Breaking: ಕೋಮು ಶಕ್ತಿಗಳ ವಿರುದ್ಧ ದೊಡ್ಡ ಸಮರ; ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 28: 'ರಾಜ್ಯದಲ್ಲಿ ಕೋಮು ಭಾವನೆ ಕದಡುವ ಶಕ್ತಿಗಳ ವಿರುದ್ಧ ದೊಡ್ಡ ಸಮರ ಸಾರಿದ್ದೇವೆ. ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಹೇಳಿದರು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ರಾಜ್ಯದ ಬಿಜೆಪಿ ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟಾಗಿದೆ. ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆಯಿಲ್ಲ ಎಂದು ನೂರಾರು ಬಿಜೆಪಿ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಕಠಿಣ ಕ್ರಮ ಎಂದು ಹೇಳುತ್ತಲೇ ಇದೆ. ಆದರೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಲೇ ಇವೆ ಎಂದು ಆರೋಪಿಸಲಾಗಿದೆ.

ಬೆಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕೋಮು ಸೌಹಾರ್ದ ವಿಚಾರದಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಸಮಸ್ಯೆಗಳು ತಲೆ ಎತ್ತಿವೆ. ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆ ಬಡೆಯುತ್ತೇವೆ. ಬರೀ ಬಾಯಿ ಮಾತಿನಲ್ಲಿ ಅಲ್ಲ ಕಠಿಣ ಕ್ರಮ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಕೋಮು ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ. ಅಪರಾಧ ತಡೆಗೆ ಹಲವು ಕ್ರಮ ತೆಗೆದುಕೊಂಡಿದ್ದೇವೆ. ಅಗತ್ಯ ಬಿದ್ದರೆ ರಾಜ್ಯದಲ್ಲಿಯೂ ಯೋಗಿ ಮಾಡೆಲ್ ಜಾರಿಯಾಗುತ್ತದೆ" ಎಂದು ಮಾಹಿತಿ ನೀಡಿದರು.
ಮುಂದುವರೆದು, 'ಸ್ಲೀಪರ್ ಸೆಲ್ ನಲ್ಲಿರುವವರನ್ನು ಬಂಧಿಸಲಾಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಮಂಗಳೂರು ಕೊಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹರ್ಷನ ಕೊಲೆಯ ರೀತಿ ಶೀಘ್ರವೇ ದಸ್ತಗಿರಿ ಮಾಡುತ್ತೇವೆ. ಕೋಮು ಭಾವನೆ ಕೆರಳಿಸುವ ಶಕ್ತಿಗಳ ವಿರುದ್ಧ ದೊಡ್ಡಸಮರ ಸಾರಿದ್ದೇವೆ. ಎಲ್ಲರೂ ಸಂಯಮ ಕಾಯ್ದುಕೊಳ್ಳಬೇಕು" ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಬುಧವಾರ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದರು.
ಇನ್ನು, ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ ಮತ್ತು ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಆಗಿರುವದರ ನೆನಪಿಗೆ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ 'ಜನೋತ್ಸವ' ಹೆಸರಿನ ಬೃಹತ್ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಬುಧವಾರ ತಡರಾತ್ರಿ ಮಾಧ್ಯಮಗೋಷ್ಠಿ ನಡೆಸಿರುವ ಬಸವರಾಜ ಬೊಮ್ಮಾಯಿ 'ಜನೋತ್ಸವ' ರದ್ದು ಮಾಡಿರುವುದಾಗಿ ಘೋಷಿಸಿದ್ದಾರೆ. ಜನೋತ್ಸವ ರದ್ದು ಮಾಡಲು ಯಾವುದೇ ಒತ್ತಡ ಇಲ್ಲ. ಆದರೆ, ನನ್ನ ಮನಸಾಕ್ಷಿ ಒಪ್ಪುತ್ತಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications