7th Pay Commission: ತಮಿಳುನಾಡು ಸರ್ಕಾರಿ ನೌಕರರ ವೇತನ ಶ್ರೇಣಿ ಬಗ್ಗೆ ಆಯೋಗದ ಶಿಫಾರಸು ಏನು?
ಬೆಂಗಳೂರು, ಆಗಸ್ಟ್ 16: ಕರ್ನಾಟಕದ ರಾಜ್ಯ ಸರ್ಕಾರಿ ನೌಕರರು ವಿವಿಧ ರಾಜ್ಯಗಳ ವೇತನ ಶ್ರೇಣಿಗಳಿಗೆ ಹೋಲಿಕೆ ಮಾಡಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದರು. ಈಗಾಗಲೇ ವೇತನ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಸರ್ಕಾರ ಅದನ್ನು ಅಂಗೀಕರಿಸಿ, ಜಾರಿಗೊಳಿಸಿದೆ. ಇದರಿಂದಾಗಿ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಿದೆ. ಹಾಗಾದರೆ ವಿವಿಧ ರಾಜ್ಯಗಳ ವೇತನ ಶ್ರೇಣಿ ಹೇಗಿದೆ? ಎಂದು ಸಹ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರ ನೀಡಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾರ್ಚ್ 16ರಂದು ವರದಿ ನೀಡಿದ 7ನೇ ವೇತನ ಆಯೋಗ ತಮಿಳುನಾಡು ರಾಜ್ಯದ ಸರ್ಕಾರಿ ನೌಕರರ ವೇತನ ರಚನೆ, ವೇತನ ಶ್ರೇಣಿ, ಕೇಂದ್ರ ವೇತನ ಆಯೋಗದ ಶಿಫಾರಸು ಅನ್ವಯ ಮಾಡಿಕೊಂಡಿರುವ ಬದಲಾವಣೆಗಳನ್ನು ವರದಿಯಲ್ಲಿ ಉಲ್ಲೇಖ ಮಾಡಿದೆ.

ವರದಿಯಲ್ಲಿನ ಶಿಫಾರಸು: ದಿನಾಂಕ 01.06.1988ರಿಂದ ತಮಿಳುನಾಡು ರಾಜ್ಯ ಸರ್ಕಾರಿ ನೌಕರರ ವೇತನ ರಚನೆಯ ವ್ಯಾಪ್ತಿಯು ಮೂಲತ: ಮಾರ್ಪಡಿತ ಕೇಂದ್ರ ವೇತನ ರಚನೆ ಆಗಿದೆ. ರಾಜ್ಯದ ನಿರ್ದಿಷ್ಟ ಅವಶ್ಯಕತೆಗಳನ್ನು ಮತ್ತು ಪ್ರಸ್ತಕ ವೇತನ ಸಾಪೇಕ್ಷತೆಗಳನ್ನು ಉಳಿಸಿಕೊಳ್ಳುವುದನ್ನು ಕೇಂದ್ರ ವೇತನ ಶ್ರೇಣಿಗಳನ್ನು ಅಳವಡಿಸಿಕೊಳ್ಳುವ ಪೂರ್ವದಲ್ಲಿ ಪರಿಗಣಿಸಿದೆ. ಉದಾಹರಣೆಗೆ, 5ನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ದಿನಾಂಕ 01.01.1996ರಿಂದ ಜಾರಿಗೆ ಬರುವಂತೆ ಭಾರತ ಸರ್ಕಾರವು ತನ್ನ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಿದಾಗ, ಕೇಂದ್ರದ ವೇತನ ರಚನೆಯಲ್ಲಿ 36 ವೇತನ ಶ್ರೇಣಿಗಳಿದ್ದವು. ತಮಿಳುನಾಡು ರಾಜ್ಯವು ಈ ವೇತನ ರಚನೆಯನ್ನು ಅಳವಡಿಸಿಕೊಂಡು 29 ವೇತನ ಶ್ರೇಣಿಗಳಿಗೆ ಸೀಮಿತಗೊಳಿಸಿದೆ.
