ಆ ಭಾಗದವರು ಸುಟ್ಟು ಕರಕಲಾಗಿರ್ತಾರೆ, ಖರ್ಗೆ ನೋಡಿದರೆ ಗೊತ್ತಾಗಲ್ವಾ: ಆರಗ ಜ್ಞಾನೇಂದ್ರ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲ
ಬೆಂಗಳೂರು, ಆಗಸ್ಟ್ 02: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಕುರಿತು ಮಾಜಿ ಗೃಹ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಆರಗ ಜ್ಞಾನೇಂದ್ರ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ.
ಬೀದರ್‌ನ ಜನರಿಗೆ ಮರಗಳು, ಗಿಡಗಳು ಅಥವಾ ನೆರಳಿನ ಬಗ್ಗೆ ಏನೂ ತಿಳಿದಿಲ್ಲ. ಬೀದರ್ ಮೂಲದ ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿದ್ದಾರೆ. ಇದು ನಮ್ಮ ದುರಾದೃಷ್ಟ. ಆ ಭಾಗದವರಿಗೆ ಮಲೆನಾಡಿನ ಜನರ ಜೀವನ ಹಾಗೂ ಪಶ್ಚಿಮ ಘಟ್ಟಗಳಿಗೆ ಹತ್ತಿರವಿರುವವರು ಎದುರಿಸುತ್ತಿರುವ ಸಮಸ್ಯೆಗಳು ತಿಳಿಯುವುದಿಲ್ಲ. ಅಲ್ಲಿನವರು ಬಿಸಿಲಿನ ಜಳಕ್ಕೆ ಸುಟ್ಟು ಕರಕಲಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತದೆ. ಅವರು ಕೂದಲನ್ನೇ ನೆರಳೆಂದು ಭಾವಿಸಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಆರಗ ಜ್ಞಾನೇಂದ್ರ ಹೇಳಿಕೆಗೆ ಕೆಂಡಾಮಂಡಲವಾಗಿರುವ ಕಾಂಗ್ರೆಸ್, 'ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ' ಎಂದು ಹರಿಹಾಯ್ದಿದೆ.
'ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ. ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ' ಎಂದು ಕಾಂಗ್ರೆಸ್ ಹೇಳಿದೆ.
'ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ. ಪಾಶ್ಚಿಮತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ' ಎಂದು ಟೀಕಿಸಿದೆ.

'ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು. ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್ ಖರ್ಗೆಯವರ ಹಾಗೂ ದಲಿತರ ಕ್ಷಮೆ ಕೇಳಬೇಕು' ಎಂದೂ ಕಾಂಗ್ರೆಸ್ ಒತ್ತಾಯಿಸಿದೆ.
ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಆರಗ ಅವರು ಈ ಹಿಂದೆಯೂ ವಿವಾದಿತ ಹೇಳಿಕೆ ನೀಡಿದ್ದರು. ಮೈಸೂರಿನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಾಗ ಆರಗ ವಿವಾದವನ್ನು ಸೃಷ್ಟಿಸಿದ್ದರು. ಗೃಹ ಸಚಿವರಾಗಿದ್ದ ಅವರು ಕಾಂಗ್ರೆಸ್‌ನವರು ನಮ್ಮನ್ನು ರೇಪ್ ಮಾಡುತ್ತಿದ್ದಾರೆ ಎನ್ನುವ ಮೂಲಕ ಟೀಕೆ ಗುರಿಯಾಗಿದ್ದರು.












Click it and Unblock the Notifications