ಸೈಬರ್ ಅಪರಾಧ ತಡೆಗಟ್ಟಲು ಕ್ರಮ: ವಿಧಾನಪರಿಷತ್‌ನಲ್ಲಿ ಗೃಹ ಸಚಿವ ಪರಮೇಶ್ವರ ಹೇಳಿದ್ದೇನು?
ಬೆಂಗಳೂರು, ಜುಲೈ 18: ರಾಜ್ಯದಲ್ಲಿ ಜಿಲ್ಲೆಗೊಂದು ಸಿಇಎನ್ (ಸೈಬರ್, ಎಕನಾಮಿಕ್ಸ್ ಮತ್ತು ನಾರ್ಕೋಟಿಕ್) ಠಾಣೆಗಳನ್ನು ಸ್ಥಾಪಿಸಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು, ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಆನ್‌ಲೈನ್ ಉದ್ಯೋಗ ವಂಚನೆ, ನಕಲಿ ಲೋನ್ ಆ್ಯಪ್ ವಂಚನೆಗೊಳಗಾಗುತ್ತಿದ್ದಾರೆ ಎಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಕಾರಣಗಳೇನು? ಎಂದು ಪ್ರಶ್ನಿಸಿದರು.

ಇದಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, ಈ ಹಿಂದೆ ರಾಜ್ಯದಾದ್ಯಂತ ಸಿಇಎನ್ (ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ ಅಫೆನ್ಸ್) ಠಾಣೆಗಳು ಇರಲಿಲ್ಲ. ಜಿಲ್ಲೆಗೊಂದು ಸಿಇಎನ್ ಠಾಣೆಯನ್ನು ಸ್ಥಾಪಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 43 ಸಿಇಎನ್ ಠಾಣೆಗಳಿವೆ. ಎಲ್ಲ ಠಾಣೆಗಳಲ್ಲಿಯೂ ಸೈಬರ್ ಅಪರಾಧದ ಕುರಿತು ಪ್ರಕರಣ ದಾಖಲಿಸಿ, ಸಿಇಎನ್ ಠಾಣೆಗೆ ವರ್ಗಾಯಿಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇರುವ ಕಾರಣಕ್ಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಸೈಬರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ತಿಳಿಸಿದರು.
ಯಾವುದೇ ವ್ಯಕ್ತಿಗೆ ಸೈಬರ್ ವಂಚನೆಯಾದರೆ ಕಾನೂನು ಸುವ್ಯವಸ್ಥೆಯ ಠಾಣೆಯಲ್ಲಿಯೂ ದೂರು ದಾಖಲಿಸಬಹುದು. ಸೈಬರ್ ಪ್ರಕರಣಗಳನ್ನು ವಿಶೇಷವಾಗಿ ಮೇಲ್ವಿಚಾರಣೆ ಮಾಡಲು ಸಿಐಡಿ ಘಟಕದಲ್ಲಿ ಸಿಇಎನ್ ವಿಭಾಗಕ್ಕೆ ಎಡಿಜಿಪಿ ಹುದ್ದೆಯನ್ನು ಸೃಜಿಸಲಾಗಿದೆ. ಈಗಾಗಲೇ ನೇಮಕಾತಿ ಆರಂಭಿಸಲಾಗಿದ್ದು, ಎಷ್ಟು ಸಿಬ್ಬಂದಿಗಳ ಅವಶ್ಯಕತೆ ಇದೆಯೋ ತರಬೇತಿ ನೀಡಿ ನಿಯೋಜಿಸಲಾಗುವುದು. ಯಾವುದೇ ಕಾರಣಕ್ಕೂ ಸೈಬರ್ ಅಪರಾಧ ಪ್ರಕರಣಗಳನ್ನು ಹೆಚ್ಚಾಗಲು ಬಿಡುವುದಿಲ್ಲ. ಈ ಬಗ್ಗೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ಸಿಗದಂತೆ ಇಲಾಖೆ ಕ್ರಮ
ಸರ್ಕಾರವು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣದ ಘೋಷಣೆ ಮಾಡಿದ್ದು, ಯಾವುದೇ ಕಾರಣಕ್ಕು ಉಡ್ತಾ ಕರ್ನಾಟಕ ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಡಾ.ಧನಂಜಯ್ ಸರ್ಜಿ ಅವರು ಪ್ರಸ್ತಾಪಿಸಿದ, ರಾಜ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿರುವುದು ಗಮನಕ್ಕೆ ಬಂದಿದೆಯೇ, ದಾಖಲಾಗಿರುವ ಪ್ರಕರಣಗಳೆಷ್ಟು ಮತ್ತು ಎಷ್ಟು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಆಗಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಪೆಡ್ಲರ್‌ಗಳ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ 2023ರಲ್ಲಿ 2409 ಶಾಲಾ-ಕಾಲೇಜುಗಳಲ್ಲಿ 3.95 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗಿತ್ತು.
ಪ್ರಸಕ್ತ ವರ್ಷ ಜೂನ್‌ನಲ್ಲಿ 3,600 ಶಾಲಾ-ಕಾಲೇಜುಗಳಲ್ಲಿ 5.50 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದೇವೆ. ಯಾವುದೇ ಕಾರಣಕ್ಕು ವಿದ್ಯಾರ್ಥಿಗಳ ಕೈಗೆ ಡ್ರಗ್ಸ್ ಸಿಗಬಾರದು ಎಂಬುದು ನಮ್ಮ ಉದ್ದೇಶ. ಅವರಿಗೆ ಜಾಗೃತಿ ಮೂಡಿಸಿದರೆ ಡ್ರಗ್ಸ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದರು.












Click it and Unblock the Notifications