ಬೆಂಗಳೂರು ಹಂಪ್‌ಗೆ ಶಿಕಾರಿಪುರದ ಟೆಕ್ಕಿ ವಿನಾಯಕ ಬಲಿ

ಈತ ಶುಕ್ರವಾರ ಬೆಳಗ್ಗೆ ಎಚ್‌ಎಎಲ್ ಬಳಿಯ ಸಾಫ್ಟ್ ವೇರ್ ಕಂಪನಿಗೆ ಕೆಲಸಕ್ಕೆಂದು ಬೈಕಿನಲ್ಲಿ ಹೊರಟಿದ್ದಾಗ ಮಾರ್ಗ ಮಧ್ಯೆ ಕುಂದಲಹಳ್ಳಿ- ಮಾರತ್ ಹಳ್ಳಿ ಜಂಕ್ಷನ್ ಸಮೀಪ ನಡೆದ ಅವಘಡದಲ್ಲಿ ಪ್ರಾಣತೆತ್ತಿದ್ದಾನೆ.
ದಿಢೀರನೆ ಹಂಪ್ ಕಂಡು ಗಾಬರಿಗೊಂಡ ವಿನಾಯಕ ನಾಮದೇವ ಬ್ರೇಕ್ ಹಾಕಿದಾಗ ಹಿಂದಿನಿಂದ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಎಚ್‌ಎಎಲ್ ಸಂಚಾರ ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಂಬಂಧ ಟ್ಯಾಂಕರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಯಮದೂತನಂತೆ ಹಿಂದೆಯೇ ಬರುತ್ತಿದ್ದ ಟ್ಯಾಂಕರ್: ಶಿಕಾರಿಪುರ ತಾಲೂಕು ಮಾಸೂರಿನ Vinayaka Namdev Patanakar ಆರು ತಿಂಗಳ ಹಿಂದೆ ಇಲ್ಲಿನ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ದೊರೆತಿದ್ದರಿಂದ ನಗರಕ್ಕೆ ಬಂದು ನೆಲೆಸಿದ್ದ. ಎಂದಿನಂತೆ ಶುಕ್ರವಾರ ಬೈಕಿನಲ್ಲಿ ಕೆಲಸಕ್ಕೆ ಅತಿವೇಗವಾಗಿ ತೆರಳುತ್ತಿದ್ದಾಗ ಮಾರತ್ ಹಳ್ಳಿ ಜಂಕ್ಷನ್ ಸಮೀಪ ರಸ್ತೆ ಉಬ್ಬು ಕಂಡು ಹಠಾತ್ ಬ್ರೇಕ್ ಹಾಕಿದ್ದಾನೆ.
ಆಗ ಯಮದೂತನಂತೆ ಹಿಂದೆಯೇ ಬರುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಿಲ್ಲರ್ ಬಿಎಂಟಿಸಿಗೆ ವ್ಯಕ್ತಿ ಬಲಿ : ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ಮಲ್ಲೇಶ್ವರ 18ನೇ ಕ್ರಾಸ್ ಸಮೀಪ ಶುಕ್ರವಾರ ನಡೆದಿದೆ.
ವಿಧಾನಸೌಧ ಸಚಿವಾಲಯದ 'ಡಿ' ದರ್ಜೆ ನೌಕರರಾದ ಟಿ. ದಾಸರಹಳ್ಳಿ ನಿವಾಸಿ ಬಿ. ಶ್ಯಾಮಸುಂದರ್ (50) ಮೃತರು.
ಮನೆಯಿಂದ ಶುಕ್ರವಾರ ಬೆಳಗ್ಗೆ ಬೆಳಗ್ಗೆ ತಮ್ಮ ಸ್ಕೂಟರಿನಲ್ಲಿ ಶ್ಯಾಮ್ ಅವರು ಕೆಲಸಕ್ಕೆ ತೆರುವಾಗ ಮಾರ್ಗ ಮಧ್ಯೆ, ಮಲ್ಲೇಶ್ವರ 18ನೇ ಕ್ರಾಸಿನಲ್ಲಿ ಯಶವಂತಪುರದಿಂದ ಮೆಜೆಸ್ಟಿಕ್ ಕಡೆಗೆ ಚಲಿಸುತ್ತಿದ್ದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಬಸ್ ಚಾಲಕ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.












Click it and Unblock the Notifications