ಪ್ರತಾಪ್‌ ಸಿಂಹ ಅವರನ್ನು ಉಚ್ಚಾಟನೆ ಮಾಡಲಿ, ಅಮಿತ್‌ ಶಾ ರಾಜೀನಾಮೆ ನೀಡಲಿ: ಎಎಪಿ ಆಗ್ರಹ

ಬೆಂಗಳೂರು, ಡಿಸೆಂಬರ್‌ 15: ಸಂಸತ್ತಿನ ಭದ್ರತಾ ಲೋಪ ಆಘಾತಕಾರಿ ಘಟನೆಯಾಗಿದೆ. ದಾಳಿ ನಡೆಸಿದ ಯುವಕರಿಗೆ ಸಂಸದ ಪ್ರತಾಪ್‌ ಸಿಂಹ ಪಾಸ್‌ ನೀಡಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಒಬ್ಬ ವಿದ್ಯಾವಂತ ಸಂಸದನಾಗಿ ಅಪರಿಚಿತರಿಗೆ ಪಾಸುಗಳನ್ನು ನೀಡಲು ಹೇಗೆ ಸಾಧ್ಯ? ಎಂದು ಎಎಪಿ ಪ್ರಶ್ನಿಸಿದೆ.

ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ. ತಕ್ಷಣ ಪ್ರತಾಪ್‌ ಸಿಂಹ ಅವರನ್ನು ಸಂಸತ್‌ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಬೇಕು. ಸಂಸತ್‌ಗೆ ರಕ್ಷಣೆ ನೀಡಲಾಗದ ಗೃಹ ಸಚಿವ ಅಮಿತ್‌ ಶಾ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಆಮ್‌ ಆದ್ಮಿ ಪಕ್ಷ ಒತ್ತಾಯಿಸಿದೆ.

AAP Demanded That Amith Shah Should Resign

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂಸತ್ತಿನ ಭದ್ರತಾ ಲೋಪ ಪ್ರಕರಣವನ್ನು ಖಂಡಿಸಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೊಸ ಸಂಸತ್ತು ಉದ್ಘಾಟನೆಗೊಂಡ ನಂತರ ನಡೆದಿರುವ ಎರಡನೇ ಭದ್ರತಾ ಲೋಪ ಇದಾಗಿದೆ. 22 ವರ್ಷಗಳ ಹಿಂದಿನ ಭಯೋತ್ಪಾದಕರ ದಾಳಿ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ, ಈ ಘಟನೆ ಹಿಂದೆ ಬೇರೆ ಹುನ್ನಾರಗಳಿರಬಹುದು.

ಇದು ದೇಶದ ಸುರಕ್ಷತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಸೃಷ್ಟಿಸಿವೆ. ಮೈಸೂರಿನ ಮೂಲದ ಮನೋರಂಜನ್‌ ಅವರಿಗೆ ಈ ಮೊದಲು ಪ್ರತಾಪ್‌ ಸಿಂಹ ಅವರೇ ಎರಡು ಬಾರಿ ಪಾಸ್‌ ನೀಡಿದ್ದರು ಎನ್ನಲಾಗುತ್ತಿದೆ. ಸಂಸತ್‌ ಸಭಾಂಗಣ ಪ್ರವೇಶಿಸಲು ಪಾಸ್‌ ಸ್ವೀಕರಿಸಿದ ವ್ಯಕ್ತಿ ನಡೆಸುವ ಎಲ್ಲ ಕೃತ್ಯಗಳಿಗೆ ಪಾಸ್‌ ಕೊಟ್ಟ ಸಂಸದರೇ ಜವಾಬ್ದಾರರಾಗಿರುತ್ತಾರೆ. ಪರಿಚಿತರಿಗಷ್ಟೇ ಪಾಸ್‌ ನೀಡಬೇಕು ಎಂಬ ನಿಯಮವಿದೆ. ಇದೆಲ್ಲವೂ ಪಾಸ್‌ನಲ್ಲಿ ಉಲ್ಲೇಖವಾಗಿರುತ್ತದೆ. ಹಾಗಾಗಿ ಪ್ರತಾಪ್‌ ಸಿಂಹ ಅವರನ್ನು ಉಚ್ಚಾಟಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಸಂಸತ್ತಿಗೆ ರಕ್ಷಣೆ ನೀಡಲಾಗದವರು, ಪ್ರಶ್ನಿಸಿದ ಸಂಸದರನ್ನು ಅಮಾನತುಗೊಳಿಸಿ ಪೌರುಷ ಮೆರೆಯುತ್ತಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಆದರೆ ಈ ಭದ್ರತಾ ವೈಫಲ್ಯಕ್ಕೆ ಮೂಲ ಸಂಸದ ಪ್ರತಾಪ್‌ ಸಿಂಹ. ಅವರು ಪಾಸ್‌ ನೀಡಿದ್ದರಿಂದಲೇ ಈ ಎಲ್ಲ ಅನಾಹುತಗಳಿಗೆ ಕಾರಣ. ಪ್ರತಾಪ್‌ ಸಿಂಹ ಅವರನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸುವ ಬದಲು ಭದ್ರತಾ ವೈಫಲ್ಯದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ ಸಂಸದರನ್ನೇ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ" ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದರು.

