ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ನಿಖಿಲ್ ಕುಮಾರಸ್ವಾಮಿ ವಿಶೇಷ ಮನವಿ
ಬೆಂಗಳೂರು, ಜನವರಿ 20: ನಟನೆ ಮತ್ತು ರಾಜಕಾರಣದಲ್ಲಿ ಬ್ಯುಸಿಯಾಗಿರುವ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಜನವರಿ 22ರಂದು ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬವಿದೆ. ಈ ಹಿನ್ನಲೆಯಲ್ಲಿ ವಿಶೇಷ ಮನವಿ ಮಾಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಜನವರಿ 22ರ ಬುಧವಾರ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬವಿದೆ. ಈ ಸಂದರ್ಭದಲ್ಲಿ ನೂರಾರು ಜನರು ಅವರ ನಿವಾಸದ ಬಳಿ ಸೇರುವ ನಿರೀಕ್ಷೆ ಇದೆ. ಆದ್ದರಿಂದ ಸಾಮಾಜಿಕ ಜಾಲತಾಣದ ಮೂಲಕ ಅವರು ಅಭಿಮಾನಿಗಳು, ಕಾರ್ಯಕರ್ತರಿಗೆ ಮನವಿಯೊಂದನ್ನು ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಪೋಸ್ಟ್: ತಮ್ಮ ಪೋಸ್ಟ್‌ನಲ್ಲಿ ನಿಖಿಲ್ ಕುಮಾರಸ್ವಾಮಿ, ಎಲ್ಲಾ ಪ್ರೀತಿಯ ಕಾರ್ಯಕರ್ತ ಬಂಧುಗಳು ಹಾಗೂ ಅಭಿಮಾನಿಗಳಲ್ಲಿ ನನ್ನದೊಂದು ಮನವಿ ನಿಮಗೆಲ್ಲ ತಿಳಿದಿರುವ ಹಾಗೆ, ಹಲವು ವರ್ಷಗಳಿಂದ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ.
ಈ ಬಾರಿಯೂ ನನ್ನ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧರಿಸಿದ್ದೇನೆ. ಜನವರಿ 22 ಬುಧವಾರದಂದು ನಾನು ಕೆಲಸ ನಿಮಿತ್ತ ಬೆಂಗಳೂರಿನ ಹೊರಗೆ ಇರುತ್ತೇನೆ. ಹೀಗಾಗಿ ಕಾರ್ಯಕರ್ತರು, ಅಭಿಮಾನಿಗಳು ನಿರಾಸೆಗೊಳ್ಳಬಾರದು ಎಂದು ಕೇಳಿಕೊಳ್ಳುತ್ತೇನೆ.
ಪ್ರತೀ ವರ್ಷದಂತೆ, ಈ ವರ್ಷವೂ ಸಹ ನಿಮ್ಮಪ್ರೀತಿ ವಿಶ್ವಾಸ ನನ್ನೊಂದಿಗೆ ಹೀಗೆಯೇ ಇರಲಿ. ನೀವು ಇದ್ದಲ್ಲಿಂದಲೇ ನನ್ನ ಹರಸಿ, ಆಶೀರ್ವದಿಸಿ. ದುರ್ಬಲರಿಗೆ, ವಿಕಲಚೇತನರಿಗೆ ನೆರವಿನ ಹಸ್ತ ಚಾಚಿ. ಇದಿಷ್ಟೇ ನಿಮ್ಮಲ್ಲಿ ನಾನು ಮಾಡಿಕೊಳ್ಳುವ ಕಳಕಳಿಯ ಮನವಿ.
ನಿಮ್ಮ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಹಾಗೂ ನಮ್ಮ ಕುಟುಂಬ ಸದಾ ಚಿರಋಣಿಯಾಗಿರುತ್ತೇವೆ. ಧನ್ಯವಾದಗಳು ಎಂದು ಹೇಳಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸಿನಿಮಾ ಮತ್ತು ರಾಜಕಾರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ಕರ್ನಾಟಕ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರು. ಹಲವು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಸಹ ಸಂಪಾದಿಸಿದ್ದಾರೆ.
ಜೆಡಿಎಸ್ ಪಕ್ಷ ಸಂಘಟನೆಯತ್ತ ನಿಖಿಲ್ ಕುಮಾರಸ್ವಾಮಿ ಹೆಚ್ಚು ಗಮನಹರಿಸಿದ್ದಾರೆ. 2024ರ ನವೆಂಬರ್‌ನಲ್ಲಿ ನಡೆದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. 87,229 ಮತಗಳನ್ನು ಪಡೆದ ಅವರು, ಕಾಂಗ್ರೆಸ್‌ನ ಸಿ. ಪಿ. ಯೋಗೇಶ್ವರ ವಿರುದ್ಧ 25,413 ಮತಗಳ ಅಂತರದಿಂದ ಸೋಲು ಕಂಡಿದ್ದರು.
ಚನ್ನಪಟ್ಟಣ ಕ್ಷೇತ್ರದಲ್ಲಿ 2023ರಲ್ಲಿ ಗೆದ್ದಿದ್ದ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಉಪ ಚುನಾವಣೆ ಎದುರಾಗಿತ್ತು. ಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.
ಮಂಡ್ಯ ಸಂಸದ ಎಚ್. ಡಿ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದಲ್ಲಿ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು. ಅವರು ಕರ್ನಾಟಕ ಜೆಡಿಎಸ್ ಅಧ್ಯಕ್ಷರು ಹೌದು. ಆದರೆ ಅವರಿಗೆ ಪಕ್ಷ ಸಂಘಟನೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗದ ಕಾರಣ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಮತ್ತೊಂದು ಕಡೆ ಪಕ್ಷದ ಹಿರಿಯ ನಾಯಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿ, ರಾಜ್ಯಾಧ್ಯಕ್ಷ ಹುದ್ದೆಯನ್ನು ಹಿರಿಯ ನಾಯಕರಿಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಏಪ್ರಿಲ್‌ನಲ್ಲಿ ಚುನಾವಣೆಗಳ ಮೂಲಕ ಜೆಡಿಎಸ್ ಪದಾಧಿಕಾರಿಗಳನ್ನು ಬದಲಾವಣೆ ಮಾಡಲಾಗುತ್ತದೆ. ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಈಗಾಗಲೇ ತಿಳಿಸಿದ್ದಾರೆ.












Click it and Unblock the Notifications