ವಿಧಾನ ಪರಿಷತ್ ಪ್ರವೇಶಿಸಿದ ಪರಮೇಶ್ವರ್, ಈಶ್ವರಪ್ಪ
ಬೆಂಗಳೂರು, ಜೂ. 12 : ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ಏಳು ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪರಿಷತ್ ಪ್ರವೇಶಿಸಿದ ಪ್ರಮುಖರಾಗಿದ್ದಾರೆ.
ಗುರುವಾರ ವಿಧಾನಪರಿಷತ್ ಚುನಾವಣಾಧಿಕಾರಿ ಓಂ ಪ್ರಕಾಶ್ ಅವರು, ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಲ್ಲಾ ಏಳು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ಸಿನಿಂದ 4, ಬಿಜೆಪಿಯಿಂದ 1, ಜೆಡಿಎಸ್ ನಿಂದ 1 ಮತ್ತು ಒಬ್ಬರು ಅಭ್ಯರ್ಥಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. [ರಾಜ್ಯಸಭೆಗೆ ನಾಲ್ವರು ಅವಿರೋಧ ಆಯ್ಕೆ]
ಬಿಜೆಪಿಯಿಂದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಜೆಡಿಎಸ್ ನಿಂದ ಟಿ.ಎ. ಶರವಣ, ಸ್ವತಂತ್ರ ಅಭ್ಯರ್ಥಿಯಾಗಿದ್ದ ಡಿ.ಯು ಮಲ್ಲಿಕಾರ್ಜನ್, ಕಾಂಗ್ರೆಸ್ಸಿನಿಂದ ಡಾ.ಜಿ ಪರಮೇಶ್ವರ್, ಹೆಚ್.ಎಂ ರೇವಣ್ಣ, ಜಯಮ್ಮ ಬಾಲರಾಜ್ ಮತ್ತು ಬೋಸರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆ.ಎಸ್.ಈಶ್ವರಪ್ಪ ಪ್ರತಿಪಕ್ಷ ನಾಯಕ
ಡಿ.ವಿ.ಸದಾನಂದ ಗೌಡರಿಂದ ತೆರವಾಗಿದ್ದ ವಿಧಾನಪರಿಷತ್ ಪ್ರತಿಪಕ್ಷ ಸ್ಥಾನ ಕೆ.ಎಸ್.ಈಶ್ವರಪ್ಪ ಅವರ ಪಾಲಾಗಿದೆ. ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಈಶ್ವರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಪರಿಷತ್ ನಲ್ಲಿ ಬಿಜೆಪಿಯ ನಾಯಕರಾಗಲಿದ್ದಾರೆ.

ಪರಿಷತ್ ಪ್ರವೇಶಿಸಿದ ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಧಾನಪರಿಷತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಪರಮೇಶ್ವರ್ ಅವರಿಗೆ ಸೂಕ್ತ ಹುದ್ದೆ ನೀಡಬೇಕೆಂಬ ಹಲವು ದಿನಗಳ ಬೇಡಿಕೆ ಈಡೇರಿದೆ. ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಅವರ ಸಂಪುಟ ಸೇರುವುದು ಮಾತ್ರ ಬಾಕಿ ಇದೆ.

ಟಿ.ಎ.ಶರವಣ ಇನ್ನು ವಿಧಾನಪರಿಷತ್ ಸದಸ್ಯರು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಮಾಪ್ತರಾದ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಅವರು ವಿಧಾನಪರಿತ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಪರಿಷತ್ ಪ್ರವೇಶಿಸಿದ್ದಾರೆ.

ಪರಿಷತ್ ಪ್ರವೇಶಿಸಿದ ಏಕೈಕ ಮಹಿಳೆ
ಕಾಡುಗೊಲ್ಲ ಸಮುದಾಯದಕ್ಕೆ ಸೇರಿದ ಚಿತ್ರದುರ್ಗದ ಜಯಮ್ಮ ಬಾಲರಾಜ್ ವಿಧಾನಪರಿಷತ್ತಿಗೆ ಕಾಂಗ್ರೆಸ್ ಪಕ್ಷದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಜಯಮ್ಮ ಅವರು ಮೊದಲ ಬಾರಿಗೆ ಪರಿಷತ್ ಪ್ರವೇಶ ಮಾಡಿದ್ದಾರೆ.

ಎಚ್.ಎಂ.ರೇವಣ್ಣ ಪರಿಷತ್ತಿಗೆ
ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಎಂ.ರೇವಣ್ಣ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪರಿಷತ್ ಪ್ರವೇಶಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಲ್ಲಿ ರೇವಣ್ಣ ಸಹವೊಬ್ಬರು.

ಪರಿಷತ್ ಪ್ರವೇಶಿಸಿದ ಬೋಸರಾಜ್
ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಬೋಸರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪರಿಷತ್ ಪ್ರವೇಶಿಸಿದ ಡಿ.ಯು ಮಲ್ಲಿಕಾರ್ಜನ್
ಜೆಡಿಎಸ್-ಬಿಜೆಪಿ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಡಿ.ಯು.ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ವಿಧಾನಪರಿಷತ್ ಪ್ರವೇಶಿಸಿದ್ದಾರೆ.












Click it and Unblock the Notifications