Bengaluru to Hampi Flight: ವಿಮಾನ ಪ್ರಯಾಣಿಕರೇ ಗಮನಿಸಿ, ಬೆಂಗಳೂರಿಂದ ಹಂಪಿಗೆ ಹಾರಲು ಸುವರ್ಣಾವಕಾಶ!
ಕರ್ನಾಟಕ ರಾಜ್ಯದಲ್ಲಿ ವಿಮಾನ ಪ್ರಯಾಣ ಜನ ಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದು, 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಚರ್ಚೆಗಳ ನಡುವೆ ಇದೀಗ ಮತ್ತೊಂದು ಬಂಪರ್ ಸುದ್ದಿ ಸಿಕ್ಕಿದೆ. ಕರ್ನಾಟಕದ ಪ್ರತಿ ಜಿಲ್ಲೆಗೂ ವಿಮಾನಯಾನ ಸೇವೆಗೆ ಬೇಡಿಕೆ ಇದ್ದು, ಒಂದೊಂದೇ ಜಿಲ್ಲೆಗಳಿಗೆ ಹಾಗೂ ಪ್ರದೇಶಗಳಿಗೆ ಇದೀಗ ವಿಮಾನಯಾನ ಸೇವೆ ಸಿಗುತ್ತಿದೆ. ಅದರಲ್ಲೂ ವಿಶ್ವವಿಖ್ಯಾತ ಹಂಪಿಗೆ ಕೂಡ ರಾಜಧಾನಿ ಬೆಂಗಳೂರಿಂದ ನೇರ ವಿಮಾನ ಸೇವೆ ನೀಡಲು ಮಹತ್ವದ ನಿರ್ಧಾರವನ್ನು ಇದೀಗ ಕೈಗೊಳ್ಳಲಾಗಿದೆ.
ಹೌದು, ಬೆಂಗಳೂರು ಟು ಹಂಪಿ ನಡುವೆ ಹೊಸ ವಿಮಾನ ಸೇವೆಯನ್ನು ಆರಂಭಿಸುವ ಯೋಜನೆಯನ್ನು ಪ್ರಾದೇಶಿಕ ಏರ್‌ಲೈನ್ ಸ್ಟಾರ್ ಏರ್ ಈಗ ಘೋಷಣೆ ಮಾಡಿದೆ. ಈ ಮೂಲಕ ಬಳ್ಳಾರಿ & ವಿಜಯನಗರ ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಭಾರಿ ದೊಡ್ಡ ಬೆಂಬಲ ಸಿಗುವುದು ಗ್ಯಾರಂಟಿ ಆಗಿದೆ. ಪ್ರಮುಖವಾಗಿ ಕನ್ನಡ ರಾಜ್ಯೋತ್ಸವದ ದಿನದಿಂದಲೇ ವಿಮಾನ ಹಾರಾಟ ಶುರುವಾಗಲಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.

ಹಂಪಿಗೆ ನೇರ ವಿಮಾನ ಸೇವೆ
ಕನ್ನಡ ನಾಡಿನ ಇತಿಹಾಸ ಸಾರುವ ಐತಿಹಾಸಿಕ ಪಟ್ಟಣ ಹಂಪಿಗೆ ಸಮೀಪದಲ್ಲೇ ಇರುವ ವಿದ್ಯಾನಗರದ ವಿಮಾನ ನಿಲ್ದಾಣದ ಮೂಲಕ ವಿಮಾನ ಸೇವೆ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಲಾಗಿದೆ. ಇನ್ನು, ಕಳೆದ ಒಂದು ತಿಂಗಳಿಂದ JSW ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಗೊಂಡಿದ್ದ ಹಿನ್ನೆಲೆ ಸ್ಥಳೀಯರಲ್ಲಿ ಬೇಸರ ಮೂಡಿತ್ತು. ಆದರೆ ಈ ಘೋಷಣೆ ಪ್ರಯಾಣಿಕರು ಹಾಗೂ ಸ್ಥಳೀಯರಿಗೂ ನೆಮ್ಮದಿ ನೀಡಿದ್ದು, ಓಡಾಟಕ್ಕೆ ಅನುಕೂಲ ಆಗಲಿದೆ.
