ವಿವಾದ ಎಬ್ಬಿಸಿದ ರಾಜೀವ್ ಗಾಂಧಿ ಆರೋಗ್ಯ ವಿವಿ ಜಾತಿ ರಾಜಕೀಯ!
ಬೆಂಗಳೂರು, ಮೇ 17 : ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸುದ್ದಿಯಲ್ಲಿದೆ. ದಂತ ವೈದ್ಯಕೀಯ ವಿಭಾಗದ ನಾಮ ನಿರ್ದೇಶಿತ ಸದಸ್ಯರ ನೇಮಕಾತಿಯನ್ನು ಬದಲಾವಣೆ ಮಾಡಲು ಒತ್ತಡ ಹಾಕಲಾಗುತ್ತಿದೆ ಎಂಬುದು ಆರೋಪ. ಜಾತಿ, ಹಣ, ಅಧಿಕಾರದ ಪ್ರಭಾವ ಮುಂತಾದ ಲಾಬಿಗಳು ಇದರ ಹಿಂದೆ ಅಡಗಿವೆ ಎಂಬ ಮಾತು ಕೇಳಿ ಬರುತ್ತಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಪಲತಿ ಡಾ. ಸಚ್ಚಿದಾನಂದ ಸಹಿ ಇರುವ ಆದೇಶ 6/5/2020ರಂದು ಹೊರಬಿದ್ದಿದೆ. faculty of dentistryಗೆ ಸಂಬಂಧಿಸಿದ ಆದೇಶವಿದು. ಒಟ್ಟು ನಾಲ್ಕು ವಿಭಾಗದಡಿ ಸದಸ್ಯರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ. ಕುಪತಿಗಳಿಂದ ರಾಜ್ಯಪಾಲರ ತನಕ ಹೋಗಿ ಅಂತಿಮ ಆದೇಶ ಮೇ 6ರಂದು ಪ್ರಕಟವಾಗಿದೆ. ಆದರೆ, ಮಾರ್ಚ್ 28ರಿಂದಲೇ ಅನ್ವಯವಾಗುವಂತೆ ಮೂರು ವರ್ಷಗಳ ಕಾಲ ಸದಸ್ಯರ ಅವಧಿ ಇರಲಿದೆ.
ಡೀನ್, ಛೇರ್ ಪರ್ಸನ್ ಆಫ್ ಬೋರ್ಡ್ ಆಫ್ ಸ್ಟಡೀಸ್, ಪ್ರಾಧ್ಯಾಪಕರು, ಸಹಾಯಕ ಪ್ರೊಫೆಸರ್/ರೀಡರ್ ಸೇರಿದಂತೆ ವಿವಿಧ ವಿಭಾಗದಡಿ ಸದಸ್ಯರನ್ನು ನಾಮ ನಿರ್ದೇಶನ ಮಾಡಿಕೊಳ್ಳಲು ಕುಲಪತಿಗಳಿಗೆ ಅವಕಾಶವಿದೆ. ಕುಲಪತಿಗಳ ಶಿಫಾರಸಿಗೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ ಮೇಲೆ ಅಂತಿಮ ಆದೇಶ ಪ್ರಕಟವಾಗಿದೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿರುವ ಶರಾವತಿ ದಂತ ವೈದ್ಯಕೀಯ ಕಾಲೇಜಿನ ಓರಲ್ ಫ್ಯಾಥಾಲಜಿ ವಿಭಾಗದ ಡಾ. ಪ್ರದೀಪ್ ಎಂ.ಮೆಲ್ಲೋ ಅವರನ್ನು faculty of dentistryಗೆ ನೇಮಕ ಮಾಡಲಾಗಿದೆ. ಆದರೆ, ಇವರನ್ನು ಬದಲಾವಣೆ ಮಾಡಬೇಕು ಎಂಬ ಒತ್ತಡ ಕೇಳಿ ಬಂದಿದೆ.
ಹಣ, ಅಧಿಕಾರದ ಪ್ರಭಾವ ಹೀಗೆ ಯಾವುದೇ ಲಾಬಿ ಇಲ್ಲದೇ ಡಾ. ಪ್ರದೀಪ್ ಎಂ. ಮೆಲ್ಲೋ ಸದಸ್ಯರಾಗಿ ನೇಮಕಗೊಂಡಿದ್ದಾರೆ. ನೇಮಕಗೊಂಡಿರುವ ಆದೇಶ ಡಾ. ಪ್ರದೀಪ್ ಕೈ ಸೇರಿ ಇನ್ನೂ ಮೂರು ದಿನ ಕಳೆದಿಲ್ಲ. ಆಗಲೇ ಅವರನ್ನು ಬದಲಾವಣೆ ಮಾಡಬೇಕು ಎಂಬ ಸುದ್ದಿ ಚಾಲ್ತಿಗೆ ಬಂದಿದೆ.
ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಸಚಿವಾಲಯದ ಅಡಿ ಬರುತ್ತದೆ. ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಸಹ ಡಾ. ಪ್ರದೀಪ್ ಬದಲಾವಣೆಗೆ ಮುಂದಾಗಿದ್ದಾರೆ. ಸೋಮವಾರದ ಬಳಿಕ ನಾಮ ನಿರ್ದೇಶಿತ ಸದಸ್ಯ ಡಾ. ಪ್ರದೀಪ್ ಎಂ. ಮೆಲ್ಲೋ ಬದಲಾವಣೆ ಆಗಬಹುದು ಎಂಬ ಸುದ್ದಿ ಹಬ್ಬಿದೆ.
ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಡಾ. ಪ್ರದೀಪ್ ಎಂ. ಮೆಲ್ಲೋ ಈ ಕುರಿತು ಮಾತನಾಡಿದರು. "ನಾನು ನಾಮ ನಿರ್ದೇಶಿತ ಸದಸ್ಯನಾಗಲು ಯಾವುದೇ ಲಾಬಿ ಮಾಡಿಲ್ಲ. ಈಗ ನನ್ನನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದ್ದು, ಕಾರಣವೂ ತಿಳಿಯುತ್ತಿಲ್ಲ. ಬದಲಾವಣೆ ಮಾಡುವುದಾದರೆ ನಾಮ ನಿರ್ದೇಶನ ಮಾಡಿದ್ದು ಏಕೆ?" ಎಂದರು.
"ಹೊಸ ನಾಮ ನಿರ್ದೇಶಿತ ಸದಸ್ಯರು ನೇಮಕವಾದ ಮೇಲೆ ಲಾಕ್ ಡೌನ್ ಪರಿಣಾಮ ಯಾವುದೇ ಸಭೆ ನಡೆದಿಲ್ಲ. ಸಭೆಗೆ ಗೈರಾದರೆ ಬದಲಾವಣೆ ಮಾಡಲಿದ್ದಾರೆ ಎನ್ನಬಹುದಿತ್ತು. ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ನಾಮ ನಿರ್ದೇಶನಗೊಂಡಿದ್ದಕ್ಕೆ ನಮ್ಮ ಸಮುದಾಯದವರು ಸಂತಸಗೊಂಡಿದ್ದರು. ಈಗ ಅವರು ಬೇಸರಗೊಂಡಿದ್ದಾರೆ" ಎಂದು ಪ್ರದೀಪ್ ಎಂ. ಮೆಲ್ಲೋ ಹೇಳಿದರು.
ಬದಲಾವಣೆ ಹಿಂದೆ ಜಾತಿಯ ನೆರಳು? : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಾಮ ನಿರ್ದೇಶಿತ ಸದಸ್ಯರಲ್ಲಿ ಶೇ 80ರಷ್ಟು ಜನರು ಲಿಂಗಾಯತರು. ಕೆಲವು ಒಕ್ಕಲಿಗ, ಕುರುಬ ಸಮುದಾಯದವರು ಇದ್ದಾರೆ. ಆದರೆ, ಪ್ರದೀಪ್ ಎಂ. ಮೆಲ್ಲೋ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರು. ಅಲ್ಲದೇ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡವರು.
ಈ ಹಿನ್ನಲೆಯಲ್ಲಿಯೇ ಅವರನ್ನು ಬದಲಾವಣೆ ಮಾಡಲು ಡಿಸಿಎಂ ಮತ್ತು ಮುಖ್ಯಮಂತ್ರಿಗಳ ಕಡೆಯಿಂದ ಒತ್ತಡ ಬಂದಿದೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ, ಕಾರಣವೇ ಇಲ್ಲದೆ ನಾಮ ನಿರ್ದೇಶಿತ ಸದಸ್ಯರನ್ನು ಕೆಲವೇ ದಿನದಲ್ಲಿ ಬದಲಾವಣೆ ಮಾಡಲು ಹೊರಟಿರುವುದು ವಿವಾದದ ಕಿಡಿ ಹೊತ್ತಿಸಿದೆ.
ವಿವಿ ಬಗ್ಗೆ ಹರಿದಾಡುತ್ತಿರುವ ಈ ಸುದ್ದಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕುಪಲತಿ ಡಾ. ಸಚ್ಚಿದಾನಂದ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸಲಾಯಿತು. ಆದರೆ, ಲೇಖನ ಬರೆಯುವ ಹೊತ್ತಿಗೆ ಅವರ ಮೊಬೈಲ್ ನಾಟ್ ರೀಚಬಲ್ ಆಗಿತ್ತು.












Click it and Unblock the Notifications