Eshwar Khandre: ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಈಶ್ವರ ಖಂಡ್ರೆ
ಚಿಕ್ಕಮಗಳೂರು,ಡಿಸೆಂಬರ್15: ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.
ಬಾಳೆ ಹೊನ್ನೂರಿನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಫಲವಾಗಿ ಕರ್ನಾಟಕದಲ್ಲಿ 6395 ಆನೆಗಳಿದ್ದು. ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಹುಲಿಯ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದ್ದು ಇದರ ನಿಯಂತ್ರಣಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದರು.

ಆನೆಗಳು ನಾಡಿಗೆ ಬರುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್, ಕಂದಕ, ಸೌರ ಬೇಲಿ ಹಾಕಲಾಗುತ್ತಿದೆ. ತುರ್ತು ಸ್ಪಂದನ ಪಡೆ, ಆನೆ ಕಾರ್ಯಪಡೆಯನ್ನು ರಚಿಸಿದ್ದು, ಜನರಿಗೆ ಆನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇದರ ಜೊತೆಗೆ 2 ಸಾವಿರ ಹೆಕ್ಟೇರ್ ಕಾನನ ಪ್ರದೇಶದಲ್ಲಿ ಆನೆಗಳ ವಿಹಾರಧಾಮ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ಈ ಭೂಮಿಯಲ್ಲಿ ಮನುಷ್ಯನಿಗೆ ಬದುಕಲು ಹೇಗೆ ಹಕ್ಕಿದೆಯೋ ಅದೇ ರೀತಿ ಎಲ್ಲ ಜೀವಜಂತುಗಳಿಗೂ ಬದುಕುವ ಹಕ್ಕಿದೆ. ವನ್ಯ ಜೀವಿಗಳೊಂದಿಗೆ ಸಹಬಾಳ್ವೆ ಈ ಹೊತ್ತಿನ ಅಗತ್ಯವಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ ಮೀಸಲು ಹೋರಾಟದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಬಸವಣ್ಣನವರ ತತ್ವದಡಿ ನಡೆಯುತ್ತಿರುವುದು ನಮ್ಮ ಸರ್ಕಾರ. ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲು ಕೇಳುವ ಹಕ್ಕಿದೆ ಎಂದರು.
ಸರ್ಕಾರ ಶಾಶ್ವತ ಹಿಂದುಳಿದವರ್ಗಗಳ ಆಯೋಗವನ್ನು ಸಾಂವಿಧಾನಿಕವಾಗಿ ರಚಿಸಿದ್ದು, ಅದು ಅಧ್ಯಯನ ಮಾಡಿ ವರದಿ ನೀಡುತ್ತದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಈ ಬಗ್ಗೆ ಪರಾಮರ್ಶಿಸಿ, ಯಾವುದೆ ಜಾತಿಯ ಜನರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಆಸ್ತಿ, ಹಣ ಹೋದರೆ ಸಂಪತ್ತು ಮಾತ್ರ ಹೋಗುತ್ತದೆ, ಆದರೆ ಪ್ರಕೃತಿ, ಪರಂಪರೆ ಮತ್ತು ಸಂಸ್ಕೃತಿಯ ನಾಶವಾದರೆ ಸರ್ವಸ್ವವೂ ನಾಶವಾಗುತ್ತದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯ ನಾಶವಾದರೆ ಮಾನವತೆಯೇ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿಯೇ ಮಠ ಮಾನ್ಯಗಳು ಸಂಸ್ಕೃತಿ, ಪರಂಪರೆಯ ಸಂರಕ್ಷಣೆಗೆ ಅವಿರತ ಶ್ರಮಿಸುತ್ತಿವೆ ಎಂದು ಹೇಳಿದರು.
ಬಾಳೆ ಹೊನ್ನೂರು ಮಹಾ ಸಂಸ್ಥಾನ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ ಎಂಬ ಮಹೋನ್ನತ ಧ್ಯೇಯದೊಂದಿಗೆ ಧರ್ಮಪ್ರಚಾರ ಮಾಡುತ್ತಿದ್ದು, ಮಠದ ಕಾರ್ಯ ಮಹೋನ್ನತವಾದ್ದು ಎಂದರು.
ಜನ ಸಮುದಾಯ ಮತ್ತು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯ ಬೆಳೆಸುವುದೇ ಮಠಗಳು ಎಂದ ಅವರು, ಪ್ರಕೃತಿ ದೇವಿಯ ವರದಿಂದ ಹಚ್ಚ ಹಸಿರಿನಿಂದ ಕೂಡಿ, ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತವಾದ ಚಿಕ್ಕಮಗಳೂರು ಜಿಲ್ಲೆಯ ಜನರು ಅದೃಷ್ಟವಂತರು. ಭದ್ರಾ ನದಿಯ ದಂಡೆಯಲ್ಲಿ, ಸುಂದರ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಹಚ್ಚ ಹಸುರಿನ ವನರಾಶಿಯ ನಡುವೆ ಸ್ಥಾಪನೆಯಾಗಿರುವ ರಂಬಾಪುರಿ ಪೀಠ ಈ ಭೂಮಿಯ ಸ್ವರ್ಗ ಎಂದರೆ ಅತಿಶಯೋಕ್ತಿಯೇನಲ್ಲ. ಜಿಲ್ಲೆಯಲ್ಲಿ ಶೇ.58ರಷ್ಟು ಅರಣ್ಯ ಪ್ರದೇಶ ಇದೆ ಎಂದರು.
ಪಶ್ಚಿಮಘಟ್ಟ ಹಲವು ನದಿಗಳ ಮೂಲವಾಗಿದ್ದು ಇದನ್ನು ಸಂರಕ್ಷಿಸಬೇಕು. ಅದೇ ರೀತಿ ಇರುವ ಒಂದೇ ಭೂಮಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಧಾರ್ಮಿಕ ಶ್ರದ್ಧೆಯಿಂದ ಲೋಕ ಕಲ್ಯಾಣವಾಗಬೇಕು ಆಗ ಮಾತ್ರ ಜಗತ್ತು ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಧರ್ಮದ ಪುನರುತ್ಥಾನಕ್ಕೆ ಪಂಚಪೀಠಗಳೂ ಶ್ರಮಿಸುತ್ತಿವೆ. ರಾಜ್ಯದ ಎಲ್ಲ ವೀರಶೈವ ಲಿಂಗಾಯತ ಮಠಗಳೂ ಶ್ರಮಿಸುತ್ತಿವೆ. ನಮ್ಮ ಮಠಗಳು ಕರುನಾಡಿನ ಅಭ್ಯುದಯಕ್ಕೆ ನೀಡಿರುವ ಕೊಡುಗೆ ಅಪಾರವಾದ್ದು. ಶಿಕ್ಷಣ, ವೈದ್ಯಕೀಯ, ಧಾರ್ಮಿಕ ಹೀಗಾಗಿ ನಾನಾ ರಂಗದಲ್ಲಿ ಗಣನೀಯ ಎಂದರು.
ನಮ್ಮ ಮಠಾಧಿಪತಿಗಳು, ಗುರುಪರಂಪರೆ ನೂರಲ್ಲ, ಸಾವಿರಾರು ವರ್ಷಗಳಿಂದ ಬದುಕಿದ್ದಾರೆ. ಹಲವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಅವರ ವಿಚಾರಧಾರೆ, ಸಮಾಜಮುಖಿ ಕಾರ್ಯಗಳಿಂದ, ಹಿತನುಡಿಗಳಿಂದ ಅಜರಾಮರರಾಗಿದ್ದಾರೆ. ನಮ್ಮ ಹೃದಯ ಸಿಂಹಾಸನದಲ್ಲಿ ನೆಲೆಸಿದ್ದಾರೆ ಎಂದರು.












Click it and Unblock the Notifications