Kamal Hasan: ಕಮಲ್ ಹಾಸನ್ ದೊಡ್ಡ ಪರಿಣಿತ ವ್ಯಕ್ತಿ ಅಲ್ಲ: ಕರ್ನಾಟಕ ಮಾಜಿ ಸಿಎಂ
ಬೆಂಗಳೂರು, ಮೇ 29: ಕನ್ನಡ ಭಾಷೆ ಕುರಿತು ತಮಿಳು ನಟ ಕಮಲ್ ಹಾಸನ್ ಹೇಳಿರುವ ಹೇಳಿಕೆ ಹಾಗೂ ನಂತರ ತಾನು ಕ್ಷಮೆ ಕೇಳಲ್ಲ ಎಂದು ನೀಡಿದ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಪರ ಹೋರಾಟಗಾರರ ಮಾತ್ರವಲ್ಲದೇ, ಕಲಾವಿದರು, ರಾಜಕಾರಣಗಳು ಸಹ ಕಮಲ್ ಹಾಸನ್ ವಿರುದ್ಧ ಕೆಂಡವಾಗಿದ್ದಾರೆ. ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು ಎಂಬ ಆಗ್ರಹ ಜೋರಾಗಿದೆ.
ಇದೀಗ ಇದೇ ವಿಚಾರವಾಗಿ ಬಿಜೆಪಿ ಸಂಸದ ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಕುರಿತು ಹಗುರವಾಗಿ ಮಾತನಾಡಿದ ನಟ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದರು.

ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆಗೆ ಅಪಮಾನ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನ್ನಡ ಬಹಳ ಹಳೆಯ ಪ್ರಾಚೀನ ಭಾಷೆ. ಭಾಷೆಯ ಪ್ರಾಚೀನತೆ ಹಲವಾರು ವಿಧಾನದಲ್ಲಿ ಇರಲಿದೆ. ಕಮಲ್ ಹಾಸನ್ ದೊಡ್ಡ ಪರಿಣಿತ ಅಲ್ಲ. ಭಾಷೆಯ ಮೇಲೆ ಮಾತನಾಡುವಾಗ ಹಿಡಿತ ಇರಬೇಕು. ಅವರು ತಮ್ಮ ವ್ಯಕ್ತಿತ್ವ ಉಳಿಸಿಕೊಳ್ಳಬೇಕಾದರೆ ಕ್ಷಮಾಪಣೆ ಕೇಳಬೇಕು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರಕ್ಕೆ ಕೋರ್ಟ್ ಛೀಮಾರಿ: ಬೊಮ್ಮಾಯಿ
ಹುಬ್ಬಳ್ಳಿ ಪೊಲಿಸ್ ಠಾಣೆ ಮೇಲೆ ದಾಳಿ ಮಾಡಿರುವ ಪ್ರಕರಣವನ್ನು ವಾಪಸ್ ಪಡೆದಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಗುರುವಾರ ಹೈಕೋರ್ಟ್ ಪೀಠ ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ತೀರ್ಪು ನೀಡಿದೆ. ರಾಜ್ಯ ಸರ್ಕಾರ ಕ್ರಿಮಿನಲ್ ಕೇಸ್ ಹಿಂಪಡೆದಿತ್ತು. ಆ ಕ್ರಮ ಸರಿಯಲ್ಲ ಎಂದು ಆದೇಶ ಮಾಡಿದೆ.
ನಾನು ಈ ಹಿಂದೆ ಹೇಳಿದ್ದೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವ ಪ್ರಕರಣ ವಾಪಸ್ ಪಡೆಯುವುದು ಸರಿಯಲ್ಲ. ಆದರೂ ರಾಜಕೀಯ ಒತ್ತಡಕ್ಕೆ, ಓಲೈಕೆ ರಾಜಕಾರಣಕ್ಕೆ ಕೇಸ್ ವಾಪಸ್ ಪಡೆದಿದ್ದರು. ನ್ಯಾಯಾಲಯ ಸರಿಯಾದ ಛೀಮಾರಿ ಹಾಕಿದೆ. ರಾಜ್ಯದ ಸಚಿವ ಸಂಪುಟ, ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಬೇಕೇ ಹೊರತು. ಒಲೈಕೆ ರಾಜಕಾರಣ ಮಾಡಬಾರದು. ಇನ್ನಾದರೂ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲ
ಇನ್ನೂ ಕರಾವಳಿ ಭಾಗದ ಪ್ರಮುಖ ನಗರವಾಗಿರುವ ಮಂಗಳೂರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದೆ. ಯಾರಿಗೂ ಪೊಲೀಸರ ಬಗ್ಗೆ ಭಯ ಇಲ್ಲದಂತಾಗಿದೆ. ಪೊಲೀಸ್ ಠಾಣೆಗಳು ಭ್ರಷ್ಟಾಚಾರದ ಕೇಂದ್ರಗಳಾಗಿವೆ. ಹೀಗಾಗಿ ಸಮಾಜ ಘಾತುಕ ಶಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುತ್ತಿವೆ. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದ ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.












Click it and Unblock the Notifications