ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ದಿಗೆ ಸಹಕಾರ
ಬೆಂಗಳೂರು, ಮೇ 05: ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ದಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಬೆಂಗಳೂರಿನಲ್ಲಿ ಇಟಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಲುಯಿಗಿ ಡಿ. ಮಾಯೊ ನೇತೃತ್ವದ ನಿಯೋಗ ಬಸವರಾಜ ಬೊಮ್ಮಾಯಿಯನ್ನು ಭೇಟಿ ಮಾಡಿತು. ಭಾರತ ಮತ್ತು ಇಟಲಿಯ ಸಾಂಸ್ಕೃತಿ ಮತ್ತು ವ್ಯವಹಾರಿಕ ಸಂಬಂಧ ಬಹಳ ಹಿಂದಿನಿಂದಲೂ ಇದೆ. ಈ ವ್ಯವಹಾರಿಕ ಸಂಬಂಧವನ್ನು ಮತ್ತಷ್ಟು ವೃದ್ಧಿಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಇಟಲಿಯ ವಿದೇಶಾಂಗ ವ್ಯವಹಾರಗಳ ಸಚಿವರು ಕರ್ನಾಟಕದೊಂದಿಗೆ ಇಟಲಿ ಅತ್ಯುತ್ತಮ ಬಾಂಧವ್ಯವನ್ನು ಹೊಂದಲು ಇಚ್ಚಿಸಿದ್ದು, ಇಟಲಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದರು. ನಿಯೋಗವು ದೇಶದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಬೆಂಗಳೂರಿನ ಮಹತ್ವವನ್ನು ಅರಿತುಕೊಂಡಿದೆ. ಬೆಂಗಳೂರು ಮತ್ತು ಇಟಲಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಸಕ್ತಿ ವ್ಯಕ್ತಪಡಿಸಿದೆ.

ಮಾರ್ಬಲ್, ಗ್ರ್ಯಾನೈಟ್, ಟಯರ್ ಉತ್ಪಾದನಾ ಘಟಕಗಳು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿವೆ. ಬೆಂಗಳೂರಿನ ಸುತ್ತಮುತ್ತ ಆಧುನಿಕ ಟೈಲ್ಸ್ ಉತ್ಪಾದಕ ಘಟಕಗಳಿವೆ. ಇವುಗಳಲ್ಲಿ ಶೇ.99% ರಷ್ಟು ಘಟಕಗಳಲ್ಲಿ ಇಟಲಿಯ ಯಂತ್ರಗಳು ಬಳಕೆಯಾಗುತ್ತಿವೆ.

ಬೆಂಗಳೂರು ವಿಜ್ಞಾನ ನಗರಿ; ವಿಜ್ಞಾನ ಕ್ಷೇತ್ರದಲ್ಲಿ ಇಟಲಿ ನಿಯೋಗ ವ್ಯಕ್ತಪಡಿಸಿದ ಆಸಕ್ತಿಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, "ಕರ್ನಾಟಕದಲ್ಲಿ ಜನಸಾಮಾನ್ಯರೂ ತಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಬಳಸುತ್ತಾರೆ. ಬೆಂಗಳೂರು ವಿಜ್ಞಾನ ನಗರ. ಇಲ್ಲಿನ ಶಿಕ್ಷಣ ಹಾಗೂ ಆಲೋಚನೆಗಳು ವೈಜ್ಞಾನಿಕವಾಗಿದೆ. ಸಂಶೋಧನೆ, ತಂತ್ರಜ್ಞಾನ, ಸ್ಟಾರ್ಟ್ ಆಪ್ ಹಾಗೂ ಯೂನಿಕಾರ್ನ್, ಐಟಿ-ಬಿಟಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ" ಎಂದರು.
"ಇವೆಲ್ಲವುಗಳ ಬೆಳವಣಿಗೆಗೆ 150 ವರ್ಷಗಳ ಹಿಂದೆಯೇ ಮೈಸೂರು ಮಹಾರಾಜರು ಬುನಾದಿಯನ್ನು ಹಾಕಿದ್ದರು. ಎಚ್‌ಎಂಟಿ, ಬಿಐಎಲ್, ಎಚ್‌ಎಎಲ್ ಹೀಗೆ ಅನೇಕ ಮುಂತಾದ ಉತ್ಪಾದನಾ ಕೇಂದ್ರಿತ ಕಾರ್ಖಾನೆಗಳು, ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದಾರೆ" ಎಂದು ಹೇಳಿದ ಮುಖ್ಯಮಂತ್ರಿಗಳು ಮೈಸೂರು ಸಂಸ್ಥಾನದ ಕೊಡುಗೆ ನೆನಪಿಸಿಕೊಂಡರು.

"ನಮ್ಮ ಸರ್ಕಾರ ಸ್ಟಾರ್ಟ್ ಆಪ್‌ಗಳು ಹಾಗೂ ಯೂನಿಕಾರ್ನ್‌ಗಳ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ದೇಶದ ವಿಜ್ಞಾನ ಹಾಗೂ ಆರ್ಥಿಕ ರಾಜಧಾನಿ ಹಾಗೂ ದೇಶದ ಭವಿಷ್ಯವಾಗಿರುತ್ತದೆ" ಎಂದು ತಿಳಿಸಿದರು.












Click it and Unblock the Notifications