ಎನ್ ಡಿ.ಆರ್.ಎಫ್ ಮಾರ್ಗಸೂಚಿಯಂತೆ 4,860 ಕೋಟಿ ರೂ. ಪರಿಹಾರ ಕೋರಿದ ಸಿದ್ದರಾಮಯ್ಯ
ಚಿತ್ರದುರ್ಗ, ಅಕ್ಟೋಬರ್ 06: ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿರುವ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 4,860 ಕೋಟಿ ರೂಪಾಯಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಬರಪರಿಸ್ಥಿತಿಯಿಂದ ಸುಮಾರು 30 ಸಾವಿರ ಕೋಟಿ ರೂ. ಬೆಳೆಹಾನಿಯಾಗಿದೆ. ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 4,860 ಕೋಟಿ ರೂ. ಪರಿಹಾರವನ್ನು ಕೋರಲಾಗಿದ್ದು, ಈ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಬರಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದೆ. ಕೇಂದ್ರದ ಅಧ್ಯಯನ ತಂಡಕ್ಕೆ ರಾಜ್ಯದಲ್ಲಿ ತಲೆದೋರಿರುವ ಬರಪರಿಸ್ಥಿತಿಯ ವಸ್ತುಸ್ಥಿತಿಯನ್ನು ಈಗಾಗಲೇ ವಿವರಿಸಲಾಗಿದೆ. ಒಟ್ಟು 236 ತಾಲ್ಲೂಕುಗಳಲ್ಲಿ 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
ಸುಮಾರು 30 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಬೆಳೆಹಾನಿ ಸಂಭವಿಸಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು ಶೇ. 52 ರಷ್ಟು ಬೆಳೆಹಾನಿಯಾಗಿದೆ. ಕೃಷ್ಣಾ ಮೇಲ್ದಂಡೆ ಹಾಗೂ ನಾರಾಯಣಪುರ ಜಲಾಶಯಗಳನ್ನು ಹೊರತುಪಡಿಸಿ, ಕಾವೇರಿ ಸೇರಿದಂತೆ ಇನ್ನುಳಿದ ಜಲಾನಯನ ಪ್ರದೇಶಗಳಲ್ಲಿ ನೀರಿನ ಸಂಗ್ರಹವಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ 4,860 ಕೋಟಿ ರೂ.ಗಳ ಪರಿಹಾರವನ್ನು ಕೇಂದ್ರದಿಂದ ಕೋರಲಾಗಿದೆ. ಈ ಬಾರಿ ಹಸಿರು ಬರ ಉಂಟಾಗಿದೆ. ಕೇಂದ್ರದ ಅಧ್ಯಯನ ತಂಡ ಮೂರು ತಂಡಗಳಲ್ಲಿ ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಅವರು ಕೇಂದ್ರಕ್ಕೆ ವರದಿ ಸಲ್ಲಿಸಿದ ನಂತರ, ವರದಿ ಆಧರಿಸಿದಂತೆ ಕೇಂದ್ರ ಪರಿಹಾರ ನೀಡಲಿದೆ.
ಹಿಂದಿನ ರಾಜ್ಯ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯೆಂದು ಘೋಷಿಸಿ, 5,300 ಕೋಟಿ ರೂ. ಬಿಡುಗಡೆ ಮಾಡಲಿದೆ ಎಂದಿದ್ದರು. ಆದರೆ ಇದುವರೆಗೆ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಈ ಮೊತ್ತವನ್ನು ಆದಷ್ಟು ಬೇಗನೆ ಬಿಡುಗಡೆಗೊಳಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಕೋರಲಾಗಿದೆ. ನಮ್ಮ ಸರ್ಕಾರವು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುವುದು. ಪ್ರಸಕ್ತ ವರ್ಷ ಹಾಗೂ ಮುಂದಿನ ವರ್ಷವೂ ಕೂಡ ಈ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಲ್ಲದೆ ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸಿದ ಕಾವಾಡಿಗರಹಟ್ಟಿಯ ಸಂತ್ರಸ್ಥ ಕುಟುಂಬಗಳನ್ನು ಭೇಟಿಮಾಡಿ, ಬಳಿಕ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅವುಗಳ ಪರಿಹಾರಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ 4 ಕೋಟಿ ರೂಪಾಯಿ ನೀಡಿದ್ದೇವೆ. ಸಂತ್ರಸ್ಥ ಕುಟುಂಬಗಳ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ. ಈ ಕುಟುಂಬಗಳ ಸದಸ್ಯರಿಗೆ ಉದ್ಯೋಗವನ್ನೂ ಕೊಡುತ್ತೇವೆ, ಮನೆಯನ್ನೂ ಕಟ್ಟಿಸಿಕೊಡುತ್ತೇವೆ. ಶುದ್ಧ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ. ಘಟನೆ ಘಟಿಸಿದ ತಕ್ಷಣ ಸ್ಥಳೀಯ ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟು, ತಕ್ಷಣಕ್ಕೆ 10 ಲಕ್ಷ ಪರಿಹಾರ ನೀಡಲಾಗಿತ್ತು.
ಮೊದಲೇ ಶುದ್ಧ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ಧ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications