Maize Rate ; ರೈತರ ಬೇಡಿಕೆಯಂತೆ ಮಕ್ಕೆಜೋಳ 3,000 ರೂ. ಕೊಟ್ಟು ಖರೀದಿಸಿ
Maize Price in Karnataka: ಕರ್ನಾಟಕದಲ್ಲಿ ಮೆಕ್ಕೆಜೋಳ ಬೆಳೆ ಅಪಾರ ಪ್ರಮಾಣದಲ್ಲಿ ಬೆಳೆಯಲಾಗಿದೆ. ರೈತರ ಹೆಚ್ಚಿನ ಮತ್ತು ಸೂಕ್ತ ಬೆಲೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಅವರ ಆಸೆ ನಿರಾಸೆಯಾಗಿದೆ. ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿಲ್ಲ ಎಂಬ ಆರೋಪ ಇತ್ತು. ಇದರ ಬೆನ್ನಲ್ಲೆ ಕೇಂದ್ರ ತೆರೆಯಲು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಖರೀದಿ ದರದ ಬಗ್ಗೆ ಅಪಸ್ವರ ಕೇಳಿ ಬಂದಿದೆ.
ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರ್ಕಾರ ಪೋಸ್ಟ್‌ಮನ್ ಕೆಲಸ ಮಾಡುತ್ತಿದೆ ಎಂದು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ರೈತರ ಬೇಡಿಕೆಯಂತೆ ಪ್ರತಿ ಕ್ವಿಂಟಾಲ್‌ಗೆ 3000 ರೂ. ಕೊಟ್ಟು ಮೆಕ್ಕೆಜೋಳ ಖರೀದಿ ಮಾಡಲಿ ಎಂದು ಹಾವೇರಿಯಲ್ಲಿ ಒತ್ತಾಯಿಸಿದ್ದಾರೆ.

ನಮ್ಮ ದೇಶಕ್ಕೆ ಎಷ್ಟು ಮೆಕ್ಕೆಜೋಳ ಬೇಕೋ ಅದರ ಆಧಾರದ ಮೇಲೆ ರಫ್ತಾಗುತ್ತದೆ. ಈ ವರ್ಷ ಕರ್ನಾಟಕದಲ್ಲಿ 17ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಟನ್ ಬೆಳೆದಿದ್ದಾರೆ. ಈ ವರ್ಷ ಕನಿಷ್ಠ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಅದಕ್ಕಂತೂ ರಾಜ್ಯ ಸರ್ಕಾರ ಪರಿಹಾರ ಕೊಡುವುದಿಲ್ಲ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ವಿಚಾರದಲ್ಲಿ ಕೇವಲ ಪೋಸ್ಟ್‌ಮನ್ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರದಿಂದ ಖರೀದಿ ಮಾಡಿದ್ದರು. ಅವರು ಕೇಂದ್ರದ ಕಡೆಗೆ ಬೆರಳು ಮಾಡಿರಲಿಲ್ಲ. ಇದೇನು ಹಾಳಾಗುವ ಬೆಳೆ ಅಲ್ಲ. ಅದನ್ನು ಇಟ್ಟುಕೊಂಡು ಬೆಲೆ ಬಂದಾಗ ಮಾರಾಟ ಮಾಡಬಹುದು. ವ್ಯತ್ಯಾಸ ಬಂದರೆ ಕೇಂದ್ರ ಸರ್ಕಾರ ಕೊಡುತ್ತದೆ. ಆದ್ದರಿಂದ ರೈತರ ಬೇಡಿಕೆಯಂತೆ ಎಂಎಸ್‌ಪಿ 2400 ರೂ. ಇದೆ. ರೈತರ ಬಗ್ಗೆ ಕಳಕಳಿ, ಪ್ರೀತಿ ಇದ್ದರೆ ಇನ್ನೂ 600 ಸೇರಿಸಿ ಪ್ರತಿ ಕ್ವಿಂಟಾಲ್‌ಗೆ 3000 ರೂ. ಕೊಟ್ಟು ಖರೀದಿಸಬೇಕು ಎಂದು ಬೊಮ್ಮಾಯಿ ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆ ಮಾತ್ರ ಪ್ರಸ್ತಾಪ ಆಗಿರುವ ಕುರಿತು ಕೇಳಿದ ಪ್ರಶ್ನೆಗೆ ಇದು ರಾಜ್ಯ ಸರ್ಕಾರ ಅಲ್ಲಾ, ಪೋಸ್ಟ್ ಆಫೀಸ್ ಕೆಲಸ ಮಾಡುತ್ತಿದೆ ಎಂದು ದೂರಿದರು. ಅನುದಾನ, ಪರಿಹಾರ ಬಂದಾಗ ಕೇಂದ್ರದತ್ತ ಬೆಟ್ಟು ಮಾಡುತ್ತದೆ ಎಂದು ಈ ಹಿಂದೆ ಬಿಜೆಪಿ ನಾಯಕರು ಆರೋಪಿಸಿದ್ದರು. ಇದು ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರು ಐದು ಕೆಜಿ ಅಕ್ಕಿ ವಿತರಣೆ ವಿಚಾರದಲ್ಲೂ ಆಗಿದ್ದನ್ನು ಸ್ಮರಿಸಬಹುದು.
2400 ರೂಪಾಯಿಗೆ ಮೆಕ್ಕೆಜೋಳ ಖರೀದಿ: ಸಿಎಂ
ರಾಜ್ಯದಲ್ಲಿ ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2,400 ರೂ.ಗಳ ಎಂಎಸ್‌ಪಿ ದರ ನಿಗದಿ ಆಗಿದೆ. ಖರೀದಿ ಕೇಂದ್ರ ಪ್ರಾರಂಭ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಉತ್ಪಾದನೆ ಹೆಚ್ಚಾದ ಕಾರಣ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕುಸಿತ ಕಂಡಿದೆ. ಸುಮಾರು 55 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ನಿರೀಕ್ಷೆ ಇದೆ. ರಾಜ್ಯ ಸರ್ಕಾರ,ರೈತರಿಂದ ಸುಮಾರು 10 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಸಲು ನಿರ್ಧರಿಸಿದೆ. ಈ ಸಂಬಂಧ ಖರೀದಿ ಕೇಂದ್ರ ಸ್ಥಾಪಿಸಲು ಅಧಿಕಾರಿಗಲಿಗೆ ಸೂಚಿಸಲಾಗಿದೆ ಎಂದು ಸಭೆ ಬಳಿಕ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಸರ್ಕಾರದ ಖರೀದಿ ದರವನ್ನು ಬೊಮ್ಮಾಯಿ ಅವರು ಒಪ್ಪದೇ 600 ರೂ. ಸೇರಿಸಿ 3000 ರೂಪಾಯಿಗೆ ಖರೀದಿಸುವಂತೆ ಅವರು ಕೋರಿದ್ದಾರೆ.












Click it and Unblock the Notifications