ಹೇ ಮಂತ್ರಿಗಳೇ ನಿಲ್ಲಿ: ಮತ್ತೆ ಡಿಕೆ ಸುರೇಶ್ ಮತ್ತು ಅಶ್ವತ್ಥ ನಾರಾಯಣ ನಡುವೆ ವಾಗ್ವಾದ
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಹಾಗೂ ಡಿ ಕೆ ಸುರೇಶ್ ನಡುವೆ ಪದೇ ಪದೇ ವಾಗ್ದಾದಗಳು ಹೆಚ್ಚಾಗಿದ್ದು, ಇಂದು ಶಿಷ್ಟಚಾರ ನಿಮಗೆ ಗೊತ್ತಾ ಎಂದು ಡಿ ಕೆ ಸುರೇಶ್ ಗುಡುಗಿದ್ದಾರೆ.
ರಾಮನಗರ,ಮಾರ್ಚ್2: ಸಚಿವ ಅಶ್ವತ್ಥ ನಾರಾಯಣ ರಾಮನಗರ ಜಿಲ್ಲಾ ಉಸ್ತುವಾರಿಯಾದ ಬಳಿಕ ಪದೇ ಪದೇ ರಾಜಕೀಯ ಎದುರಾಳಿಗಳ ವಾಗ್ದಾದಕ್ಕೆ ಸಾಕ್ಷಿಯಾಗುತ್ತಿದೆ. ಈ ಹಿಂದೆ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಡಿ ಕೆ ಸುರೇಶ್ ಹಾಗೂ ಅಶ್ವತ್ಥ ನಾರಾಯಣ ನಡುವೆ ಜಟಾಪಟಿಗೆ ಕಂಡು ಬಂದಿತ್ತು.
ಗುರುವಾರ ರಾಮನಗರದಲ್ಲಿ ಜಿಲ್ಲಾಸ್ಪತ್ರೆ ಉದ್ಘಾಟನೆಯ ವೇಳೆ ಮತ್ತೆ ಸಂಸದ ಡಿ.ಕೆ.ಸುರೇಶ್ ಹಾಗೂ ಸಚಿವ ಅಶ್ವತ್ಥ ನಾರಾಯಣ ನಡುವೆ ವಾಗ್ದಾದ ಶುರುವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯೊಳಗೆ ಮುಖಾಮುಖಿಯಾದ ಸಚಿವ ಅಶ್ವಥ್ ನಾರಾಯಣ್ ಹಾಗು ಡಿ.ಕೆ.ಸುರೇಶ್ ನಡೆವೆ ವಾಗ್ವಾದ ನಡೆದಿದ್ದು, ನಿನಗೆ ಪ್ರೋಟೊಕಾಲ್ ಗೊತ್ತಿಲ್ಲವಾ, ನಿಂತ್ಕೊ ಇಲ್ಲಿ. ಯಾರು ಉಸ್ತುವಾರಿ ಸಚಿವರು. ನಿನ್ನೆ ನನಗೆ ಆಹ್ವಾನ ಪತ್ರಿಕೆ ಕಳುಹಿಸಿ, ಬೆಳಗ್ಗೆ ಉದ್ಘಾಟನೆ ಮಾಡಿಕೊಳ್ಳುತ್ತಿದ್ದೀಯಾ ಎಂದು ಡಿ.ಕೆ.ಸುರೇಶ್ ಕೂಗಾಡಿದ್ದಾರೆ.