ಕೇಂದ್ರ ವೇತನ ರಚನೆಯನ್ನು ಅಳವಡಿಸಿಕೊಳ್ಳುವಾಗ ರಾಜ್ಯ ಎದುರಿಸಿದ ಪ್ರಾರಂಭಿಕ ಸಮಸ್ಯೆಗಳನ್ನು ಮತ್ತು ಅವುಗಳನ್ನು ಎದುರಿಸಲು ರಾಜ್ಯವು ತೆಗೆದುಕೊಂಡ ಕ್ರಮಗಳನ್ನು 2017ರ ವೇತನ ಪರಿಷ್ಕರಣೆಯ ತಮಿಳುನಾಡು ರಾಜ್ಯ ಅಧಿಕಾರಿ ಸಮಿತಿಯ ವರದಿಯಲ್ಲಿ ಚರ್ಚಿಸಲಾಗಿದೆ. ಇದು ನಮ್ಮ ಚರ್ಚೆಗೆ ಪ್ರಸ್ತುತತೆ ಹೊಂದಿದೆ ಎಂದು ಹೇಳಿದೆ.
6ನೇ ಕೇಂದ್ರ ವೇತನ ಆಯೋಗವು ಶಿಫಾರಸ್ಸು ಮಾಡಿದ 2006ರ ವೇತನ ಪರಿಷ್ಕರಣೆಯನ್ನು ಅನುಸರಿಸಿ ಕೇಂದ್ರ ಸರ್ಕಾರವು 36 ವೇತನ ಶ್ರೇಣಿಗಳನ್ನು 4 ವೇತನ ಬ್ಯಾಂಡ್‌ಗಳು ಮತ್ತು 14 ಹಂತ ವೇತನಗಳು ಮತ್ತು 4 ಉನ್ನತ ಆಡಳಿತಾತ್ಮಕ ಹಂತ ವೇತನ ಶ್ರೇಣಿಗಳಲ್ಲಿ ಸರಿಹೊಂದಿಸಿತು. ತಮಿಳುನಾಡು ಈ ವೇತನ ಬ್ಯಾಂಡ್ ಮತ್ತು ಹಂತ ವೇತನ ವ್ಯವಸ್ಥೆ ಅಳವಡಿಸಿಕೊಳ್ಳುತ್ತಾ ಭಾರತ ಸರ್ಕಾರದ ಕನಿಷ್ಠ ಮತ್ತು ಗರಿಷ್ಮ ಹಂತ ವೇತನಗಳಾದ ರೂ.1,800 ಮತ್ತು ರೂ.10,000 ಗಳಿಗೆ ಬದಲಾಗಿ ಕನಿಷ್ಠ ಹಂತ ವೇತನ ರೂ.1,300 ಮತ್ತು ಗರಿಷ್ಠ ರೂ.10,000 ಗಳೊಂದಿಗೆ ರಾಜ್ಯದ 29 ವೇತನ ಶ್ರೇಣಿಗಳನ್ನು 5 ವೇತನ ಬ್ಯಾಂಡ್‌ಗಳು ಮತ್ತು 29 ಹಂತ ವೇತನಗಳಾಗಿ ರಚಿಸಿತು. ಕೇಂದ್ರ ವೇತನ ರಚನೆಯಲ್ಲಿ ಗ್ರೂಪ್ 'ಡಿ' ಹುದ್ದೆಗಳು ಅಸ್ತಿತ್ವದಲ್ಲಿಲ್ಲವಾದರೂ, ಅವುಗಳನ್ನು ರಾಜ್ಯ ಸರ್ಕಾರ ಉಳಿಸಿಕೊಂಡು ರಾಜ್ಯ ವೇತನ ರಚನೆಯಲ್ಲಿ ಗ್ರೂಪ್-ಡಿ ಹುದ್ದೆಗಳಿಗೆ 3 ಹಂತ ವೇತನಗಳ ಜೊತೆಗೆ ಹೆಚ್ಚುವರಿ ವೇತನ ಬ್ಯಾಂಡ್ ಪಿಬಿ-1ಎ ಅನ್ನು ಅಳವಡಿಸಿಕೊಂಡಿರುತ್ತದೆ.
