ವಿಧಾನಪರಿಷತ್ ಚುನಾವಣೆ : ಎಲ್ಲಾ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ?
ಬೆಂಗಳೂರು, ಮೇ 31 : ವಿಧಾನಪರಿಷತ್ ಚುನಾವಣೆಗೆ 11 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ಜೂನ್ 11ರಂದು ಚುನಾವಣೆ ನಿಗದಿಯಾಗಿದೆ. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ 11 ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ದಿನಾಂಕ ಘೋಷಣೆಯಾಗಿದೆ. ನಾಮಪತ್ರವನ್ನು ಸಲ್ಲಿಸಲು ಮೇ 31 ಕೊನೆಯ ದಿನವಾಗಿತ್ತು. ಇಂದು ವಿವಿಧ ಪಕ್ಷದಿಂದ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಜೂನ್ 4 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ. 11 ಸ್ಥಾನಗಳಿಗೆ 11 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಆದ್ದರಿಂದ, ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಕಾಂಗ್ರೆಸ್ : ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ, ಅರವಿಂದ ಕುಮಾರ್ ಎಸ್.ಅರಳಿ, ಕೆ.ಹರೀಶ್ ಕುಮಾರ್ ಅಭ್ಯರ್ಥಿಗಳಾಗಿದ್ದಾರೆ. ವಿಧಾನಸಭೆಯಲ್ಲಿ 78 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್ ನಾಲ್ವರನ್ನು ಆಯ್ಕೆ ಮಾಡಿ ಕಳಿಸಬಹುದಾಗಿದೆ.

ಬಿಜೆಪಿ : ರಘುನಾಥ ಮಲ್ಕಾಪುರೆ, ಎನ್.ರವಿಕುಮಾರ್, ತೇಜಸ್ವಿನಿ ಗೌಡ, ಕೆ.ಪಿ.ನಂಜುಂಡಿ, ಎಸ್.ರುದ್ರೇಗೌಡ ಅವರು ಬಿಜೆಪಿಯ ಅಭ್ಯರ್ಥಿಗಳು. ವಿಧಾನಸಭೆಯಲ್ಲಿ 104 ಸದಸ್ಯ ಬಲವನ್ನು ಬಿಜೆಪಿ ಹೊಂದಿದೆ. 5 ಸದಸ್ಯರನ್ನು ಆಯ್ಕೆ ಮಾಡಬಹುದಾಗಿದೆ.
ಜೆಡಿಎಸ್ : ಜೆಡಿಎಸ್‌ನಿಂದ ಬಿ.ಎಂ.ಫಾರೂಕ್ ಮತ್ತು ಎಸ್.ಎಲ್.ಧರ್ಮೇಗೌಡ ಅವರು ಅಭ್ಯರ್ಥಿಗಳಾಗಿದ್ದಾರೆ. 37 ಸದಸ್ಯ ಬಲವನ್ನು ಹೊಂದಿರುವ ಪಕ್ಷ ಇಬ್ಬರನ್ನು ಆಯ್ಕೆಮಾಡಿ ವಿಧಾನಪರಿಷತ್ತಿಗೆ ಕಳಿಸಬಹುದಾಗಿದೆ.












Click it and Unblock the Notifications