7th Pay Commission: ಸರ್ಕಾರಿ ನೌಕರರ ರೈಲು, ಬಸ್, ವಿಮಾನ ಪ್ರಯಾಣ ಭತ್ಯೆ ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 04: ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ವೇತನ, ಭತ್ಯೆಗಳ ಹೆಚ್ಚಳಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ ಸರ್ಕಾರಿ ನೌಕರರ ಪ್ರಯಾಣ ಭತ್ಯೆ ಸೇರಿದೆ. ಬಸ್, ರೈಲು, ವಿಮಾನ ಪ್ರಯಾಣದ ಸಂದರ್ಭದಲ್ಲಿ ನೀಡಲಾಗುತ ಭತ್ಯೆ ಎಷ್ಟು ಏರಿಕೆ ಮಾಡಬೇಕು? ಎಂದು ಶಿಫಾರಸುಗಳನ್ನು ಮಾಡಿದೆ.
ಪ್ರಯಾಣ ಭತ್ಯೆಯ ಉದ್ದೇಶಗಳಿಗಾಗಿ ಸರ್ಕಾರಿ ನೌಕರರ ವರ್ಗೀಕರಣ. ಪ್ರಯಾಣ ಭತ್ಯೆಯ ಉದ್ದೇಶಕ್ಕಾಗಿ ಪ್ರಸ್ತುತ ಇರುವ ಸರ್ಕಾರಿ ನೌಕರರ ವರ್ಗೀಕರಣವು ಈ ಕೆಳಗಿನಂತಿದೆ. ಈ ವರ್ಗೀಕರಣವು ಸೂಕ್ತವಾಗಿದ್ದು, ಇದನ್ನು ಹಾಗೆಯೇ ಉಳಿಸಿಕೊಳ್ಳಲು ರಾಜ್ಯ 7ನೇ ವೇತನ ಆಯೋಗ ಶಿಫಾರಸು ಮಾಡಿದೆ ಎಂದು ವರದಿಯಲ್ಲಿ ಹೇಳಿದೆ.

* IA, ಸಮೂಹ-ಎ (ಹಿರಿಯ ಶ್ರೇಣಿ ಮತ್ತು ಅದಕ್ಕೂ ಮೇಲ್ಪಟ್ಟು)
* IB, ಸಮೂಹ -ಎ (ಕಿರಿಯ ಶ್ರೇಣಿ)
* II, ಸಮೂಹ -ಬಿ ನೌಕರರು
* III, ಸಮೂಹ -ಸಿ ನೌಕರರು
* IV, ಸಮೂಹ -ಡಿ ನೌಕರರು.
ರೈಲು ಪ್ರಯಾಣದ ಅರ್ಹತೆ: ಸರ್ಕಾರಿ ನೌಕರರ ವರ್ಗೀಕರಣವನ್ನು ಆಧರಿಸಿ ಪ್ರವಾಸ ಅಥವಾ ವರ್ಗಾವಣೆ ಸಂದರ್ಭದಲ್ಲಿ ರೈಲು ಸೌಕರ್ಯಗಳನ್ನು ಪಡೆಯಲು ಅರ್ಹತೆಯನ್ನು ಶಿಫಾರಸು ಮಾಡಿದೆ.
* IA, ಎಸಿ ಪ್ರಥಮ ದರ್ಜೆ/ ಎಕ್ಸಿಕ್ಯೂಟಿವ್ ದರ್ಜೆ ಅಥವಾ ಸಮಾನ ದರ್ಜೆ
* IB, ಎಸಿ ಚೇರ್ ಕಾರ್/ ಪ್ರಥಮ ದರ್ಜೆ/ ಎಸಿ 2ನೇ ಶ್ರೇಣಿ
* II, ಎಸಿ ಚೇರ್ ಕಾರ್/ ಪ್ರಥಮ ದರ್ಜೆ/ ಎಸಿ 3ನೇ ಶ್ರೇಣಿ
* III, ಎಸಿ ಚೇರ್ ಕಾರ್/ ಪ್ರಥಮ ದರ್ಜೆ/ ಎಸಿ 3ನೇ ಶ್ರೇಣಿ
* IV, ಎಸಿ ಚೇರ್ ಕಾರ್/ ಸ್ಲೀಪರ್ ದರ್ಜೆ.
