ಅತ್ತಿಬೆಲೆ ಪಟಾಕಿ ದುರಂತ: ಮೂವರು ಅಧಿಕಾರಿಗಳ ಅಮಾನತು ಎತ್ತಿಹಿಡಿದ ಕೆಎಟಿ
ಬೆಂಗಳೂರು, ಡಿಸೆಂಬರ್ 06: ಅತ್ತಿಬೆಲೆ ಬಾಲಾಜಿ ಟ್ರೇಡರ್ಸ್‌ಗೆ ಸೇರಿದ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 15ಕ್ಕೂ ಅಧಿಕ ಮಂದಿ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣ ಸಂಬಂಧ ಮೂವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದ ಸರ್ಕಾರದ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಎತ್ತಿಹಿಡಿದಿದೆ.
ಇದರಿಂದಾಗಿ ಅಧಿಕಾರಿಗಳಾದ ಆನೇಕಲ್ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಅತ್ತಿಬೆಲೆ ಸರ್ಕಲ್ ಕಂದಾಯ ನಿರೀಕ್ಷಕ ಎ. ಪುಷ್ಪರಾಜ್ ಮತ್ತು ಅತ್ತಿಬೆಲೆ ಕಂದಾಯ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಭಾಗೇಶ್ ಹೊಸಮನಿಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಮೂವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಜಾಗೊಳಿಸಿ ಕೆಎಟಿ ಮುಖ್ಯಸ್ಥರಾದ ಆರ್. ಬಿ. ಬೂದಿಹಾಳ್ ಅವರ ಪೀಠ ಈ ಆದೇಶ ಮಾಡಿದೆ.

ಸರ್ಕಾರಿ ವಕೀಲರು, ಅವಘಡ ಸಂಭವಿಸಿರುವ ಗೋದಾಮಿನ ಮಾಲೀಕರಾದ ವಿ.ರಾಮಸ್ವಾಮಿ ರೆಡ್ಡಿ ಎಂಬುವರಿಗೆ ಹಸಿರು ಪಟಾಕಿ ಸಂಗ್ರಹ ಹಾಗೂ ಮಾರಾಟ ಮಾಡಲು ಅರ್ಜಿದಾರ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಅನುಮತಿ ನೀಡುವ ಮುನ್ನ ಸ್ಥಳ ಪರಿಶೀಲನೆ ನಡೆಸಿಲ್ಲ. ಗೋದಾಮು ಮಾಲೀಕರು ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆದಿರುವ ಬಗ್ಗೆ ಪರಿಶೀಲನೆ ನೆಡಸಿಲ್ಲ ಎಂದು ವಾದಿಸಿದ್ದರು.
ಅಲ್ಲದೇ, ಗೋದಾಮಿನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿರಲಿಲ್ಲ. ಹೀಗಿದ್ದರೂ ಗೋದಾಮಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ. ಅದರಿಂದ ಅಗ್ನಿ ಅವಘಡ ಸಂಭವಿಸಲು ಅರ್ಜಿದಾರರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವಿದೆ. ಆದ್ದರಿಂದ ಅವರನ್ನು ಅಮಾನತು ಮಾಡಿರುವ ಸರ್ಕಾರದ ಆದೇಶ ಕಾನೂನು ಪ್ರಕಾರವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವಾದ ಪುರಸ್ಕರಿಸಿ ನ್ಯಾಯಪೀಠ, ಅರ್ಜಿಗಳನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಅತ್ತಿಬೆಲೆ ಗೋದಾಮಿನಲ್ಲಿ ಅ.7ರಂದು ಅಗ್ನಿ ಅವಘಡ ಸಂಭವಿಸಿತ್ತು. ಗೋದಾಮಿನ ಮಾಲೀಕರಾದ ವಿ. ರಾಮಸ್ವಾಮಿ ರೆಡ್ಡಿ ಅವರು ಬೆಂಗಳೂರಿನಲ್ಲಿ ವಿವಿಧೆಡೆಗೆ ಪಟಾಕಿ ಪೂರೈಸುತ್ತಾರೆ. ದೀಪಾವಳಿ ಹಿನ್ನೆಲೆಯಲ್ಲಿ 5 ಕೋಟಿ ಹಣಕ್ಕಿಂತ ಅಧಿಕ ಮೊತ್ತದ ಭಾರೀ ಪ್ರಮಾಣದ ಪಟಾಕಿಯನ್ನು ತಂದು ಗೋದಾಮಿನಲ್ಲಿ ಇರಿಸಿದ್ದರು.
ಈ ವೇಳೆ 29ಕ್ಕೂ ಹೆಚ್ಚಿನ ಕಾರ್ಮಿಕರು ಅನ್‌ಲೋಡ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪಟಾಕಿ ಸ್ಫೋಟಗೊಂಡಿತ್ತು. ಗೋದಾಮು ಸಂಪೂರ್ಣ ಸುಟ್ಟುಹೋಗಿ ಸುಮಾರು 12 ಮಂದಿ ಸಜೀವ ದಹನವಾಗಿದ್ದರು.
ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಸಾವನ್ನಪ್ಪಿದ್ದರು. ಘಟನೆ ನಡೆದ ಬೆನ್ನಲ್ಲೇ ಅರ್ಜಿದಾರರನ್ನು ಸೇವೆಯಿಂದ ಅಮಾನತುಪಡಿಸಿ ಸರ್ಕಾರ ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಅ.17ರಂದು ಅರ್ಜಿದಾರರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications