ರಾಜ್ಯಕ್ಕೆ ಎಂಟ್ರಿ ಕೊಟ್ಟ ಅಮಿತ್ ಶಾ; ಕಾಂಗ್ರೆಸ್‌ಗೆ ಖೆಡ್ಡಾ ಫಿಕ್ಸ್ ಆಯ್ತಾ?- ಸುನೀಲ್ ಕುಮಾರ್ ಕೊಟ್ಟ ಮಾಹಿತಿ ಇಲ್ಲಿದೆ
ಬೆಂಗಳೂರು, ಏಪ್ರಿಲ್ 02: ಲೋಕಸಭಾ ಚುನಾವಣೆ ಹಿನ್ನೆಲೆ ಭರ್ಜರಿ ತಯಾರಿ ನಡೆಸಿದ್ದು, ರಾಜ್ಯಕ್ಕೆ ರಾಜಕೀಯ ಚಾಣಾಕ್ಷ ಹಾಗೂ ಕೇಂದ್ರ ಗೃಹ ಸಚಿರಾದ ಅಮಿತ್ ಶಾ ಅವರು ಆಗಮಿಸಿದ್ದಾರೆ. 28 ಕ್ಷೇತ್ರಗಳನ್ನ ಗೆಲ್ಲುವ ಮೂಲಕ ಆಡಳಿತರೂಢ ಕಾಂಗ್ರೆಸ್ ಗೆ ಸೋಲಿನ ರುಚಿ ತೋರಿಸಲು ಮಾಸ್ಟರ್ ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಆಗಮಿಸಿದ್ದು, ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಕ್ತಿ ಕೇಂದ್ರ ಮೇಲ್ಪಟ್ಟ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.

ಜವಾಬ್ದಾರಿ ಇರುವ 5 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ನೇರವಾಗಿ 5 ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಜೊತೆ ನಮ್ಮ ನಾಯಕರು ಮಾತನಾಡಲಿದ್ದಾರೆ. ಬಳಿಕ ಚನ್ನಪಟ್ಟಣದಲ್ಲಿ ರೋಡ್ ಶೋ ಇರುತ್ತದೆ. ಮೊದಲ ಹಂತದಲ್ಲಿ ನಡೆಯುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಮೇಲೆ ದೊಡ್ಡ ಪರಿಣಾಮ ಉಂಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಳಿಸಿದ್ದೇವೆ. ಇವೆರಡು ಕಾರ್ಯಕ್ರಮದ ಹೊರತಾಗಿ ನಡುವಿನ ಸಮಯಾವಕಾಶದಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಬೀದರ್, ಬೆಳಗಾವಿ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಅವರು ಮಾತುಕತೆ ಮಾಡಲಿದ್ದಾರೆ. ಈ ಮೂಲಕ ಚುನಾವಣಾ ಸಿದ್ಧತೆ ಮಾಡಲಿದ್ದಾರೆ ಎಂದು ಹೇಳಿದರು.
ಥೋಡೋ ವಿರುದ್ಧ ಜೋಡೋ ಇದು ಕರ್ನಾಟಕ ಚುನಾವಣೆಯ ಘೋಷಣೆ. ಕಳೆದ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ಈ ಬಾರಿ ಮೊದಲ ವಿಜಯ ಅಲ್ಲಿಂದಲೇ ಆರಂಭವಾಗಲಿದೆ. ಆ ಕಾರಣಕ್ಕಾಗಿ ಅಲ್ಲಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತೇವೆ ಎಂದು ಸುನೀಲ್ ಕುಮಾರ್ ಅವರು ವಿವರಿಸಿದರು.
ನಮ್ಮ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯು ರಾಜ್ಯ ನಾಯಕರ ಉಪಸ್ಥಿತಿಯಲ್ಲಿ ನಡೆಯುತ್ತಿದೆ ಎಂದರಲ್ಲದೆ, ಬಿಜೆಪಿ 200ಕ್ಕಿಂತ ಹೆಚ್ಚು ಸೀಟು ಗೆಲ್ಲುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, 400ರ ಸಂಖ್ಯೆ ದಾಟುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ. ದೇಶದಲ್ಲಿ 400 ಸೀಟು ಗೆಲ್ಲುವುದು ನಮಗೆ ಗೊತ್ತಿದೆ. ನೀವು ಕರ್ನಾಟಕದಲ್ಲಿ ಖಾತೆ ತೆರೆದರೆ ಸಾಕು ಎಂದು ಸವಾಲೆಸೆದರು. 400 ಸೀಟು ಗೆಲ್ಲಲು ಕರ್ನಾಟಕದ ಎಲ್ಲ ಸೀಟುಗಳನ್ನೂ ರಾಜ್ಯದ ಜನತೆ ಗೆಲ್ಲಿಸಿಕೊಡಲಿದ್ದಾರೆ, ಬಿಜೆಪಿಯ 400ರ ಗುರಿಯ ಕುರಿತು ನೀವು ಚಿಂತಿಸಬೇಡಿ ಎಂದು ತಿಳಿಸಿದರು.
ನಾವು ಜೆಡಿಎಸ್ ಜೊತೆ ಹೇಗೆ ಹೊಂದಾಣಿಕೆ ಮಾಡಬೇಕೆಂಬುದು ನಮಗೆ ಗೊತ್ತಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಕಾರ್ಯಕರ್ತರನ್ನು ಹೇಗೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಬೇಕಾದ ಪ್ರಯತ್ನ ಮಾಡಲಿ ಎಂದು ಹೇಳಿದರು.












Click it and Unblock the Notifications