ಸೂಳೆಕೆರೆಗೆ ಉರುಳಿದ ಖಾಸಗಿ ಬಸ್, ನಾಲ್ಕು ಸಾವು
ದಾವಣಗೆರೆ, ಡಿ.15 : ದಾವಣಗೆರೆ ಜಿಲ್ಲೆಯ ಚನ್ನಗಿರಿ ಬಳಿಯ ಶಾಂತಿ ಸಾಗರ ಕೆರೆಗೆ ಉರುಳಿ ಬಿದ್ದಿದ್ದ ಖಾಸಗಿ ಬಸ್ಅನ್ನು ನಾಲ್ಕು ಕ್ರೇನ್‌ಗಳ ಸಹಾಯದಿಂದ ಭಾನುವಾರ ರಾತ್ರಿ ಹೊರತೆಗೆಯಲಾಗಿದೆ. ಸೂಳೆಕೆರೆಗೆ ಬಸ್ ಉರುಳಿ ಬಿದ್ದ ದುರಂತದದಲ್ಲಿ 4 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಭಾನುವಾರ ಸಂಜೆ ದಾವಣಗೆರೆಯಿಂದ ಚನ್ನಗಿರಿ ಮಾರ್ಗವಾಗಿ ಭದ್ರಾವತಿಗೆ ತೆರಳುತ್ತಿದ್ದ ಅರಮೇಶ್ವರ ಬಸ್ ಟೈರ್ ಸ್ಫೋಟಗೊಂಡ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಶಾಂತಿಸಾಗರ (ಸೂಳೆಕೆರೆ)ಗೆ ಉರುಳಿಬಿದ್ದಿತ್ತು.

ದುರಂತದಲ್ಲಿ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರನ್ನು ಚನ್ನಗಿರಿ ವಿಜಯಮ್ಮ (43), ಹರಪನಹಳ್ಳಿಯ ಮಹದೇವ (60) ಎಂದು ಗುರುತಿಸಲಾಗಿದ್ದು ಇಬ್ಬರ ಗುರುತು ಪತ್ತೆಯಾಗಿಲ್ಲ. [ಚಿಕ್ಕಬಳ್ಳಾಪುರ : ಕೆರೆಗೆ ಉರುಳಿದ ಸರ್ಕಾರಿ ಬಸ್]
ಬಸ್ಸಿನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ, ಚನ್ನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಲ್ಕು ಕ್ರೇನ್‌ಗಳ ಸಹಾಯದಿಂದ ಸಂಜೆ ಬಿದ್ದಿದ್ದ ಬಸ್‌ಅನ್ನು ರಾತ್ರಿ ವೇಳೆಗೆ ಕೆರೆಯಿಂದ ಹೊರತೆಗೆಯಲಾಗಿದೆ. ಬಸವಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ಎಸ್ಪಿ ಬೋರಲಿಂಗಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಘಟನೆ ಬಗ್ಗೆ ಮಾಹಿತಿ ಪಡೆದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ದಾವಣಗೆರೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ಅಲ್ಲದೇ ಮೃತ ವ್ಯಕ್ತಿಗಳ ಕುಟುಂಬಗಳಿಗೆ ಸರ್ಕಾರದ ವತಿಯಿಂದ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.












Click it and Unblock the Notifications