7th Pay Commission: ʼಬಿಜೆಪಿ ಮುಖ್ಯಮಂತ್ರಿಗಳಿಂದ 7 ನೇ ವೇತನ ಆಯೋಗ ಜಾರಿಗೆ ತರಲು ಸಾಧ್ಯವಾಗಲಿಲ್ಲʼ
ಬೆಂಗಳೂರು, ಮೇ 30: ಬಿಜೆಪಿ ಮುಖ್ಯಮಂತ್ರಿಗಳಿಂದ 7 ನೇ ವೇತನ ಆಯೋಗ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯ ಅವರು, ಶಿವಕುಮಾರ್ ಅವರು 7 ನೇ ವೇತನ ಆಯೋಗದ ವರದಿ ತರಿಸಿಕೊಂಡಿದ್ದು ಚುನಾವಣೆ ನಂತರ ಜಾರಿಗೆ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಮಂಜೇಗೌಡ ಅವರು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 2014 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 6 ನೇ ವೇತನ ಆಯೋಗ ರಚನೆ ಮಾಡಿ ಸರ್ಕಾರಿ ನೌಕರರ ಪರವಾಗಿ ನಿಂತರು. ಶಿಕ್ಷಕರು ಸೇರಿದಂತೆ ಎಲ್ಲಾ ನೌಕರರಿಗೆ ಶೇ 30 ರಷ್ಟು ಸಂಬಳ ಹೆಚ್ಚು ಮಾಡಿದ ಕಾರಣಕ್ಕೆ ಅನೇಕ ಶಿಕ್ಷಕರು ಕಾಂಗ್ರೆಸ್ ಪರವಾಗಿ ನಿಲ್ಲಲಿದ್ದಾರೆ.

ಎನ್ ಪಿಎಸ್ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಅದಕ್ಕೆ ಸಿದ್ದರಾಮಯ್ಯ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. 2 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳನ್ನುಹಂತ, ಹಂತವಾಗಿ ತುಂಬಲು ಸಿಎಂ ಸೂಚನೆ ನೀಡಿದ್ದಾರೆ. ಮೂರು ಪದವೀಧರ, ಮೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ಹಿಂದಿನ ಸರ್ಕಾರ ನಯಾಪೈಸೆ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಶಿಕ್ಷಕರ ಪರವಾಗಿ ಕೆಲಸ ಮಾಡಲಿದೆ.
ಇನ್ನೂ ಈ ವೇಳೆ ಕಾಂಗ್ರೆಸ್ ಶಿಕ್ಷಕರ ಘಟಕದ ಅಧ್ಯಕ್ಷರಾದ ಬಸವರಾಜ ಗುರಿಕಾರ ಅವರು ಮಾತನಾಡಿ,ಈ ಬಾರಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಎಲ್ಲಾ 6 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅ‍್ಯಭ್ಯರ್ಥಿಗಳು ಗೆಲ್ಲಲಿದ್ದಾರೆ. ಬೆಂಗಳೂರು ಪಧವೀದರ ಕ್ಷೇತ್ರದ ರಾಮೋಜಿ ಗೌಡರಿಗೆ ಈ ಹಿಂದೆ ಸಿಗದಂತಹ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ.
ರಾಮೋಜಿ ಗೌಡ ಅವರು ಕಳೆದ ಎರಡು ಬಾರಿ ಅತ್ಯಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಆದರೆ ಈ ಬಾರಿ ಮತದಾರರು ಅವರ ಪರವಾಗಿದ್ದಾರೆ. ಅಲ್ಲದೇ ಕಳೆದ 2 ವರ್ಷಗಳಿಂದ ಉದ್ಯೋಗ ಮೇಳ ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮತದಾರರ ನೋಂದಣಿ ಕಾರ್ಯ ನಡೆಸಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಪದವೀಧರರು ರಾಮೋಜಿ ಗೌಡರ ಪರವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ.
ದೇವರಾಜ್ ಅರಸು ಅವರು ಪದವೀಧರರಿಗೆ ಭತ್ಯೆ ಪ್ರಾರಂಭ ಮಾಡಿದರು. ಗುಂಡುರಾವ್ ಅವರು ನಿರುದ್ಯೋಗ ಭತ್ಯೆ ಪಡೆಯುತ್ತಿದ್ದ ಪದವೀಧರರನ್ನು ಖಾಯಂಗೊಳಿಸುವ ಕೆಲಸ ಮಾಡಿದರು. ಈಗ ಯುವನಿಧಿ ಎನ್ನುವ ಗ್ಯಾರಂಟಿ ನೀಡಿ ಯುವಕರಲ್ಲಿ ಆಶಾಕಿರಣ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಐದು ಗ್ಯಾರಂಟಿಗಳನ್ನು ಒಂದೇ ವರ್ಷದಲ್ಲಿ ಜಾರಿಗೆ ತಂದು ದೇಶಕ್ಕೆ ನಮ್ಮ ಸರ್ಕಾರ ಮಾದರಿಯಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ಕೊಟ್ಟಿದೆ. 11,494 ಶಿಕ್ಷಕರ ಹುದ್ದೆ, 35 ಸಾವಿರ ಅತಿಥಿ ಶಿಕ್ಷಕರ ಹುದ್ದೆ, 2,372 ಶಾಲೆಗಳ ಪೈಕಿ 7,342 ಕೊಠಡಿಗಳ ದುರಸ್ಥಿಗೆ 70 ಕೋಟಿ ಅನುದಾನ. ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ನೀಡುವ ಸಲುವಾಗಿ 280 ಕೋಟಿ ಅನುದಾನ. 45 ಲಕ್ಷ ವಿದ್ಯಾರ್ಥಿಗಳಿಗೆ 143 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ, ರಾಜ್ಯದ ವಿಶ್ವವಿದ್ಯಾನಿಲಯಗಳಿಗೆ 350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ 5 ರಿಂದ 8 ಸಾವಿರ ಸಂಬಳ ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಹಿಡಿಗಂಟನ್ನು ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ. ರಜೆ ಸೌಲಭ್ಯ, 5 ಲಕ್ಷ ಮೊತ್ತದ ವೈಧ್ಯಕೀಯ ಸೌಲಭ್ಯ, ಕೋರಿಕೆಯ ವರ್ಗಾವಣೆ ಸೇರಿದಂತೆ ಅನೇಕ ಶಿಕ್ಷಕ ಪರ ಕೆಲಸವನ್ನು ಕಾಂಗ್ರೆಸ್ ಮಾಡಿದೆ.
ಬಿಜೆಪಿ, ದಳದ 20- 20 ಸರ್ಕಾರದ ವೇಳೆ ಎನ್ ಪಿಎಸ್ ಜಾರಿಗೆ ತರಲಾಯಿತು. 19 ಸಾವಿರ ಎನ್ ಪಿಎಸ್ ನೌಕರರನ್ನು ಓಪಿಎಸ್ ನೌಕರರನ್ನಾಗಿ ಪರಿಗಣಿಸಲಾಗಿದೆ. ಮಿಕ್ಕ ದಿನಗಳಲ್ಲಿ ಓಪಿಎಸ್ ಜಾರಿಗೆ ತರಲಾಗುವುದು. ನಮ್ಮ ಎಲ್ಲಾ ಕೆಲಸಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರು ಮತ್ತು ಡಿಸಿಎಂ ಆದಂತಹ ಡಿ.ಕೆ.ಶಿವಕುಮಾರ್ ಅವರ ಅಪಾರ ಬೆಂಬಲದ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ ಎಂದರು












Click it and Unblock the Notifications