಷ ಶಾಸಕರಾಗಿರಬಹುದು, ಮತ್ತೆ ಚುನಾವಣೆ ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದಾಗಿ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP has offered a ticket for Suryakanth Nagamarapalli in Bidar constituency by poll scheduled on February 13, 2016.
Please Wait while comments are loading...