ರಸ್ತೆ ಪ್ರಯಾಣದ ಅರ್ಹತೆ: ಪ್ರವಾಸ ಮತ್ತು ವರ್ಗಾವಣೆ ಸಂದರ್ಭಗಳಲ್ಲಿ ಪ್ರಯಾಣಿಸುವ ಸರ್ಕಾರಿ ನೌಕರರಿಗೆ ಅನ್ವಯವಾಗುವ ಬಸ್ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಮತ್ತು ರಾಜ್ಯದ ಸ್ವಾಧೀನದಲ್ಲಿರುವ ಇತರೆ ಸಾರಿಗೆ ನಿಗಮಗಳ ಕೆಳಕಂಡ ವಿವಿಧ ವರ್ಗದ ಬಸ್‌ಗಳಿಗೆ ನಿಗದಿಪಡಿಸಿದ ದರಗಳಿಗೆ ಮೀರದಂತೆ ಅರ್ಹತೆ ಪಡೆಯುತ್ತಾರೆ.
* IA ಮ್ತು IB, ಹವಾನಿಯಂತ್ರಿತ ಸ್ಲೀಪರ್/ ಹವಾನಿಯಂತ್ರಿತ ಆಸನ (ಐರಾವತ ಕ್ಲಾಸ್/ ಕ್ಲಬ್ ಕ್ಲಾಸ್/ ಅಂಬಾರಿ ಡ್ರೀಮ್ ಕ್ಲಾಸ್/ ಅಂಬಾರಿ ಉತ್ಸವ್ ಕ್ಲಾಸ್/ ಅಂಬಾರಿ ಕ್ಲಾಸ್ ಅಥವಾ ಸಮಾನ ದರ್ಜೆ. ಹವಾನಿಯಂತ್ರಿತವಲ್ಲದ ಸ್ಲೀಪರ್/ ಹವಾನಿಯಂತ್ರಿತವಲ್ಲದ ಆಸನ.
* II, ಹವಾನಿಯಂತ್ರಿತ ಆಸನ (ಐರಾವತ್ ಕ್ಲಾಸ್ ಅಥವಾ ಸಮಾನ ದರ್ಜೆ), ಹವಾನಿಯಂತ್ರಿತವಲ್ಲದ ಸ್ಲೀಪರ್.
* III ಮತ್ತು IV, ಹವಾನಿಯಂತ್ರಿತವಲ್ಲದ ಸ್ಲೀಪರ್/ ಹವಾನಿಯಂತ್ರಿತವಲ್ಲದ ಆಸನ
ವಿಮಾನದ ಮೂಲಕ ಪ್ರವಾಸದ ಅರ್ಹತೆ: ಪ್ರಚಲಿತ ನಿಯಮಗಳ ಪ್ರಕಾರ ರೂ. 74,000 ಅಥವಾ ಮೇಲ್ಪಟ್ಟು ಮಾಸಿಕ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಅಧಿಕೃತ ಪ್ರವಾಸ ಅಥವಾ ವರ್ಗಾವಣೆಯ ಸಂದರ್ಭದಲ್ಲಿ ರಾಜ್ಯದೊಳಗೆ ಅಥವಾ ಹೊರಗೆ ವಿಮಾನ ಪ್ರಯಾಣವನ್ನು ಕೈಗೊಳ್ಳಲು ಅರ್ಹರಾಗಿರುತ್ತಾರೆ.
ರೂ. 61,150 ಅಥವಾ ಮೇಲ್ಪಟ್ಟು ಆದರೆ ರೂ. 74,000 ಗಳಿಗಿಂತ ಕಡಿಮೆ ಮಾಸಿಕ ವೇತನವನ್ನು ಪಡೆಯುತ್ತಿರುವ ನೌಕರರು ರಾಜ್ಯದೊಳಗೆ ಕೈಗೊಳ್ಳುವ ಅಧಿಕೃತ ಪ್ರವಾಸಕ್ಕೆ ಮಾತ್ರವೇ ವಿಮಾನ ಪ್ರಯಾಣ ಮಾಡಲು ಅರ್ಹರಿರುತ್ತಾರೆ.
ಸರ್ಕಾರವು ಉತ್ತಮ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಿರುವುದನ್ನು ಮತ್ತು ರಾಜ್ಯದ ರಾಜಧಾನಿಯಿಂದ ದೂರದ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಪರಿಷ್ಕರಣೆಗೆ ಮುಂಚಿತವಾಗಿ ಪಡೆಯುತ್ತಿದ್ದ ವೇತನ ಶ್ರೇಣಿಯಲ್ಲಿ ರೂ. 52,650 ಮತ್ತು ಮೇಲ್ಪಟ್ಟು ವೇತನ ಪಡೆಯುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯದೊಳಗೆ ವಿಮಾನದ ಮೂಲಕ ಪಯಾಣಿಸುವ ಅರ್ಹತೆಯನ್ನು ಆಯೋಗವು ಶಿಫಾರಸು ಮಾಡುತ್ತದೆ.












Click it and Unblock the Notifications