ವೈದ್ಯಕೀಯ ಪ್ರಮಾಣಪತ್ರಕ್ಕೆ ಶಾಶ್ವತ ಮಂಡಳಿ ನೇಮಿಸಿ-ಹೈಕೋರ್ಟ್
ಬೆಂಗಳೂರು, ಮೇ 24: ಸರ್ಕಾರಿ ನೇಮಕದಲ್ಲಿ ವೈದ್ಯಕೀಯ ಪ್ರಮಾಣಪತ್ರದ ಹಲವು ವರ್ಷಗಳಿಂದ ಗೊಂದಲ ಮುಂದುವರಿದೇ ಇದೆ. ಇದೀಗ ಹೈಕೋರ್ಟ್ ಅದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಆದೇಶವನ್ನು ನೀಡಿದೆ.
ಅದೆಂದರೆ ಸರ್ಕಾರಿ ಹುದ್ದೆಗಳ ನೇಮಕಕ್ಕೆ ನೀಡುವ ವೈದ್ಯಕೀಯ ಪ್ರಮಾಣಗಳನ್ನು ನೀಡಲು ಶಾಶ್ವತ ವೈದ್ಯಕೀಯ ಮಂಡಳಿಯನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿರುವುದು.
ಹಾಸನದ ಬಿ.ಎನ್. ಶಿವನಂಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ಧ ವಿಭಾಗೀಯಪೀಠ ಈ ಮಹತ್ವದ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮೂಲಕ ನಡೆಯುವ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪ್ರಮಾಣಪತ್ರ ನೀಡುವ ವಿಚಾರದಲ್ಲಿ ಪಾದರ್ಶಕತೆ ಕಾಯ್ದುಕೊಳ್ಳಲು ಶಾಶ್ವತ ವೈದ್ಯಕೀಯ ಮಂಡಳಿಯನ್ನು ನೇಮಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹೈಕೋರ್ಟ್ ಆದೇಶವೇನು?
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಿಂಟೋ ಆಸ್ಪತ್ರೆಯಲ್ಲಿ ಶಿವನಂಜೇಗೌಡ ದೇಹದಾರ್ಢ್ಯ ಪರೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ 2022ರ ಏ.18ರಂದು ಆದೇಶಿಸಿತ್ತು. ಅದರಂತೆ ಮಿಂಟೋ ಆಸ್ಪತ್ರೆ ವೈದ್ಯರು ದೇಹದಾರ್ಢ್ಯ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರು. ಶಿವನಂಜೇಗೌಡ ಅವರಿಗೆ ಬಣ್ಣದ ದೃಷ್ಟಿದೋಷ ಇಲ್ಲ ಮತ್ತು ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಹರಾಗಿದ್ದಾರೆದು ವರದಿಯಲ್ಲಿ ಪ್ರಮಾಣಿಕರಿಸಲಾಗಿತ್ತು.
ಈ ವರದಿ ಒಪ್ಪಿರುವ ಹೈಕೋರ್ಟ್, ಅರ್ಜಿದಾರರು ಅರ್ಹರಾಗಿದ್ದರೂ ಬೌರಿಂಗ್ ಆಸ್ಪತ್ರೆಯು ವೈದ್ಯರು ನೀಡಿದ ದೇಹದಾರ್ಢ್ಯ ಪರೀಕ್ಷೆಯ ತಪ್ಪು ಪ್ರಮಾಣಪತ್ರದಿಂದ ಅರ್ಜಿದಾರರು ಹುದ್ದೆ ಕಳೆದುಕೊಂಡಿರುವುದು ದುರದೃಷ್ಟಕರ. ಆದ್ದರಿಂದ ಅರ್ಜಿದಾರರು ಅರ್ಜಿಯನ್ನು ತಿರಸ್ಕರಿಸಿರುವ ಕೆಎಪಿಎಸ್‌ಸಿ ಆದೇಶ ರದ್ದುಪಡಿಸಲಾಗುವುದು, ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿದಾರರನ್ನು ಮತ್ತೇ ಪುನರ್ ಪರಿಗಣಿಸಬೇಕು ಎಂದು ಆದೇಶಿಸಿದೆ.
ಅಲ್ಲದೆ, ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಹುದ್ದೆ ಪಡೆಯುವುದರಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ನ್ಯಾಯದೊರೆಯಬೇಕು. ಇದರಿಂದ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಶಾಶ್ವತವಾದ ವೈದ್ಯಕೀಯ ಮಂಡಳಿಯನ್ನು ರಾಜ್ಯ ಸರ್ಕಾರ ನೇಮಕ ಮಾಡಬೇಕು. ಆ ಮೂಲಕ ತನ್ನಚ್ಛೆಯಂತೆ ವೈದ್ಯಕೀಯ ಮಂಡಳಿ ಮತ್ತು ಪರಿಣಿತರನ್ನು ನೇಮಕ ಮಾಡಲು ಕೆಪಿಎಸ್‌ಸಿಗೆ ಮುಕ್ತ ಅವಕಾಶ ಕಲ್ಪಿಸಬಾರದು ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಅರ್ಜಿದಾರ ಶಿವನಂಜೇಗೌಡ ಮೋಟಾರು ವಾಹನ ಇನ್ಸ್‌ಪೆಕ್ಟರ್ ಹುದ್ದೆಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ದೇಹದಾರ್ಢ್ಯ ಪರೀಕ್ಷೆ ನಡೆಸಿದ್ದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ವೈದ್ಯ ಜಿ.ನಂದಕುಮಾರ್ ಪ್ರಮಾಣ ಪತ್ರ ನೀಡಿ, ಶಿವನಂಜೇಗೌಡ ಅವರಿಗೆ ಬಣ್ಣ ದೃಷ್ಟಿ ದೋಷವಿದೆ. ನಿಗದಿತ ಎತ್ತರಕ್ಕಿಂತ ಅರ್ಧ ಸೆಂಟಿಮೀಟರ್ ಕಡಿಮೆ ಇದ್ದಾರೆಂದು ತಿಳಿಸಿದ್ದರು.
ಈ ಪ್ರಮಾಣಪತ್ರ ಆಧರಿಸಿ ಕೆಪಿಎಸ್‌ಸಿಯು ಶಿವನಂಜೇಗೌಡ ಅವರ ಅರ್ಜಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಶಿವನಂಜೇಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೆಎಟಿಯು ಕೆಪಿಎಸ್‌ಸಿ ಕ್ರಮವನ್ನು ಒಪ್ಪಿತ್ತು. ಆದ್ದರಿಂದ ಶಿವನಂಜೇಗೌಡ ಹೈಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications