Asani cyclone; ಕರ್ನಾಟಕದಲ್ಲಿ ಮಾರ್ಚ್ 24ರ ತನಕ ಮಳೆ
ಬೆಂಗಳೂರು, ಮಾರ್ಚ್ 21: ಈ ವರ್ಷದ ಮೊದಲ ಚಂಡಮಾರುತ 'ಅಸನಿ'ಯ ಪ್ರಭಾವದಿಂದ ಕರ್ನಾಟಕದಲ್ಲಿಯೂ ಅಕಾಲಿಕವಾಗಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಮಾರ್ಚ್ 24ರ ತನಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಸಂಜೆ ಅಂಡಮಾನ್ ಮತ್ತು ನಿಕೋಬಾರ್ ಭಾಗಕ್ಕೆ 'ಅಸನಿ' ಚಂಡಮಾರುತ ಅಪ್ಪಳಿಸಲಿದೆ. ಚಂಡಮಾರುತದಿಂದಾಗಿ ರಾಜ್ಯಕ್ಕೆ ಹೆಚ್ಚಿನ ಅಪಾಯವಿಲ್ಲ. ಆದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ.
ಶುಕ್ರವಾರದಿಂದ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಶನಿವಾರ ಬೆಂಗಳೂರು ನಗರದ ಬಹುತೇಕ ಬಡಾವಣೆಗಳಲ್ಲಿ ಮಳೆಯಾಗಿದೆ. ಮಾರ್ಚ್ 24ರ ತನಕ ಗುಡುಗು ಸಹಿತ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.

ಭಾನುವಾರ ಕೊಪ್ಪ ಮತ್ತು ಮೈಸೂರಿನಲ್ಲಿ 4 ಸೆಂ. ಮೀ., ಚಿಕ್ಕೋಡಿ ಮತ್ತು ಎಚ್. ಡಿ. ಕೋಟೆಯಲ್ಲಿ 3, ಪುತ್ತೂರು, ಧರ್ಮಸ್ಥಳ, ನಿಪ್ಪಾಣಿ, ಧಾರವಾಡ, ರಾಯಚೂರು, ಬೆಳಗಾವಿಯಲ್ಲಿ ತಲಾ 1 ಸೆಂ. ಮೀ. ಮಳೆಯಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದರೂ ಉಷ್ಣಾಂಶದಲ್ಲಿ ಸಹ ಏರಿಕೆ ಕಂಡುಬಂದಿದೆ. ಬೆಂಗಳೂರು ನಗರದಲ್ಲಿ ಇಂದು ಗರಿಷ್ಠ ಉಷ್ಣಾಂಶ 31 ಡಿಗ್ರಿ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.
ಕಲಬುರಗಿಯಲ್ಲಿ ಗರಿಷ್ಠ 39, ಕನಿಷ್ಠ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ ಎಂದು ಅಂದಾಜಿಸಲಾಗಿದೆ. ರಾಯಚೂರಿನಲ್ಲಿ ಗರಿಷ್ಠ 38, ಕನಿಷ್ಠ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆ; ಮಾರ್ಚ್ 24ರ ತನಕ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಮಾರ್ಚ್ 24, 25ರಂದು ಗದಗ, ಹಾವೇರಿ, ಧಾರವಾಡ, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿಸಿದೆ.
ಅಕಾಲಿಕವಾಗಿ ಸುರಿಯುತ್ತಿರುವ ಮಳೆ, ಪ್ರಬಲವಾದ ಗಾಳಿಯ ಪರಿಣಾಮ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಕೆ ಮರಗಳು ಧರೆಗುರುಳುತ್ತಿವೆ. ವಿಜಯಪುರ ಜಿಲ್ಲೆ ತಾಜಪುರ ಗ್ರಾಮದ ಬಳಿಯಲ್ಲಿ ಕಟಾವಿಗೆ ಬಂದಿದ್ದ ದ್ರಾಕ್ಷಿ ಬೆಳೆ ಶನಿವಾರ ಬೀಸಿದ ಗಾಳಿಗೆ ನೆಲಕ್ಕುರುಳಿದೆ.
ಬೆಂಗಳೂರಿನಲ್ಲಿ ಮಳೆ; ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಶನಿವಾರದಿಂದ ಮಳೆಯಾಗುತ್ತಿದೆ. ಭಾನುವಾರ ನಗರದ ಬಹುತೇಕ ಬಡಾವಣೆಯಲ್ಲಿ ಮಳೆಯಾಗಿದೆ. ಮಲ್ಲೇಶ್ವರಂ, ರಾಜಾಜಿನಗರ, ಜಯನಗರ, ಜೆಪಿ ನಗರ, ಪದ್ಮನಾಭನಗರ, ಗಾಂಧಿನಗರ, ಬಸವನಗುಡಿ, ವಿದ್ಯಾಪೀಠ, ಕುರುಬರಳ್ಳಿ ಸೇರಿದಂತೆ ಹಲವು ಕಡೆ ಮಳೆಯಾಗಿದೆ.
ಭಾರೀ ಮಳೆ ಮುನ್ಸೂಚನೆ; 'ಅಸನಿ' ಚಂಡಮಾರುತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಸೋಮವಾರ ಸಂಜೆಯ ವೇಳೆಗೆ ಅಪ್ಪಳಿಸುವ ಸಾಧ್ಯತೆ ಇದೆ. ಇದರಿಂದಾಗಿ ಪ್ರಬಲವಾದ ಗಾಳಿ, ಮಳೆಯಾಗುವ ನಿರೀಕ್ಷೆ ಇದೆ.
ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಚಂಡಮಾರುತ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣಾ ಕಾರ್ಯಕ್ಕಾಗಿ 150 ಎನ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. 6 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಭಾರತೀಯ ನೌಕಾಪಡೆಯ ಗಸ್ತು ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಗಂಟೆಗೆ 110 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಂದಾಜಿಸಲಾಗಿದೆ.
ರಾಜ್ಯದಲ್ಲಿ ಮಳೆಯಿಂದ ಆಗುವ ಹಾನಿಯ ಕುರಿತು ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಮಾರ್ಚ್22ರ ತನಕ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಕರಾವಳಿ ಭಾಗದಲ್ಲಿ ಚಂಡಮಾರುತದ ಪ್ರಭಾವದಿಂದ ಗಾಳಿ ಸಹಿತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications