• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಗವಿಕಲರ ಆರೋಗ್ಯಕ್ಕಾಗಿ 5 ಲಕ್ಷದವರೆಗೂ ಚಿಕಿತ್ಸಾ ವೆಚ್ಚ ಘೋಷಣೆ: ಬಸವರಾಜ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 3: ಅಂಗವಿಕಲರ ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ ರೂಪಿಸಿ, 5 ಲಕ್ಷದ ವರೆಗಿನ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಯೋಜನೆ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಶನಿವಾರ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ವತಿಯಿಂದ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ -2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಚೇತನರು ದೈರ್ಯದಿಂದ ಯಶಸ್ವಿಯಾಗಿ.‌ಬದುಕು ನಡೆಸಲು ಸರ್ಕಾರ ಎಲ್ಲ ಸಹಕಾರವನ್ನು ನೀಡಲಿದೆ. ಸರ್ಕಾರ ನಿರ್ಮಿಸುವ ಮನೆಗಳಲ್ಲಿ ಅಂಗವಿಕಲರಿಗೆ ನೀಡುವಲ್ಲಿ ಶೇ.3 ರಷ್ಟು ಮೀಸಲಾತಿಯನ್ನು ನೀಡಲಾಗುವುದು. ಬುದ್ಧಿಮಾಂದ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್ ಶಾಪ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು.

ಅಂಗವಿಕಲರಿಗೆ ಮಾರ್ಚ್ 31ರೊಳಗೆ 2 ಸಾವಿರ ಟ್ರೈ ಸೈಕಲ್

ಇನ್ನೂ ಸರ್ಕಾರದ ವತಿಯಿಂದ ಅಂಗವಿಕಲಿಗೆ ಪವರ್ಡ್ ಟ್ರೈಸೈಕಲ್ ನೀಡಲಾಗುತ್ತಿದೆ. ಈ ವರ್ಷ ಈ ಯೋಜನೆಗೆ 25 ಕೋಟಿ ರೂ.ಗಳನ್ನು ನೀಡಿ 2 ಸಾವಿರ ಟ್ರೈ ಸೈಕಲ್ ಗಳನ್ನು ಮಾರ್ಚ್ 31ರೊಳಗೆ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.

ಮುಂದಿನ ಬಜೆಟ್ ನಲ್ಲಿ ವಿಕಲಚೇತನರ ವಿದ್ಯಾಭ್ಯಾಸಕ್ಕಾಗಿ ವಿಶೇಷ ಅನುದಾನ

ವಸತಿ ಶಾಲೆಗಳಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ನೀಡಲಾಗುತ್ತಿದ್ದ 6800 ರೂ.ಗಳನ್ನು 10200 ರೂ.ಗಳಿಗೆ ಹೆಚ್ಚಿಸಲಾಗಿದೆ. ಬುದ್ಧಿಮಾಂದ್ಯ ಮಕ್ಕಳ ವಸತಿರಹಿತ ಶಾಲೆಗಳಲ್ಲಿ ನೀಡಲಾಗುತ್ತಿದ್ದ 6000 ರೂ.ಗಳನ್ನು 9000 ರೂ.ಹೆಚ್ಚಿಸಿ ನೀಡಲಾಗುತ್ತಿದೆ. ಅಂಧಕಿವುಡ ಮಕ್ಕಳ ವಸತಿ ಶಾಲೆಗಳಲ್ಲಿರುವವರಿಗೆ 9300 ರೂ.ಗಳನ್ನು, ವಸತಿರಹಿತ ಶಾಲೆಗಳ ಅಂಧಕಿವುಡ ಮಕ್ಕಳಿಗೆ 7800 ರೂ.ಗಳನ್ನು ,ಹಗಲುಸೇವೆ ಯೋಗಕ್ಷೇಮ ಕೇಂದ್ರಗಳಿಗೆ 15000 ರೂ.ಗಳನ್ನು , ವೃದ್ಧಾಶ್ರಮ ಕೇಂದ್ರಗಳ ನಿರ್ವಹಣೆಗೆ 12 ಲಕ್ಷ ರೂ. ನೀಡಲಾಗುತ್ತಿದೆ. ಮುಖ್ಯಮಂತ್ರಿಯಾದ ತಕ್ಷಣ ವಿಕಲಚೇತನರ ಮಾಸಾಶನವನ್ನು ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸವಲತ್ತುಗಳನ್ನು ಹೆಚ್ಚಿಸಲಾಗುವುದು. ಆಸಿಡ್ ದಾಳಿಯಿಂದ ಬಳಲುವ ಹೆಣ್ಣು ಮಕ್ಕಳಿಗೆ 3000 ರೂ. ದಿಂದ 10000 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಕಲಚೇತನರ ವಿದ್ಯಾಭ್ಯಾಸಕ್ಕಾಗಿ ಮುಂದಿನ ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ಮೀಸಲಿರಿಸಲಾಗುವುದು ಎಂದರು.


