ಮುಂದಿನ ವಾರದಿಂದ ಹೆಚ್ಚಳವಾಗಲಿದೆ ಖಾಸಗಿ ಬಸ್‌ ದರ

ಬೆಂಗಳೂರು, ಏಪ್ರಿಲ್ 08: ಎಲ್‌ಪಿಜಿ, ಡೀಸೆಲ್, ಪೆಟ್ರೋಲ್ ಸರ್ಕಾರಿ ಬಸ್, ನಮ್ಮ ಮೆಟ್ರೋ, ಹಾಲು, ವಿದ್ಯುತ್ ದರ ಏರಿಕೆ ಬಳಿಕ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಖಾಸಗಿ ಬಸ್ ದರ ಏರಿಕೆಯ ಪ್ರಸ್ತಾಪ ಕೇಳಿ ಬಂದಿದೆ. ಆದ್ದರಿಂದ ಜನರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ. ಈಗಾಗಲೇ ಖಾಸಗಿ ಬಸ್‌ಗಳ ದರ ಹೆಚ್ಚು ಎಂಬ ಜನರ ಆರೋಪದ ನಡುವೆಯೇ ಈ ಬೆಲೆ ಏರಿಕೆ ಬೇಡಿಕೆ ಕೇಳಿ ಬಂದಿದೆ.

ಜನವರಿಯಲ್ಲಿ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಬಸ್‌ಗಳ ದರಗಳನ್ನು ಏರಿಕೆ ಮಾಡಲು ಅನುಮೋದನೆ ನೀಡಲಾಗಿತ್ತು. ಸಾರಿಗೆ ಇಲಾಖೆ 4 ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಹೆಚ್ಚಿಸಿ ಆದೇಶವನ್ನು ಹೊರಡಿಸಿತ್ತು.

All Set For Private Bus Fare Hike In Karnataka

ಈ ದರ ಪರಿಷ್ಕರಣೆ ಬಳಿಕ ಕರ್ನಾಟಕ ರಾಜ್ಯ ಖಾಸಗಿ ಬಸ್‌ಗಳ ಮಾಲೀಕರ ಒಕ್ಕೂಟ ಸಹ ಖಾಸಗಿ ಬಸ್‌ಗಳ ದರ ಏರಿಕೆಗೆ ಬೇಡಿಕೆ ಇಟ್ಟಿತ್ತು. ಆದರೆ ಈ ಕುರಿತು ಮಾತುಕತೆಗಳು ನಡೆದರೂ ಸಹ ಅಂತಿಮ ತೀರ್ಮಾನವಾಗಿರಲಿಲ್ಲ. ಈಗ ಮುಂದಿನ ವಾರದಿಂದಲೇ ಖಾಸಗಿ ಬಸ್‌ಗಳ ದರವನ್ನು ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಪ್ರಭಾವ ಹೆಚ್ಚಿದೆ. ಉಡುಪಿಯ ಖಾಸಗಿ ಬಸ್ ಮಾಲೀಕರ ಒಕ್ಕೂಟ ಈಗ ಟಿಕೆಟ್ ದರವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮುಂದಿನ ವಾರವೇ ಅಧಿಕೃತ ಪ್ರಕಟಣೆ ಮಾಡಲಾಗುತ್ತದೆ.

ಖಾಸಗಿ ಬಸ್‌ಗಳ ಮಾಲೀಕರ ಒಕ್ಕೂಟದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ ಮಾತನಾಡಿ, "ಹಲವು ಬಾರಿಯ ಏರಿಕೆ ಬಳಿಕ ಡೀಸೆಲ್ ದರ ಪ್ರತಿ ಲೀಟರ್‌ಗೆ ಸುಮಾರು 5 ರೂ. ಏರಿಕೆಯಾಗಿದೆ. ಟೋಲ್‌ಗಳ ದರಗಳು ಕೂಡಾ ಹೆಚ್ಚಾಗಿದೆ. ಈಗ ಖಾಸಗಿ ಬಸ್‌ಗಳು ದರ ಏರಿಕೆ ಮಾಡದಿದ್ದರೆ ಉದ್ಯಮಕ್ಕೆ ಭಾರೀ ನಷ್ಟವಾಗಲಿದೆ" ಎಂದು ಹೇಳಿದ್ದಾರೆ.

