ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೇಸ್ ಧೂಳಿಪಟವಾಗುತ್ತದೆ: ಆರ್ ಅಶೋಕ್
ರಾಮನಗರ, ಮೇ4: ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೇಸ್ ಧೂಳಿಪಟವಾಗುತ್ತದೆ ಎಂದು ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕನಕಪುರದಲ್ಲಿ 8ನೇ ದಿನ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ. ಪಕ್ಷ ಸಂಘಟನೆ ಉದ್ದೇಶದಿಂದ ಪಕ್ಷ ಇಲ್ಲಿ ನನ್ನನ್ನು ಕಣಕ್ಕಿಳಿಸಿದೆ. ಇದೇ 8ರಂದು ಅಮಿತ್ ಶಾ ಅವರು ಕನಕಪುರಕ್ಕೆ ಆಗಮಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮಯವನ್ನು ಕೇಳಿದ್ದೇವೆ. ಇಬ್ಬರು ಸಮಯ ಕೊಟ್ರೆ ಇಬ್ಬರನ್ನೂ ಜೋಡಿಸಿ ಕನಕಪುರದಲ್ಲಿ ರೋಡ್ ಶೋ ಮಾಡ್ತೇವೆ ಎಂದು ಹೇಳಿದರು.

ಶುಕ್ರವಾರ ಸಂಸದರಾದ ತೇಜಸ್ವಿ ಸೂರ್ಯ ಬಂದು ಪ್ರಚಾರ ಮಾಡುತ್ತಾರೆ. ಕನಕಪುರದ ಎಲ್ಲಾ ಹೋಬಳಿಗಳಲ್ಲೂ ಪ್ರಚಾರ ಮಾಡುತ್ತೇವೆ, ಈ ಬಾರಿ ಡಿ ಕೆ ಶಿವಕುಮಾರ್ ಗೆ ವಿರೋಧಿ ಅಲೆ ಇದೆ.
ಹಾಗಾಗಿ ನಾವು ಗೆಲ್ಲುವ ವಾತಾವರಣ ಇದೆ. ಇಲ್ಲಿ ಜೆಡಿಎಸ್ ಕೂಡಾ ಪ್ರಚಾರ ಮಾಡುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕೂಡ ಕ್ಷೇತ್ರಕ್ಕೆ ಬಂದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪ್ರನಾಳಿಯಲ್ಲಿ ಭಜರಂಗದಳ ಬ್ಯಾನ್ ವಿಚಾರವಾಗಿ ಮಾತನಾಡಿದ ಅವರು, ಭಜರಂಗದಳ ಬ್ಯಾನ್ ವಿಚಾರದಿಂದ ಕಾಂಗ್ರೆಸ್ ಇನ್ನಷ್ಟು ಸ್ಥಾನ ಕಳೆದುಕೊಳ್ತಾರೆ. ಹಿಂದೂ ರಕ್ಷಣೆ ಮಾಡುವವವರು ಬಜರಂಗದಳದವರು. ದೇಶ, ದೇವಸ್ಥಾನಗಳನ್ನು ರಕ್ಷಣೆ ಮಾಡೋದು ಬಜರಂಗದಳ. ಕಾಂಗ್ರೇಸ್ ಅವರು ಬಜರಂಗದಳವನ್ನು ಪಿಎಫ್ಐಗೆ ಹೋಲಿಸುವುದನ್ನು ನಾನು ಖಂಡಿಸುತ್ತೇನೆ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ಕುಂಕುಮವನ್ನು ವಿರೋಧ ಮಾಡುತ್ತಾರೆ. ಟಿಪ್ಪು ಸುಲ್ತಾನ್ ಅವರನ್ನು ಒಲೈಕೆ ಮಾಡಿಕೊಳ್ಳುತ್ತಾರೆ. ಹಿಂದೂ ವಿರೋಧಿ ಭಾವನೆಯನ್ನು ಕಾಂಗ್ರೆಸ್ ಮಾಡಿದೆ.ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದೆ ಎಂದು ಹೇಳಿದರು.
ಬಜರಂಗದಳ ಬ್ಯಾನ್ ಎಂದು ಕಾಂಗ್ರೆಸ್ ಭರವಸೆ ನೀಡಿರುವುದಕ್ಕೆ ಎಲ್ಲಾ ಕಡೆ ಹನುಮಾನ್ ಚಾಲಿಸಾ ಪಠಣೆ ಮಾಡಲಾಗುತ್ತದೆ. ಕಾಂಗ್ರೆಸ್ ದೇಶದಲ್ಲಿ ಸರ್ವನಾಶವಾಗುತ್ತದೆ. ಲಂಕೆಯಲ್ಲಿ ರಾವಣ ಸಂಹಾರ ಆದ ರೀತಿ ರಾಜ್ಯದಲ್ಲಿ ಕಾಂಗ್ರೇಸ್ ಧೂಳಿಪಟವಾಗುತ್ತದೆ, ಚುನಾವಣೆ ಸಂದರ್ಭದಲ್ಲಿ ಇದೆಲ್ಲವೂ ಕಾಂಗ್ರೆಸ್ ಗೆ ವ್ಯತಿರಿಕ್ತವಾಗುತ್ತದೆ. ಇದೆಲ್ಲವನ್ನೂ ನೋಡಿದ್ರೆ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನೋದು ಗೊತ್ತಾಗುತ್ತದೆ ಎಂದು ಹೇಳಿದರು.

ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಇಲ್ಲ ಎಂಬ ಕಾಂಗ್ರೇಸ್ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹಿಂದೆ ಸಾಕಷ್ಟು ಉದಾಹರಣೆಗಳು ಇದೆ. ಕನಕಪುರ ಡಿಕೆ ಶಿವಕುಮಾರ್ ಅವರ ಕಪಿ ಮುಷ್ಠಿಯಲ್ಲಿದೆ, ಅದರಿಂದ ಜನರು ಹೊರಗಡೆ ಬರಲು ತೀರ್ಮಾನ ಮಾಡಿದ್ದಾರೆ. ಎಲ್ಲಾ ಬೂತ್ ಗಳಲ್ಲೂ ಕೂಡ ನಮ್ಮ ಏಜೆಂಟ್ ಗಳು ಇರ್ತಾರೆ. ಕಾಂಗ್ರೇಸ್ ನ ಮತಗಳು ಕೂಡ ಬಿಜೆಪಿಗೆ ಬರಲಿದೆ ಎಂದರು.
ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಎಸ್ ಎಫ್ ನಿಯೋಜನೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಈ ಬಾರಿ ಸೂಕ್ತ ಭದ್ರತೆಯಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದರು.












Click it and Unblock the Notifications