ಬೆಂಗಳೂರು ದಕ್ಷಿಣ: ಅನಂತಕುಮಾರ್, ನಿಲೇಕಣಿ ಏನನ್ತಾರೆ?
ಬೆಂಗಳೂರು, ಸೆಪ್ಟೆಂಬರ್ 21: ಮುಂಬರುವ ಲೋಕಸಭಾ ಚುನಾವಣೆಗೆ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರ ಚುನಾವಣೆಗೂ ಮುನ್ನವೇ ಕುತೂಹಲ ಹುಟ್ಟುಹಾಕುತ್ತಿದೆ.
ಮೋದಿ ನೇತೃತ್ವದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಅನಂತ ಕುಮಾರ್ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವುದು ಖಡಾಖಂಡಿತ ಎನ್ನಿಸುತ್ತಿದೆ. ಇವರಿಗೆ ಭರ್ಜರಿ ಎದುರಾಳಿಯಾಗಿ ಕಾಂಗ್ರೆಸ್ ಪಕ್ಷದ ವಿತಿಯಿಂದ 'ಆಧಾರ್' ಅಧ್ಯಕ್ಷ ನಂದನ್ ನಿಲೇಕಣಿ ಅವರ ಹೆಸರು ಕೇಳಿಬಂದಿದೆ.
ಈ ಬೆಳವಣಿಗೆ ಬಗ್ಗೆ ಖುದ್ದು ಇವರಿಬ್ಬರೂ ಏನನ್ನುತ್ತಾರೆ?:

'ನೋ ಕಾಮೆಂಟ್ಸ್' ಎಂದ ನಂದನ್ ನಿಲೇಕಣಿ
'ನೋ ಕಮೆಂಟ್ಸ್' ಎಂದು ನಂದನ್ ನಿಲೇಕಣಿ ಮಗುಮ್ಮಾಗಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ನಿಲೇಕಣಿ 'ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ ಬಗ್ಗೆ ಮಾತನಾಡಲು ಇದು ಸೂಕ್ತ ಕಾಲವಲ್ಲ. ಸಮಯ ಬಂದಾಗ ಆ ಬಗ್ಗೆ ಉತ್ತರ ನೀಡುತ್ತೇನೆ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಪಲಾಯನದ ಮಾತೇ ಇಲ್ಲ. ನಾನೇ ಬಿಜೆಪಿ ಅಭ್ಯರ್ಥಿ
ಇನ್ನು ಅನಂತ ಕುಮಾರ್ ಅವರು 'ಟೆಕ್ಕಿ ವಿರುದ್ಧ ಲೆಗ್ಗಿ ಎಂಬುದೆಲ್ಲಾ ಸುಳ್ಳು. ನಾನಿಲ್ವೆ ಇಲ್ಲಿ. ಬೇರೆ ಕಡೆ ಯಾಕೆ ಪಲಾಯನ ಮಾಡಲಿ? ನಾನೇ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಇನ್ನು ನನ್ನ ಎದುರಾಳಿಯಾಗಿ ಯಾರೇ ನಿಂತರೂ ನಾನು ಸ್ವಾಗತಿಸುವೆ' ಎಂದು ಕಟ್ಟಿಮುರಿದಂತೆ ನುಡಿದಿದ್ದಾರೆ.

Photo finish?:
ಅನಂತಕುಮಾರ್ ಮಾತಿನಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಲೆಗ್ಗಿ ಅನಿಲ್ ಕುಂಬ್ಳೆ ಬಿಜೆಪಿಯಿಂದ ಕಣಕ್ಕಿಳಿಯುತ್ತಿಲ್ಲ. ಬದಲಿಗೆ 5ನೇ ಬಾರಿಗೂ ಅನಂತಕುಮಾರ್ ಅವರೇ ಬಿಜೆಪಿ ಅಭ್ಯರ್ಥಿ. 1996ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸತೊಡಗಿದ ಅನಂತ್, 6ನೇ ಬಾರಿಗೂ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೊಂದಲಾಪುರದಲ್ಲಿ ಯಡಿಯೂರಪ್ಪ
ಈ ಮಧ್ಯೆ, ಅತ್ತ ಬಿಜೆಪಿಗೂ ಹೋಗದೆ ಇತ್ತ ಕೆಜೆಪಿಯಲ್ಲೇ ಇದ್ದು ಏಗಲಾರದೆ ತೊಳಲಾಡುತ್ತಿರುವ ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಒಮ್ಮೊಮ್ಮೆ ಬಿಜೆಪಿ ಬೇಡ. ಮೋದಿ ಎನ್ ಡಿಎ ಕೈಹಿಡಿಯುವೆ ಎನ್ನುತ್ತಾರೆ. ಮರುಘಳಿಗೆಯೇ ಇಲ್ಲಾ ಇಲ್ಲಾ ಬಿಜೆಪಿಗೆ ಹೋಗೋಲ್ಲ. ಆದರೆ ಬಿಜೆಪಿ ಪರ ಚುನಾವಣೆ ಪ್ರಚಾರ ನಡೆಸುತ್ತೇನೆ ಎಂದು ಮತದಾರನನ್ನು ಅದಕ್ಕೂ ಮೊದಲು ಬಿಜೆಪಿ/ಕೆಜೆಪಿ ಕಾರ್ಯಕರ್ತರನ್ನು ಗೊಂದಲಾಪುರಕ್ಕೆ ಕೊಂಡೊಯ್ಯುತ್ತಾರೆ.

ಅನಂತಕುಮಾರ್ ಪರವೂ ಪ್ರಚಾರ ಮಾಡ್ತೇನೆ
ಇದೇ ವೇಳೆ 'ಏನ್ಸಾರ್, ಬಿಜೆಪಿ ಪರ ಚುನಾವಣೆ ಪ್ರಚಾರ ನಡೆಸ್ತೀನಿ ಅಂತೀರಿ? ಅಕಸ್ಮಾತ್ ಅನಂತಕುಮಾರ್ ಪರ ವಸಿ ಪ್ರಚಾರ ನಡೆಸೀವ್ರಂತೆ ಬನ್ನಿ ಎಂದು ಬಿಜೆಪಿ ಕೇಳಿದರೆ ಏನ್ಮಾಡ್ತೀರಿ?' ಎಂದು ಕೇಳಿದರೆ 'ಓ ಅದಕ್ಕೇನಂತೆ ಅನಂತಕುಮಾರ್ ಪರವೂ ಪ್ರಚಾರ ಮಾಡ್ತೇನೆ' ಎಂದು ಗಂಭೀರವಾಗಿ ಹೇಳಿದ್ದಾರೆ.
ಅಲ್ಲಿಗೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತಾವೇ ಬಿಜೆಪಿ ಅಭ್ಯರ್ಥಿ ಅನ್ನುತ್ತಿರುವ ಅನಂತಕುಮಾರ್ ಪರ ಒಬ್ಬ ಸ್ಟಾರ್ ಕಾಂಪೇನರ್ ಸಿಕ್ಕಿದಂತಾಯ್ತು!












Click it and Unblock the Notifications