7th pay commission: 7ನೇ ವೇತನ ಆಯೋಗದ ಮುಂದಿದೆ ಮಹಿಳಾ ನೌಕರರ ವಿಶೇಷ ಬೇಡಿಕೆಗಳು
ಬೆಂಗಳೂರು, ಫೆಬ್ರವರಿ.25: ರಾಜ್ಯ ಸರ್ಕಾರ ರಚನೆ ಮಾಡಿರುವ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಮುಂದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಲವು ಬೇಡಿಕೆಗಳನ್ನು ಇಟ್ಟಿದೆ. ವೇತನ, ಮನೆ ಬಾಡಿಗೆ, ಪಿಂಚಣಿ, ಭತ್ಯೆ ಪರಿಷ್ಕರಣೆ ಜೊತೆಗೆ ಮಹಿಳಾ ನೌಕರರ ಪರವಾಗಿ ವಿಶೇಷ ಬೇಡಿಕೆಗಳನ್ನು ಇಟ್ಟಿದೆ.
ಕರ್ನಾಟಕ ಸರ್ಕಾರ 2023ರ ನವೆಂಬರ್‌ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15ರ ತನಕ ವಿಸ್ತರಣೆ ಮಾಡಿದೆ. ಈಗ ಆಯೋಗ ವರದಿ ನೀಡುವ ಮಾರ್ಚ್ 15ರ ಹೊತ್ತಿಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ಇದರ ಜೊತೆಗೆ ಸರ್ಕಾರಿ ನೌಕರರು ಹಲವು ಬೇಡಿಕೆಗಳನ್ನು ವೇತನ ಆಯೋಗದ ಮುಂದಿಟ್ಟಿದ್ದಾರೆ.

ರಾಜ್ಯ 7ನೇ ವೇತನ ಆಯೋಗದ ಪ್ರಶ್ನಾವಳಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಲ್ಲಿಸಿರುವ ಉತ್ತರಗಳು ಮತ್ತು ಬೇಡಿಕೆಗಳು ಇಲ್ಲಿವೆ. ಇದರಲ್ಲಿ ಮಹಿಳಾ ನೌಕರರ ಬಗ್ಗೆ ಇರುವ ವಿಶೇಷ ಬೇಡಿಕೆಗಳನ್ನು ಇಲ್ಲಿ ನೋಡೋಣ.
ಮಹಿಳಾ ಉದ್ಯೋಗಿಗಳ ವಿಶೇಷ ಸಮಸ್ಯೆಗಳ ಕುರಿತು ಏಳನೇ ವೇತನ ಆಯೋಗಕ್ಕೆ ಉತ್ತರ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಿರುವ ಸೌಲಭ್ಯಗಳ ಜೊತೆಗೆ ಈ ಕೆಳಗೆ ಪಟ್ಟಿ ಮಾಡಿರುವ ಸೌಲಭ್ಯಗಳನ್ನು ಮಹಿಳಾ ನೌಕರರಿಗೆ ಒದಗಿಸಬೇಕು ಎಂದು ಮನವಿ ಮಾಡಿದೆ.
* ತಾಯ್ತನ ಹೊಂದಿರುವ ಮಹಿಳಾ ನೌಕರರಿಗೆ ಮಕ್ಕಳಿಗೆ ದಿನಕ್ಕೆ 2 ಬಾರಿ ಸ್ತನ್ಯಪಾನಕ್ಕಾಗಿ ಅವಕಾಶ ನೀಡಬೇಕು.
* ನಿಗದಿತ ವೇಳೆಯ ನಂತರ ಕೆಲಸ ಮಾಡಿದ ಸಂದರ್ಭದಲ್ಲಿ ಮಹಿಳಾ ನೌಕರರನ್ನು ಸುರಕ್ಷಿತವಾಗಿ ಮನೆಗೆ ಬಿಡಬೇಕು.
* ಮಹಿಳಾ ನೌಕರರು ಕೆಲಸ ಮಾಡುವ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಶುಚಿತ್ವವಾದ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು.
* ಇನ್ನು, ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿ ಮಹಿಳಾ ನೌಕರರಿಗೆ ಶಿಶುಪಾಲನಾ ಮತ್ತು ಹೆರಿಗೆ ರಜೆಗಳನ್ನು ಮಂಜೂರು ಮಾಡಬೇಕು.
* ಹಾಲಿ ಇರುವ ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಕನಿಷ್ಠ 15 ದಿನಗಳ ಬದಲಾಗಿ 7 ದಿನಗಳಿಗೆ ನಿಗಧಿಪಡಿಸಬೇಕು.
* ಪತ್ನಿ ಇಲ್ಲದ ಪುರುಷ ನೌಕರರಿಗೆ ಮಕ್ಕಳ ಪಾಲನೆ ಹಿತದೃಷ್ಟಿಯಿಂದ ಶಿಶುಪಾಲನ ರಜೆಯನ್ನು ಹೆಚ್ಚು ಮಾಡಬೇಕು ಅಥವಾ ವಿಸ್ತರಿಸುವಂತೆ ವೇತನ ಆಯೋಗದ ಮುಂದೆ ಬೇಡಿಕೆಗಳನ್ನು ಇಡಲಾಗಿದೆ.

ಇವುಗಳ ಜೊತೆಗೆ ಸರ್ಕಾರಿ ನೌಕರರು ವಂತಿಗೆ ನೀಡುವುದರಿಂದ ಅವಲಂಬಿತರ ಆದಾಯದ ಮಿತಿಯನ್ನು ತೆಗೆದುಹಾಕಬೇಕು. ಅಂದರೆ, ವಿವಾಹಿತ ಮಹಿಳಾ ಸರ್ಕಾರಿ ನೌಕರರ ತಂದೆ ಮತತ್ಉ ತಾಯಿಯವರನ್ನು ಈ ಯೋಜನೆಯ ವ್ಯಾಪ್ತಿಗೆ ತರಬೇಕು. ಎಲ್ಲಾ ವೈದ್ಯಕೀಯ ಸೇವೆಗಳು ವಿಳಂಬವಿಲ್ಲದೇ ಸರಳವಾಗಿ ಹಾಗೂ ತ್ವರಿತಗತಿಯಲ್ಲಿ ಅವರಿಗೂ ಲಭ್ಯವಾಗಬೇಕು ಎಂದು ಬೇಡಿಕೆ ಇಡಲಾಗಿದೆ.
ಬೆಟ್ಟಗುಡ್ಡಗಳಿರುವ ನೌಕರರ ಬೇಡಿಕೆಗಳು
* ಬೆಟ್ಟಗುಡ್ಡಗಳಿರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ನೌಕರರಿಗೆ ಗಿರಿಭತ್ಯೆಯನ್ನು ಮಂಜೂರು ಮಾಡಬೇಕು.
* ಪ್ರಸ್ತುತ ನೀಡುತ್ತಿರುವ ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅನ್ಯಸೇವೆ ಭತ್ಯೆ, ವಿಶೇಷಭತ್ಯೆಗಳನ್ನು ದುಪ್ಪಟ್ಟು ಮಾಡಬೇಕು.
* ನಿಗದಿತ ಪ್ರಯಾಣ ಭತ್ಯೆ, ಅನ್ಯಸೇವೆ ಭತ್ಯೆ ಹಾಗೂ ಪ್ರಭಾರ ಭತ್ಯೆ ದರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.












Click it and Unblock the Notifications