ನಾನು ಈ ಕ್ಷೇತ್ರದ ಸಂಸದ, ನನಗೆ ಪ್ರೋಟಾಕಾಲ್ ಇಲ್ವಾ? ಯಾರೀ ಸಿಇಒ, ಡಿಸಿ?, ಅವರಿಗೆ ಪ್ರೋಟಾಕಾಲ್ ಗೊತ್ತಿಲ್ವಾ? ನೀವೊಬ್ಬ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರೋಟಾಕಾಲ್ ಗೊತ್ತಿಲ್ವಾ? ರಾತ್ರಿ ಆಹ್ವಾನ ಪತ್ರಿಕೆ ಕಳುಹಿಸಿ, ಬೆಳಗ್ಗೆ ಉದ್ಘಾಟನೆ ಮಾಡುವುದಲ್ಲ. ಈ ಜಿಲ್ಲಾಸ್ಪತ್ರೆ ನೀವು ಮಾಡಿದ್ದಲ್ಲ, ನಾವು ಮಾಡಿರುವುದು ಎಂದು ಗುಡುಗಿದರು.ಈ ವೇಳೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ನಿಮ್ಮನ್ನು ಯಾರು ಬರಬೇಡ ಎಂದಿದ್ದು . ಗಲಾಟೆ ಬೇಡ ಮಾತನಾಡೋಣ ಬನ್ನಿ. ಕಾರ್ಯಕ್ರಮ ಮಾಡೋಣ ಬನ್ನಿ ಎಂದರು. ಈ ವೇಳೆ ಡಿಕೆ ಸುರೇಶ್ ಅವರನ್ನ ಅಲ್ಲಿಯೇ ಇದ್ದ ಸಚಿವ ಸುಧಾಕರ್ ಸಮಾಧಾನಪಡಿಸಲು ಪ್ರಯತ್ನಸಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಅತಿಥಿಗಳ ಹೆಸರು ಕರೆದು ಸ್ವಾಗತಿಸುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿನ ಕಾರ್ಯಕರ್ತರು ಸಿಳ್ಳೆಗಳ ಮೂಲಕ ಅಭಿಮಾನ ಮೆರೆದರು. ಒಬ್ಬರಿಗಿಂತ ಒಬ್ಬರು ಸಿಳ್ಳೆಗಳನ್ನು ಪಡೆಯುತ್ತಿದ್ದರು. ಒಂದೇ ವೇದಿಕೆಯಲ್ಲಿದ್ದ ರಾಜಕೀಯ ಎದುರಾಳಿಗಳು ಈ ಮೂಲಕ ಬಲಾಬಲ ಪ್ರದರ್ಶನ ನಡೆಸಲಾಯಿತು

ರಾಮನಗರ ಜಿಲ್ಲಾಸ್ಪತ್ರೆ ಉದ್ಘಾಟನೆ ವೇಳೆ ಜೆಡಿಎಸ್- ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ನೂಕಾಟ ತಳ್ಳಾಟ ನಡೆದಿತ್ತು. ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆಗೆ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹಾಗು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಗಮಿಸಿದ್ದ ವೇಳೆ ಹೈಡ್ರಾಮ ನಡೆಯಿತು. ಬೆಳಗ್ಗೆ 11.12 ರ ಸುಮಾರಿಗೆ ಟೇಪು ಕತ್ತರಿಸಲು ಸಚಿವರು ಆಗಮಿಸುತ್ತಿದಂತೆ ಜೆಡಿಎಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕಿ ಅನಿತಾಕುಮಾರಸ್ವಾಮಿ, ಎಚ್.ಡಿ.ಕುಮಾರಸ್ವಾಮಿ ಅವರು ಬರುವವರೆಗು ಕಾಯಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಅಡ್ಡಿ ಪಡಿಸಿದರು. ಈ ವಿರೋಧದ ನಡುವೆ ಸಚಿವರು ಟೇಪು ಕತ್ತರಿಸಿದರು. ಶಾಸಕಿ ಅನಿತಾ ಕುಮಾರಸ್ವಾಮಿ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬರುವವರೆಗು ಜೆಡಿಎಸ್ ಕಾರ್ಯಕರ್ತರು ಆಸ್ಪತ್ರೆ ಮುಂಭಾಗ ಧಿಕ್ಕಾರ ಕೂಗಿದರು. ಶಾಸಕರು ಬರುವುದು ತಡವಾಗಿದೆ. ಹೀಗಾಗಿ ಉದ್ಘಾಟನೆ ಮಾಡಿದ್ದೆವೆ. ವೇದಿಕೆ ಕಾರ್ಯಕ್ರಮಕ್ಕೆ ಶಾಸಕರು ಬರುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ ಸಚಿವ ಅಶ್ವಥ್ ನಾರಾಯಣ್, ಶಾಸಕರು ಬರುವವರೆಗು ಮೂರು ಹಂತಸ್ಥಿನಿ ಆಸ್ಪತ್ರೆಯನ್ನು ವೀಕ್ಷಿಸಿದರು.












Click it and Unblock the Notifications