ಯುನೆಸ್ಕೋ ವಿಶ್ವ ಹೇರಿಟೇಜ್ ತಾಣವಾಗಿ, ಜಗತ್ತಿನ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ಸೆಳೆಯುವ ನಮ್ಮ ಹಂಪಿಗೆ ಇದೀಗ ವಿಮಾನ ಸೇವೆ ನೇರವಾಗಿ ಸಿಗುತ್ತಿರುವುದು ಕನ್ನಡಿಗರಿಗೆ ಖುಷಿ ಕೊಟ್ಟಿದೆ. ಈ ಮೂಲಕ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಯುನೆಸ್ಕೋ ವಿಶ್ವ ಹೇರಿಟೇಜ್ ತಾಣ ಹಂಪಿ ಮತ್ತಷ್ಟು ಹತ್ತಿರವಾಗುತ್ತಿದೆ. ಬಳ್ಳಾರಿಗೆ ತೆರಳುವ ಪ್ರಯಾಣಿಕರಿಗೆ ಕೂಡ ಈ ವಿಮಾನ ಸೇವೆಯಿಂದ ಪ್ರಯೋಜನ ಆಗಲಿದ್ದು ವಿಮಾನ ಸೇವೆ ನವೆಂಬರ್ 1 ಶನಿವಾರದಿಂದ ಆರಂಭ ಆಗಲಿದೆ. ಸ್ಟಾರ್ ಏರ್‌ನ ಈ ಘೋಷಣೆ ಪ್ರವಾಸಿಗರು ಮತ್ತು ಹಂಪಿಯ ಸ್ಥಳೀಯ ವ್ಯಾಪಾರಿಗಳಿಗೆ ಸಾಕಷ್ಟು ಸಂತೋಷ ತಂದಿದೆ. ಹಾಗಾದರೆ ಈ ವಿಮಾನ ಓಡಾಟದ ಸಮಯ ಏನು? ಮುಂದೆ ಓದಿ.
ವಿಮಾನ ಹಾರಾಟದ ಸಮಯ ಏನು?
ನವೆಂಬರ್ 1 ಶನಿವಾರದಿಂದ ತನ್ನ ಸೇವೆಯನ್ನ ಆರಂಭಿಸಲಿರುವ ಬೆಂಗಳೂರು ಟು ಹಂಪಿ ವಿಮಾನವು ಪ್ರತಿದಿನ ಬೆಳಗ್ಗೆ 7.50ಕ್ಕೆ ಬೆಂಗಳೂರಿಂದ ಹಾರಲಿದೆ. ಇನ್ನು 7:50ಕ್ಕೆ ಬೆಂಗಳೂರಿಂದ ಆಕಾಶಕ್ಕೆ ಹಾರುವ ವಿಮಾನ 8.40ಕ್ಕೆ ಹಂಪಿ ಸಮೀಪದ ವಿದ್ಯಾನಗರ ವಿಮಾನ ನಿಲ್ದಾಣ ತಲುಪುತ್ತದೆ. ಹಾಗೆಯೇ ಮರಳಿ ಮತ್ತೆ ಇದೇ ವಿಮಾನ ಬೆಳಗ್ಗೆ 9.10ಕ್ಕೆ ವಿದ್ಯಾನಗರ ನಿಲ್ದಾಣದಿಂದ ಹೊರಟು, 10 ಗಂಟೆಗೆ ಬೆಂಗಳೂರು ತಲುಪುತ್ತದೆ. ವಿಶ್ವವಿಖ್ಯಾತ ತಾಣ ಹಂಪಿಯು JSW ವಿದ್ಯಾನಗರ ವಿಮಾನ ನಿಲ್ದಾಣದಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿದ್ದು, ಈ ಹಿಂದೆ 150 ಕಿಮೀ ದೂರದ ಹುಬ್ಬಳ್ಳಿಯ ವಿಮಾನ ನಿಲ್ದಾಣ ಬಳಸುವ ಅನಿವಾರ್ಯತೆ ಇತ್ತು. ಆದರೆ ಇದೀಗ ಸಾಕಷ್ಟು ಉಪಯೋಗ ಆಗಲಿದೆ.












Click it and Unblock the Notifications