7th Pay Commission: ಸರ್ಕಾರಿ ನೌಕರರ ಮನೆ ಬಾಡಿಗೆ, ನಗರ ಪರಿಹಾರ ಭತ್ಯೆ ಎಷ್ಟು
ಬೆಂಗಳೂರು, ಆಗಸ್ಟ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯ ಶಿಫಾರಸುಗಳನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿದೆ. ಆಗಸ್ಟ್‌ನಿಂದಲೇ ಜಾರಿಗೆ ಬರುವಂತೆ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಏರಿಕೆಯಾಗಿದೆ. ವೇತನದ ಜೊತೆಗೆ ತುಟ್ಟಿ ಭತ್ಯೆ ಸೇರಿದಂತೆ ವಿವಿಧ ಭತ್ಯೆ ಎಷ್ಟು ಹೆಚ್ಚಳವಾಗಲಿದೆ? ಎಂದು ನೌಕರರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಆದೇಶವೊಂದನ್ನು ಹೊರಡಿಸಿದ್ದಾರೆ. ಇದರಲ್ಲಿ ತುಟ್ಟಿಭತ್ಯೆ, ನಗರ ಪರಿಹಾರ ಭತ್ಯೆ, ಮನೆ ಬಾಡಿಗೆ ಭತ್ಯೆಯ ಏರಿಕೆ ಕುರಿತು ಮಾಹಿತಿಯನ್ನು ನೀಡಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ.

ಮನೆ ಬಾಡಿಗೆ ಭತ್ಯೆ : ಆದೇಶದಲ್ಲಿ ಮನೆ ಬಾಡಿಗೆ ಭತ್ಯೆಯ ಉದ್ದೇಶಕ್ಕೋಸ್ಕರ ರಾಜ್ಯದಲ್ಲಿನ ನಗರಗಳು ಮತ್ತು ಇತರೆ ಪ್ರದೇಶಗಳ ಪ್ರಸ್ತುತ ವರ್ಗೀಕರಣವು ಮುಂದಿನ ಆದೇಶದವರೆಗೆ ಮುಂದುವರೆದು ಅನ್ವಯಿಸತಕ್ಕದ್ದು. 1ನೇ ಆಗಸ್ಟ್ 2024 ರಿಂದ ಅನ್ವಯಿಸುವಂತೆ ವಿವಿಧ ವರ್ಗದ ಪ್ರದೇಶಗಳಿಗೆ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ಮನೆ ಬಾಡಿಗೆ ಭತ್ಯೆಯ ದರಗಳು ಈ ಕೆಳಗೆ ನಮೂದಿಸಿದಂತೆ ಲಭ್ಯವಿರುತ್ತದೆ ಎಂದು ತಿಳಿಸಿದೆ.
* ಜನಸಂಖ್ಯೆ. 25 ಲಕ್ಷ ಮತ್ತು ಅದಕ್ಕೂ ಹೆಚ್ಚು. ವರ್ಗೀಕರಣ 'ಎ'. ಮೂಲ ವೇತನದ ಶೇ.20 ರಷ್ಟು
* ಜನಸಂಖ್ಯೆ, 5 ಲಕ್ಷ ಮತ್ತು ಅದಕ್ಕೂ ಹೆಚ್ಚು ಆದರೆ 25 ಲಕ್ಷ ಮೀರದಂತೆ. ವರ್ಗೀಕರಣ 'ಬಿ'. ಮೂಲ ವೇತನದ 15ರಷ್ಟು
* ಜನಸಂಖ್ಯೆ, 5 ಲಕ್ಷಕ್ಕೂ ಕಡಿಮೆ. ವರ್ಗೀಕರಣ 'ಸಿ'. ಮೂಲ ವೇತನದ ಶೇ.7.5 ರಷ್ಟು
ರಾಜ್ಯದಲ್ಲಿನ ವಿವಿಧ ಪ್ರದೇಶಗಳಿಗೆ ಲಭ್ಯವಿರುವ ಮನೆ ಬಾಡಿಗೆ ಭತ್ಯೆ ದರಗಳನ್ನು ಕ್ರಮಬದ್ಧಗೊಳಿಸಿ ದಿನಾಂಕ 01/07/2022ಕ್ಕೂ ಪೂರ್ವದಲ್ಲಿ ಹೊರಡಿಸಲಾದ ಆದೇಶಗಳು ಮಾರ್ಪಾಡುಗೊಳ್ಳತಕ್ಕದ್ದು. ಮನೆ ಬಾಡಿಗೆ ಭತ್ಯೆ ಮಂಜೂರಾತಿಗೆ ಸಂಬಂಧಿಸಿದಂತೆ ದಿನಾಂಕ 19/10/2012ರ ಸರ್ಕಾರಿ ಆದೇಶ ಸಂಖ್ಯೆ: ಆಇ 18 ಎಸ್‌ಆರ್‌ಪಿ 2012 ರಲ್ಲಿ ವಿಧಿಸಲಾದ ಇತರೆ ಎಲ್ಲಾ ಷರತ್ತುಗಳು ಅಗತ್ಯ ಬದಲಾವಣೆಗಳೊಂದಿಗೆ ಮುಂದುವರೆದು ಅನ್ವಯಿಸುತ್ತವೆ ಎಂದು ಆದೇಶ ಹೇಳಿದೆ.
ನಗರ ಪರಿಹಾರ ಭತ್ಯೆ: ನಮೂದಿಸಿರುವ ನಗರಗಳು/ ಪಟ್ಟಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವರ್ಗದ ಸರ್ಕಾರಿ ನೌಕರರಿಗೆ ಲಭ್ಯವಿರುವ ನಗರ ಪರಿಹಾರ ಭತ್ಯೆಯು ಅವುಗಳ ಮುಂದೆ ನಮೂದಿಸಿರುವ ನಿಗದಿಪಡಿಸಿರುವ ದರಗಳಲ್ಲಿ ಇರತಕ್ಕದ್ದು.
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಸರ್ಕಾರಿ ನೌಕರನು ಸೇರಿದ ಗುಂಪು ಎ&ಬಿ, ನಗರ ಪರಿಹಾರ ಭತ್ಯೆಯ ದರ ರೂ. 900, ಸಿ&ಡಿ 750 ರೂ.ಗಳು.
* ಬೆಳಗಾವಿ (ಯು.ಎ.), ಹುಬ್ಬಳ್ಳಿ-ಧಾರವಾಡ, ಮಂಗಳೂರು (ಯು.ಎ.), ಮೈಸೂರು (ಯು.ಎ.), ಕಲಬುರಗಿ. ಎ& ಬಿ ರೂ. 700, ಸಿ& ಡಿ ರೂ. 600.
ನಗರ ಪರಿಹಾರ ಭತ್ಯೆಯ ಪರಿಷ್ಕೃತ ದರಗಳನ್ನು 1ನೇ ಆಗಸ್ಟ್ 2024 ರಿಂದ ಅನ್ವಯಿಸುವಂತೆ ನಗದಾಗಿ ಪಾವತಿಸುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.












Click it and Unblock the Notifications