Bharat Bandh; ಶುಕ್ರವಾರ ರಸ್ತೆಗಿಳಿಯುವ ಮುನ್ನ ತಿಳಿಯಿರಿ
ಬೆಂಗಳೂರು, ಫೆಬ್ರವರಿ 15: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಮುಂದುವರೆದಿದೆ. ರೈತ ಸಂಘಟನೆಗಳು ಫೆಬ್ರವರಿ 16ರ ಶುಕ್ರವಾರ ಭಾರತ್ ಬಂದ್‌ಗೆ ಕರೆ ನೀಡಿವೆ. ಕರ್ನಾಟಕದಲ್ಲಿಯೂ ಸಹ ಬಂದ್‌ಗೆ ಬೆಂಬಲ ಘೋಷಣೆ ಮಾಡಲಾಗಿದೆ. ಆದ್ದರಿಂದ ಶುಕ್ರವಾರ ರಸ್ತೆಗೆ ಇಳಿಯುವ ಮುನ್ನ ಇದನ್ನು ತಿಳಿಯಿರಿ.
ಕುರುಬೂರು ಶಾಂತಕುಮಾರ್ ಸಂಚಾಲಕರು, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ದಕ್ಷಿಣ ಭಾರತ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರ್ನಾಟಕ ಕರ್ನಾಟಕದಲ್ಲಿ ಬಂದ್ ನಡೆಸುವ ಕುರಿತು ಮಾಹಿತಿ ನೀಡಿದ್ದಾರೆ.

ದೆಹಲಿ, ಪಂಜಾಬ್, ಹರ್ಯಾಣ, ರಾಜಸ್ಥಾನ ಗಡಿಯಲ್ಲಿನ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡನೀಯ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ರೈತರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಯಾವುದೇ ದಾಳಿಯನ್ನು ರೈತ ಆಂದೋಲನವು ಪ್ರತಿರೋಧಿಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ರೈತರ ಸಂಘಟನೆಗಳ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಪ್ರಭುತ್ವ ಅಧಿಕಾರ ದುರ್ಬಳಕೆ ಮಾಡಿಕೊಂಡು, ರೈತರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ, ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಅಶ್ರುವಾಯು ಸಿಡಿತ ಮತ್ತು ಸಾಮೂಹಿಕ ಬಂಧನವನ್ನು ಖಂಡಿಸುತೇನೆ ಎಂದು ಹೇಳಿದ್ದಾರೆ.
ಬಂದ್‌ಗೆ ಬೆಂಬಲ: ರೈತರ ಮೇಲೆ ನಡೆಸಿರುವ ದೌರ್ಜನ್ಯವನ್ನು ಖಂಡಿಸಲು, ದೇಶದಾದ್ಯಂತ ಪ್ರತಿಭಟಿಸಲು ಮತ್ತು ಬಂದ್ ಯಶಸ್ವಿಯಾಗಿ ನಡೆಸಲು ಎಲ್ಲಾ ಸಂಘಟನೆಗಳು ಸ್ವಯಂ ಪ್ರೇರಿತವಾಗಿ ರಾಜ್ಯಾದ್ಯಂತ ಎಲ್ಲ ರೈತ ಸಂಘಟನೆಗಳು ಫೆ. 16ರಂದು ಬೆಳಗ್ಗೆ 11 ರಿಂದ 1 ಗಂಟೆ ತನಕ ರಸ್ತೆ ಬಂದ್ ಚಳುವಳಿ ನಡೆಸಲಿವೆ. ಇದು ದೇಶದ ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ರೈತ ಸಂಘಟನೆಗಳು ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 4 ಗಂಟೆಯ ತನಕ ಬಂದ್ ಕರೆ ನೀಡಿವೆ. ಕರ್ನಾಟಕದಲ್ಲಿ ಬೆಳಗ್ಗೆ 11 ರಿಂದ 1 ಗಂಟೆ ತನಕ ರಸ್ತೆ ತಡೆ ಮಾಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಶುಕ್ರವಾರ ಸಂಚಾರ ನಡೆಸುವ ಜನರು ರೈತರ ಪ್ರತಿಭಟನೆಯನ್ನು ಗಮನಿಸಿ ಸಂಚಾರ ನಡೆಸಬೇಕಿದೆ.
ಸರ್ಕಾರಕ್ಕೆ ಎಚ್ಚರಿಕೆ: ಕುರುಬೂರು ಶಾಂತಕುಮಾರ್, ರೈತರ ಶಾಂತಿಯುತ ಹೋರಾಟದ ಮೇಲೆ ದಾಳಿ ಮಾಡಲು ಪೊಲೀಸರು ಮತ್ತು ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದು ಸರ್ಕಾರ ರೈತರ ಆಂದೋಲನ ದಮನ ಮಾಡುವ ಕಾರ್ಯವಾಗಿದೆ ಇಂತಹ ಕೆಟ್ಟ ನೀತಿಗಳಿಂದ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಪ್ರತಿಯೊಂದು ವರ್ಗದ ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ಅವರ ಜೀವನೋಪಾಯವನ್ನು ರಕ್ಷಿಸುವ ನಿರ್ದಿಷ್ಟ ಬೇಡಿಕೆಗಳನ್ನು ಪರಿಹರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಹೇಳಿದ್ದಾರೆ.
ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಾದ ಸರ್ಕಾರ ಹೋರಾಟ ನಿರತ ರೈತರನ್ನು ದೇಶದ ಶತ್ರುಗಳಂತೆ ಬಿಂಬಿಸುತ್ತಿರುವುದು ಸರಿಯಲ್ಲ. ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಯಾವುದೇ ದಾಳಿಯನ್ನು ರೈತ ಆಂದೋಲನವು ಪ್ರತಿರೋಧಿಸಲಿದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯ ರೈತ ಹೋರಾಟಕ್ಕೆ ಹೊರಟಿದ್ದ ಕರ್ನಾಟಕದ ರೈತರನ್ನು ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್‌ಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯದ ರೈತರನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ರೈತ ಹೋರಾಟದಲ್ಲಿ ತೊಡಗಿರುವ ರಾಜ್ಯದ ರೈತರ ಯೋಗಕ್ಷೇಮದ ಕುರಿತು ಸಿದ್ದರಾಮಯ್ಯ ಕುರುಬೂರು ಶಾಂತಕುಮಾರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ.












Click it and Unblock the Notifications