"ಪ್ರತಿ ಬಸ್ ನಿರ್ವಹಣೆ ಮಾಲು ಸುಮಾರು 18 ರಿಂದ 20 ಸಾವಿರ ರೂ. ಖರ್ಚಾಗುತ್ತಿದೆ. ಟಿಕೆಟ್ ದರಗಳನ್ನು ಏರಿಕೆ ಮಾಡದಿದ್ದರೆ ಬಸ್ ನಿರ್ವಹಣೆ, ಕಾರ್ಮಿಕರ ಸಂಬಳ ಸೇರಿದಂತೆ ಎಲ್ಲಾ ಖರ್ಚುಗಳು ಹೆಚ್ಚಾಗಿ ಮಾಲೀಕರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಆದ್ದರಿಂದ ಮಾಲೀಕರು ದರ ಏರಿಕೆಗೆ ತೀರ್ಮಾನ ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ಹಲವು ಖಾಸಗಿ ಬಸ್‌ಗಳು ಸ್ಥಗಿತಗೊಂಡಿದ್ದವು. ಬಳಿಕ ಟಿಕೆಟ್ ದರ ಹೆಚ್ಚಳಕ್ಕೆ ಹಲವು ಬಾರಿ ಮನವಿಗಳನ್ನು ಸಲ್ಲಿಕೆ ಮಾಡಿದರೂ ಸಹ ಸರ್ಕಾರ, ಸಾರಿಗೆ ಇಲಾಖೆಯ ಒಪ್ಪಿಗೆ ಸಿಗಲಿಲ್ಲ. ಆದ್ದರಿಂದ ಈಗ ಸರ್ಕಾರದ ತೀರ್ಮಾನಕ್ಕೆ ಕಾಯದೇ ದರ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರು ತೀರ್ಮಾನಿಸಿದ್ದಾರೆ.

ಪ್ರತಿ ಟಿಕೆಟ್ ದರವನ್ನು 1 ರಿಂದ 3 ರೂ. ತನಕ ಏರಿಕೆ ಮಾಡುವ ಪ್ರಸ್ತಾವನೆ ಇದೆ. ಈ ವಾರದಲ್ಲಿ ನಾವು ಸಭೆಯನ್ನು ನಡೆಸುತ್ತೇವೆ. ಮುಂದಿನ ವಾರದಿಂದಲೇ ರಾಜ್ಯಾದ್ಯಂತ ದರ ಏರಿಕೆ ಮಾಡುತ್ತೇವೆ ಎಂದು ಖಾಸಗಿ ಬಸ್ ಮಾಲೀಕರು ಹೇಳಿದ್ದಾರೆ.

17 ಜಿಲ್ಲೆಗಳಲ್ಲಿ 80,000ಕ್ಕಿಂತ ಅಧಿಕ ಖಾಸಗಿ ಬಸ್‌ಗಳಿವೆ. ಸರ್ಕಾರ 'ಶಕ್ತಿ' ಯೋಜನೆ ಆರಂಭಿಸಿದ ಬಳಿಕ ಖಾಸಗಿ ಬಸ್ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಆದರೆ ಬಸ್‌ ರದ್ದು ಮಾಡಲು ಸಾಧ್ಯವಿಲ್ಲ, ನಷ್ಟದಲ್ಲಿಯೂ ಬಸ್ ಓಡಿಸಲು ಸಾಧ್ಯವಿಲ್ಲ. ಆದ್ದರಿಂದ ಟಿಕೆಟ್ ದರವನ್ನು ಏರಿಕೆ ಮಾಡುತ್ತೇವೆ ಎಂದು ಮಾಲೀಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+