ದೇವನಹಳ್ಳಿ-ತಮಿಳುನಾಡು ಗಡಿ ತನಕ 110.40 ಕಿ. ಮೀ. ರಸ್ತೆ ಅಭಿವೃದ್ಧಿ, ಏನಿದು ಯೋಜನೆ?
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ದೇವನಹಳ್ಳಿ-ತಮಿಳುನಾಡು ಗಡಿವರೆಗೆ 110.40 ಕಿ. ಮೀ. ರಸ್ತೆ ಅಭಿವೃದ್ಧಿಗೆ ಅನುಮೋದನೆಯನ್ನು ನೀಡಿದೆ. ಈ ಯೋಜನೆಯನ್ನು ಮೂರು ಪ್ಯಾಕೇಜ್ ಆಗಿ ವಿಂಗಡನೆ ಮಾಡಲಾಗಿದ್ದು, ಒಟ್ಟು ಯೋಜನಾ ವೆಚ್ಚ 3,190 ಕೋಟಿ ರೂ.ಗಳು. ಬೆಂಗಳೂರು ನಗರದ ಸುತ್ತಿಲಿನ ಈ ರಸ್ತೆ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ಹೈಬ್ರಿಡ್ ವರ್ಷಾಸನ (ಎಚ್‌ಎಎಂ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ.
ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ 110 ಕಿ. ಮೀ. ರಸ್ತೆ ಅಭಿವೃದ್ಧಿ. ದೇವನಹಳ್ಳಿ-ವಿಜಯಪುರ-ಹೆಚ್.ಕ್ರಾಸ್-ವೇಮಗಲ್-ಮಾಲೂರು ತಮಿಳುನಾಡು ಗಡಿವರೆಗೆ (ಮಾಲೂರು-ಹೊಸಕೋಟೆ ರಸ್ತೆ ಸೇರಿದಂತೆ) 110.40 ಕಿ. ಮೀ. ಉದ್ದದ ರಸ್ತೆಯನ್ನು ಹೈಬ್ರಿಡ್ ವರ್ಷಾಸನ ಮಾದರಿಯಲ್ಲಿ (HAM) ಒಟ್ಟಾರೆ ರೂ. 3190.00 ಕೋಟಿಗಳ ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಈ ಯೋಜನಾ ವೆಚ್ಚ ರೂ. 3190.00 ಕೋಟಿ ರೂ.ಗಳು. ಪ್ಯಾಕೇಜ್ 01: ವೇಮಗಲ್-ಮಾಲೂರು ಮತ್ತು ಮಾಲೂರು ಕೈಗಾರಿಕಾ ಪ್ರದೇಶ-ತಮಿಳುನಾಡು ಗಡಿಯವರೆಗೆ. ರೂ. 958.00 ಕೋಟಿ (ಕೆಶಿಪ್). ಪ್ಯಾಕೇಜ್-02: ಹೊಸಕೋಟೆ-ಮಾಲೂರು, ಮಾಲೂರಿನಲ್ಲಿ Elevated Corridor ಸೇರಿ ಮಾಲೂರು ಕೈಗಾರಿಕಾ ಪ್ರದೇಶ ಒಳಗೊಂಡಂತೆ ರೂ.1054.00 ಕೋಟಿ (ಕೆಶಿಪ್). ಪ್ಯಾಕೇಜ್-3: ದೇವನಹಳ್ಳಿ-ಕೋಲಾರ ರೂ. 11178.00 ಕೋಟಿ (ಕೆಆರ್‌ಡಿಸಿಎಲ್).
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ: ಬೆಂಗಳೂರು-ಚೆನ್ನೈ ನಡುವೆ ಸಂಪರ್ಕವನ್ನು ಕಲ್ಪಿಸಲು ಈಗಾಗಲೇ ಕೇಂದ್ರ ಸರ್ಕಾರ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುತ್ತಿದೆ. 2025ರಲ್ಲಿ ಇದು ಉದ್ಘಾಟನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಉಭಯ ನಗರಗಳ ನಡುವೆ ಎರಡೂವರೆ ಗಂಟೆಯಲ್ಲಿ ಸಂಚಾರ ನಡೆಸಬಹುದಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು-ಚೆನ್ನೈ ನಡುವಿನ 288 ಕಿ. ಮೀ. ಉದ್ದದ ಎಕ್ಸ್‌ಪ್ರೆಸ್ ವೇ ಕರ್ನಾಟಕದ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ಮೂರು ರಾಜ್ಯಗಳನ್ನು ಸಂಪರ್ಕಿಸುತ್ತದೆ. ಕರ್ನಾಟಕದಲ್ಲಿ 71 ಕಿ. ಮೀ., ಆಂಧ್ರ ಪ್ರದೇಶದಲ್ಲಿ 72 ಕಿ. ಮೀ. ಮತ್ತು ತಮಿಳುನಾಡಿನಲ್ಲಿ 145 ಕಿ. ಮೀ. ಹಾದು ಹೋಗಲಿದೆ. ರಾಜ್ಯದಲ್ಲಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇನಲ್ಲಿ ತಮಿಳುನಾಡಿನಲ್ಲಿ ಶೇ 50, ಆಂಧ್ರದಲ್ಲಿ ಶೇ 60ರಷ್ಟು ಪೂರ್ಣಗೊಂಡಿದೆ. 2025ರ ಮಾರ್ಚ್‌ಗೆ ಈ ಹೆದ್ದಾರಿ ಜನರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಉಭಯ ನಗರಗಳ ನಡುವಿನ ಅಂತರ 350 ಕಿ. ಮೀ. ಇಂದ 288 ಕಿ. ಮೀ.ಗೆ ಕಡಿಮೆಯಾಗಲಿದೆ.
ಈ ಮಾರ್ಗದ ನಿರ್ಮಾಣ ಕಾಮಗಾರಿ ಕುರಿತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಯೋಜನಾ ನಿರ್ದೇಶಕಿ ಅರ್ಚನಾ ಮಾತನಾಡಿದ್ದು, "ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ರಾಜ್ಯದಲ್ಲಿ 71 ಕಿ. ಮೀ. ಹಾದು ಹೋಗುತ್ತದೆ. ಈಗಾಗಲೇ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದೆ. ಉಳಿದ ಕಾಮಗಾರಿಯು ನವೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ನಂತರ ಬಹುಬೇಗನೆ ಎರಡೂ ನಗರವನ್ನು ಸಂಪರ್ಕಿಸಬಹುದು" ಎಂದು ಹೇಳಿದರು.












Click it and Unblock the Notifications