ದೇವರು ಸೃಷ್ಟಿ ಮಾಡುವಾಗ ಹಲವಾರು ಸವಾಲುಗಳನ್ನು ಮನುಷ್ಯನಿಗೆ ಇಟ್ಟಿರುತ್ತಾನೆ. ಎಲ್ಲ ಅಂಗ ಇದ್ದವರಿಗೂ ದೇವರು ಸವಾಲು ಇಟ್ಡಿರುತ್ತಾನೆ‌. ಅಂಗಾಂಗಳ ಕೊರತೆ ಇದೆಯೆಂಬ ಕೀಳರಿಮೆ ಬೇಡ.ವಿಕಲಚೇತನರು ವಿಶೇಷವಾದ ದೇವರ ಮಕ್ಕಳು. ಸವಾಲುಗಳನ್ನು ಎದುರಿಸುವ ವಿಶೇಷ ಶಕ್ತಿಯನ್ನು ಹಾಗೂ ಮನೋಸ್ಥೈರ್ಯವನ್ನು ದೇವರು ನಿಮಗೆ ನೀಡಿದ್ದಾನೆ. ನೀವು ಆತ್ಮ ವಿಶ್ವಾಸದಿಂದ ಇರಬೇಕು. ನಾವೂ ಇತರರಂತೆ ಬದುಕಿ ತೋರಿಸುತ್ತೇವೆ ಎಂಬ ಛಲ ಮತ್ತು ನಂಬಿಕೆ ಇರಬೇಕು. ನಿಮಗೆ ಅನುಕಂಪದ ಅವಶ್ಯಕತೆ ಇಲ್ಲ. ವಿಕಲಚೇತನರನ್ನು ಸಶಕ್ತಗೊಳಿಸುವ ಸಮಾಜದ ಅವಶ್ಯಕತೆ ಇದೆ. ಕೆಳಗೆ ಬೀಳುವ ವ್ಯಕ್ತಿಯನ್ನು ಮೇಲೆತ್ತುವುದು ಮಾನವ ಧರ್ಮ, ಅದನ್ನು ಮನುಷ್ಯರು ಮರೆಯದೇ ನೆರವು ನೀಡಬೇಕು. ಇದು ವಿಶ್ವ ಮಾನವ ಸಮಾಜ. ಒಬ್ಬರಿಗೊಬ್ಬರು ಕೈ ಹಿಡಿದು ನಡೆಯುವ ಮಾನವೀಯ ಗುಣವನ್ನು ಎಲ್ಲರೂ ಪಾಲಿಸಬೇಕು ಎಂದರು.

ಎಲ್ಲ ಅಂಗಾಂಗಳು ಸರಿಯಿದ್ದವರಿಗೂ ಸಮಾಧಾನ ಇರುವುದಿಲ್ಲ. ಪರೋಪಕಾರದ ಗುಣವನ್ನು ಬೆಳೆಸಿಕೊಂಡರೆ ಮಾತ್ರ ಸಮಾಧಾನ ದೊರೆಯುತ್ತದೆ. ಸಶಕ್ತರಾಗಿರುವವರು ದಿವ್ಯಾಂಗ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸಹಾಯ ಮಾಡಬೇಕು. ರಾಜ್ಯದಲ್ಲಿ ಸುಮಾರು 40 ರಿಂದ 50 ಲಕ್ಷ ದಿವ್ಯಾಂಗ ಮಕ್ಕಳಿದ್ದು, ಅವರ ಬೆಳವಣಿಗೆಗೆ ಏಳು ಕೊಟಿ ಕನ್ನಡಿಗರು ಸಹಾಯ ಮಾಡುವ ಹೃದಯಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ದೇವರ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕು.ದಿವ್ಯಾಂಗ ಮಕ್ಕಳನ್ನು ಬೆಳೆಸುವ ಪ್ರತಿಜ್ಞೆ ತೆಗೆದುಕೊಳ್ಳಬೇಕು ಎಂದು ಕನ್ನಡ ಜನತೆಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಚಿವ ಹಾಲಪ್ಪ ಆಚಾರ್, ಸಂಸದ ಪಿ.ಸಿ.ಮೋಹನ್,ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬಸವರಾಜ ಬೊಮ್ಮಾಯಿ
Know all about
ಬಸವರಾಜ ಬೊಮ್ಮಾಯಿ
English summary
Announcement of treatment cost up to 5 lakhs for the health of disabled Says Cm Basavaraj Bommai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X