ಪಾಕಿಸ್ತಾನ ಪರ ಘೋಷಣೆ; ಅಮೂಲ್ಯ 4 ದಿನ ಪೊಲೀಸ್ ವಶಕ್ಕೆ
ಬೆಂಗಳೂರು, ಫೆಬ್ರವರಿ 25 : 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿರುವ ಆರೋಪದ ಮೇಲೆ ಬಂಧಿತರಾಗಿರುವ ಅಮೂಲ್ಯ ಲಿಯೋನ್‌ರನ್ನು 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
Recommended Video
ಮಂಗಳವಾರ ರಾತ್ರಿ 5ನೇ ಎಸಿಎಂಎಂ ನ್ಯಾಯಾಧೀಶರ ನಿವಾಸಕ್ಕೆ ಅಮೂಲ್ಯರನ್ನು ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಧೀಶರು ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಮೂಲ್ಯ ಲಿಯೋನ್ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು. ಆದ್ದರಿಂದ, ಅವರನ್ನು ಬಂಧಿಸಲಾಗಿತ್ತು.

ಫೆಬ್ರವರಿ 20ರ ಗುರುವಾರ ಅಮೂಲ್ಯರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರು ಇದ್ದರು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ 4 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ.
ಅಮೂಲ್ಯರನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಠಾಣೆಯ ಸುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಅಮೂಲ್ಯ ಸ್ನೇಹಿತರನ್ನು ವಿಚಾರಣೆ ನಡೆಸಿದ್ದಾರೆ. ಅಮೂಲ್ಯ ವಾಸವಾಗಿದ್ದ ಪಿಜಿಯಲ್ಲಿಯೂ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.












Click it and Unblock the Notifications