ಭಾರತ ಸರ್ಕಾರದ ಕೇಂದ್ರ ವೇತನ ರಚನೆಯ 2016ರ ಪರಿಷ್ಕರಣೆಯಲ್ಲಿ, ಮೊದಲಿದ್ದ ವೇತನ ಬ್ಯಾಂಡ್ ಮತ್ತು ಹಂತ ವೇತನ ವ್ಯವಸ್ಥೆಯನ್ನು ವೇತನ ಹಂತಗಳು (pay levels) ಮತ್ತು ವೇತನ ಕೋಶಗಳುಳ್ಳ ಹೊಸ ವೇತನ ಮ್ಯಾಟ್ರಿಕ್ಸ್ (pay matrix) ವ್ಯವಸ್ಥೆಗೆ ಬದಲಾಗಿಸಿದೆ. ಇದನ್ನು ಅನುಸರಿಸುತ್ತಾ, ತಮಿಳುನಾಡು, ಕೇಂದ್ರ ವೇತನ ಮ್ಯಾಟ್ರಿಕ್ಸ್‌ನಲ್ಲಿನ ಕನಿಷ್ಠ ಮತ್ತು ಗರಿಷ್ಠ ವೇತನ ರೂ.18,000 ಮತ್ತು ರೂ.2,50,000 ಗಳಿಗೆ ಪ್ರತಿಯಾಗಿ ಕನಿಷ್ಠ ವೇತನ ರೂ.15,700 ಮತ್ತು ಗರಿಷ್ಠ ವೇತನ ರೂ.2,25,000 ಗಳೊಂದಿಗೆ ತನ್ನದೇ ಆದ ಸ್ವಂತ ಮ್ಯಾಟ್ರಿಕ್ಸ್ ಅನ್ನು ರಚಿಸಿ ಎಲ್ಲಾ 32 ವೇತನ ಹಂತಗಳನ್ನು (ರಾಜ್ಯವು ಹಿಂದಿನ ಪರಿಷ್ಕರಣೆ ಮತ್ತು 2017 ರ ಪರಿಷ್ಕರಣೆಯ ಮಧ್ಯಂತರ ಅವಧಿಯಲ್ಲಿ 3 ಹೆಚ್ಚುವರಿ ಹಂತಗಳನ್ನು ಸೃಜಿಸಿದ್ದರಿಂದ ಒಟ್ಟು ಸಂಖ್ಯೆಯು 29 ರಿಂದ 32ಕ್ಕೆ ತಲುಪಿತು) ಅಳವಡಿಸಿಕೊಂಡಿತು.
ಪ್ರಸಕ್ತ ತಮಿಳುನಾಡು ರಾಜ್ಯದಲ್ಲಿ ಜಾರಿಯಲ್ಲಿರುವ ವೇತನ ಮ್ಯಾಟ್ರಿಕ್ಸ್‌ನಲ್ಲಿ ಕೇವಲ 4 ವೇತನ ಹಂತಗಳು ಮಾತ್ರ ಕೇಂದ್ರ ವೇತನ ಹಂತಗಳಿಗೆ ಸಮನಾದ ಆರಂಭಿಕ ವೇತನವನ್ನು ಹೊಂದಿರುತ್ತವೆ. ಉಳಿದ ಎಲ್ಲಾ ವೇತನ ಹಂತಗಳ ಆರಂಭಿಕ ವೇತನವು ವಿಭಿನ್ನವಾಗಿದ್ದು, ಪರಿಷ್ಕರಣೆಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದಂತಹ ಸಾಪೇಕ್ಷತೆಗಳನ್ನು ಉಳಿಸಿಕೊಳ್ಳುವುದಕ್ಕೆ ಆರಂಭಿಕ ವೇತನವನ್ನು ಮಾರ್ಪಡಿಸಲಾಗಿರುತ್ತದೆ.
ತಮಿಳುನಾಡು ರಾಜ್ಯವು 1996 ಮತ್ತು 2006ರಲ್ಲಿ ಸರಿಹೊಂದಿಸಿದ ವೇತನ ಶ್ರೇಣಿಗಳು, ವೇತನ ಬ್ಯಾಂಡ್‌ಗಳು ಮತ್ತು ಹಂತ ವೇತನಗಳ ವಿವರಗಳು ಮತ್ತು 2016 ರ ಕೇಂದ್ರ ವೇತನ ಪರಿಷ್ಕರಣೆಯ ಪರಿಣಾಮದಿಂದ ರಚಿಸಲಾದ ವೇತನ ಹಂತಗಳು ಮತ್ತು ವೇತನ ಕೋಶಗಳುಳ್ಳ ವೇತನ ಮ್ಯಾಟ್ರಿಕ್ಸ್ ವಿವರಗಳನ್ನು 7ನೇ ರಾಜ್ಯ ವೇತನ ಆಯೋಗ ಸರ್ಕಾರಕ್ಕೆ ತನ್ನ ವರದಿಯಲ್ಲಿ ವಿವರವಾಗಿ ಸಲ್ಲಿಕೆ ಮಾಡಿದೆ.












Click it and Unblock the Notifications