AAP Demanded That Amith Shah Should Resign

ಸಂಸತ್‌ ಭವನ ಪ್ರವೇಶಿಸಲು ಪಾಸ್‌ ಹೊಂದಿರುವ ವ್ಯಕ್ತಿ ಬಿಗಿ ಭದ್ರತಾ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೀರಿನ ಬಾಟಲಿ, ಮೊಬೈಲ್‌, ಎಲೆಕ್ಟ್ರಾನಿಕ್‌ ಪರಿಕರ ಹಾಗೂ ಆಯುಧಗಳಂಥ ಯಾವುದೇ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ. ಪಾರ್ಲಿಮೆಂಟರಿ ಸೆಕ್ಯೂರಿಟಿ ಸರ್ವಿಸ್‌, ದಿಲ್ಲಿ ಪೊಲೀಸ್‌, ವಿವಿಧ ಏಜೆನ್ಸಿಗಳು, ಮ್ಯಾನುಯಲ್‌ ತಪಾಸಣೆ, ಬಾಡಿ ಸ್ಕ್ಯಾನರ್‌, ಮೆಟಲ್‌ ಡಿಟೆಕ್ಟರ್‌ ಹೀಗೆ ಹಲವು ಹಂತದ ಭದ್ರತಾ ವ್ಯವಸ್ಥೆಯಿರುವ ಸಂಸತ್‌ಗೆ ಗ್ಯಾಸ್‌ ಕ್ಯಾನ್‌ ತಂದಿದ್ದಾರೆ ಎಂದರೆ ಭದ್ರತಾ ವೈಫಲ್ಯವಲ್ಲದೆ ಬೇರೇನೂ ಕಾರಣವಲ್ಲ.

ಆರೋಪಿಗಳಾಗಿ ಗುರುತಿಸಿಕೊಂಡಿರುವ ಮೈಸೂರು ಮೂಲದ ಮನೋರಂಜನ್‌, ಉತ್ತರ ಪ್ರದೇಶದ ಲಖನೌದ ಸಾಗರ್‌ ಶರ್ಮಾ, ಹರಿಯಾಣದ ನೀಲಂ ಹಾಗೂ ಐಕ್ಕಿ ಶರ್ಮಾ, ಗುರುಗ್ರಾಮದ ಲಲಿತ್‌ ಝಾ ಮಹಾರಾಷ್ಟ್ರದ ಅಮೋಲ್‌ ಶಿಂಧೆ ಎಲ್ಲರೂ ಒಗ್ಗೂಡಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಒಂದೂವರೆ ವರ್ಷದಿಂದ ಸಂಚು ಹೂಡಿದ್ದರೂ ಕೇಂದ್ರ ಗುಪ್ತಚರಕ್ಕೆ ಗೊತ್ತಾಗಲಿಲ್ಲವೇ? ಗೃಹ ಸಚಿವ ಅಮಿತ್‌ ಶಾ ದೇಶದ ಭದ್ರತೆ ವಿಚಾರವನ್ನು ಸಂಪೂರ್ಣವಾಗಿ ಅವಗಣಿಸಿದ್ದಾರೆ. ಒಂದೆಡೆ ಚೀನಾದ ಸೇನೆ ಅರುಣಾಚಲ ಪ್ರದೇಶದ ಗಡಿಯನ್ನು ಅತಿಕ್ರಮಿಸಿ ಗ್ರಾಮಗಳನ್ನು ನಿರ್ಮಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಭಾರಿ ಏರಿಕೆಯಾಗಿದೆ. ದೇಶಕ್ಕೆ ರಕ್ಷಣೆ ನೀಡಬೇಕಾದ ಗೃಹ ಸಚಿವರು ತಮ್ಮ ಕೆಲಸವನ್ನು ಬಿಟ್ಟು ಚುನಾವಣೆಗಳನ್ನು ಹೇಗೆ ಗೆಲ್ಲುವುದು ಎಂಬ ತಂತ್ರ ಹೆಣೆಯುವುದರಲ್ಲೇ ಕಾಲಕಳೆಯುತ್ತಿದ್ದಾರೆ. ತನ್ನ ಕರ್ತವ್ಯವನ್ನು ನಿಭಾಯಿಸಲು ಆಗದ ಅಮಿತ್‌ ಶಾ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮ ಕೊಡಬೇಕು ಎಂದು ಮೋಹನ್ ದಾಸರಿ ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+