7th Pay Commission; ಸರ್ಕಾರದ ಗಮನ ಸೆಳೆಯುವುದು ಅವಶ್ಯಕವಾಗಿದೆ
ಬೆಂಗಳೂರು, ಮೇ 10: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದೆ. ವಿಧಾನ ಪರಿಷತ್‌ನ 6 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಕುರಿತು ಪರಿಷತ್ ಚುನಾವಣೆಯಲ್ಲಿಯೂ ಪ್ರಸ್ತಾಪ ಕೇಳಿ ಬಂದಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯದ 7ನೇ ವೇತನ ಆಯೋಗವು ಮಾರ್ಚ್ 16ರಂದು ವರದಿಯನ್ನು ಸಲ್ಲಿಸಿದೆ. ಸರ್ಕಾರಿ ನೌಕರರ ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಈಗ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಸರ್ಕಾರಿ ನೌಕರರ ಬೇಡಿಕೆಗಳ ಕುರಿತು ಒತ್ತಾಯ ಕೇಳಿಬಂದಿದೆ. ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿಯನ್ನು ನೀಡಿದ್ದಾರೆ. ಜೂನ್ 3ರಂದು ಮತದಾನ ನಡೆಯಲಿದೆ.
ಆಯನೂರು ಮಂಜುನಾಥ ಹೇಳಿದ್ದೇನು?; ಆಯನೂರು ಮಂಜುನಾಥ ಫೇಸ್‌ಬುಕ್ ಪೋಸ್ಟ್ ಒಂದನ್ನು ಹಾಕಿದ್ದಾರೆ. ದಿನಾಂಕ 3/6/2024ರ ಸೋಮವಾರ ನಡೆಯಲಿರುವ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆಯನೂರು ಮಂಜುನಾಥ ಆದ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದು, ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನೌಕರರ/ ಕಾರ್ಮಿಕರ/ ಪದವೀಧರರ ಸಮಸ್ಯೆಯ ಬಗ್ಗೆ ಈಗಾಗಲೇ ಹಲವಾರು ಬಾರಿ ನನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವುದು ತಮಗೆಲ್ಲ ತಿಳಿದ ವಿಷಯವಾಗಿದೆ. ಇನ್ನೂ ಹಲವಾರು ಸಮಸ್ಯೆಗಳಿವೆ ಎಂದು ತಿಳಿಸಿದ್ದಾರೆ.
ಮುಖ್ಯ ವಾಗಿ ಎನ್‌ಪಿಎಸ್/ ಓಪಿಎಸ್, 7ನೇ ವೇತನ ಆಯೋಗ ನೀಡಿರುವ ವರದಿಯನ್ನು ಯಥಾವತ್ತಾಗಿ ಶೀಘ್ರವಾಗಿ ಜಾರಿ ಮಾಡುವುದು, ಪೋಲಿಸ್ ಇಲಾಖೆಯಲ್ಲಿ ಔರಾದ್ಕರ್ ವರದಿ ಜಾರಿ, ಅನುದಾನಿತ ಶಾಲಾ/ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು/ ಉಪನ್ಯಾಸಕರು/ ನೌಕರರಿಗೆ ಪಿಂಚಣಿ ಜಾರಿ, ಅತಿಥಿ ಉಪನ್ಯಾಸಕರು/ ಅತಿಥಿ ಶಿಕ್ಷಕರ ಸೇವಾ ಖಾಯಂಮಾತಿ, ಎನ್‌ಹೆಚ್ಎಂ ನೌಕರರ ಸೇವಾ ಖಾಯಂಮಾತಿ, ವೇತನ ಹೆಚ್ಚಳ, ಇತರೆ ಸೌಲಭ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 300 ವಿಧಾನಸಭಾ ಹಾಗೂ ವಿಧಾನ ಪರಿಷತ್ ಚುನಾಯಿತರಿದ್ದರೂ ಸಹ ನೌಕರರ/ ಕಾರ್ಮಿಕರ ಬಗ್ಗೆ ಯಾವುದೇ ಜನಪ್ರತಿನಿಧಿ ಸದನದಲ್ಲಿ ಸರ್ಕಾರದ ಗಮನ ಸೆಳೆದ ನಿದರ್ಶನಗಳಿಲ್ಲ. ಆದುದರಿಂದ ನೌಕರರ, ಕಾರ್ಮಿಕರ/ ಪದವೀಧರ ಧ್ವನಿಯಾಗಿ ಈ ಹಿಂದೆಯೂ ಕಾರ್ಯ ನಿರ್ವಹಿಸಿರುವ ನನಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವುದರ ಮೂಲಕ ಆಶೀರ್ವದಿಸಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ 2006ರ ನಂತರ ಸರ್ಕಾರಿ ಸೇವೆಗೆ ಸೇರಿದ ಸುಮಾರು 2.5ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರು ಎನ್‌ಪಿಎಸ್ ಅಡಿ ನೇಮಕವಾಗಿದ್ದು, ಅಲ್ಲದೇ ನಿವೃತ್ತಿ ವೇತನದಿಂದ ವಂಚಿತರಾಗಿರುವ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಅರೆ ಸರ್ಕಾರಿ, ಸ್ವಾಯತ್ತ ಸಂಸ್ಥೆಗಳ ನೌಕರರಿಗೂ ಸಹ ಓಪಿಎಸ್ ಜಾರಿ ಮಾಡಬೇಕು ಎಂದು ನನ್ನ ಪಕ್ಷದ ಸರ್ಕಾರದ ವಿರುದ್ಧವೇ ಧ್ವನಿ ಎತ್ತಿ ಓಪಿಎಸ್ ವ್ಯವಸ್ಥೆಯನ್ನೇ ಜಾರಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಾ. ಅಲ್ಲದೆ ನಿರುದ್ಯೋಗಿ ಪದವೀಧರರ ಸಮಸ್ಯೆ ಬಗ್ಗೆ ಹಾಗೂ ಅವರು ಪಡೆದ ಶೈಕ್ಷಣಿಕ ಸಾಲ/ ಬಡ್ಡಿ ಮನ್ನಾ ಮಾಡುವಂತೆ ಸದನದಲ್ಲಿ ಹಲವಾರು ಬಾರಿ ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.
ಎನ್‌ಪಿಎಸ್ ರದ್ದು, ಓಪಿಎಸ್ ಜಾರಿ, ಅತಿಥಿ ಉಪನ್ಯಾಸಕರ ಸೇವಾ ಖಾಯಂಮಾತಿ, ಅತಿಥಿ ಶಿಕ್ಷಕರ ಸೇವಾ ಭದ್ರತೆ, ಎನ್‌ಹೆಚ್ಎಂ ನೌಕರರ ಸೇವಾ ಭದ್ರತೆ, ಶಿಕ್ಷಕರ ಬಡ್ತಿ, ಸಿ & ಆರ್ ಇತ್ಯಾದಿ ಹಲವಾರು ಸಮಸ್ಯೆ, ಅನುದಾನಿತ ಶಾಲಾ ನೌಕರರ ಸಮಸ್ಯೆ, ಖಾಸಗಿ ಶಾಲಾ- ಕಾಲೇಜುಗಳಲ್ಲಿನ ಸಮಸ್ಯೆಗಳು, ನಿವೃತ್ತ ನೌಕರರ ಆರೋಗ್ಯ ಭಾಗ್ಯ, ಕಾರ್ಮಿಕ ಇಲಾಖಾ ಸಮಸ್ಯೆ, ನಿರುದ್ಯೋಗಿ ಪದವೀಧರರ ಸಮಸ್ಯೆ ಇನ್ನೂ ಮುಂತಾದ ವಿಷಯಗಳ ಬಗ್ಗೆ ಪರಿಹಾರ ದೊರಕುವವರೆಗೂ ನನ್ನ ನ್ಯಾಯಯುತ ಹೋರಾಟ ಮುಂದುವರೆಯುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications