2nd PUC Result: ಪಿಯುಸಿ ಫಲಿತಾಂಶದಲ್ಲಿ ಹೊಸ ದಾಖಲೆ ಬರೆದ ವಿದ್ಯಾಕಾಶಿ!
ಧಾರವಾಡ: ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದ್ದು, ಇಡೀ ದೇಶದಲ್ಲೇ ಶಿಕ್ಷಣ ವ್ಯವಸ್ಥೆ ವಿಚಾರದಲ್ಲಿ ಹೆಸರು ಮಾಡಿರುವ ಕರ್ನಾಟಕ ಮತ್ತೊಮ್ಮೆ ಗಮನ ಸೆಳೆದಿದೆ. ಅದರಲ್ಲೂ ಈ ನಮ್ಮ ರಾಜ್ಯದಲ್ಲಿ ಶೈಕ್ಷಣಿಕ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಕಾಣುತ್ತಿದ್ದು, ಈಗ ವಿದ್ಯಾಕಾಶಿ ಧಾರವಾಡ ಜಿಲ್ಲೆಯಲ್ಲೂ ಹೊಸ ಮನ್ವಂತರ ಆರಂಭವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಶೈಕ್ಷಣಿಕ ಸುಧಾರಣೆ ಕಂಡು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಭಾರಿ ದೊಡ್ಡ ಮಟ್ಟದಲ್ಲಿ ಸುಧಾರಣೆಯನ್ನ ಕಂಡಿದೆ. ಜಿಲ್ಲಾಡಳಿತ ಕೂಡ ಈ ಬಗ್ಗೆ ಸಂತಸಗೊಂಡಿದ್ದು, ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಅದ್ರಲ್ಲೂ ಪಿಯುಸಿ ಪರೀಕ್ಷೆ ವಿಚಾರದಲ್ಲಿ ಈ ಬಾರಿ ಜಿಲ್ಲೆ ಸಾಧನೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ವರ್ಷ ಅಂದರೆ 2023-24ನೇ ಸಾಲಿನಲ್ಲಿ 23ನೇ ರ‍್ಯಾಂಕ್ ಪಡೆದಿದ್ದ ಧಾರವಾಡ ಜಿಲ್ಲೆಯು ಈ ಬಾರಿಯ ಫಲಿತಾಂಶದಲ್ಲಿ ಭರ್ಜರಿಯಾಗಿ ಏರಿಕೆ ಕಂಡು 2024-25ನೇ ಸಾಲಿನಲ್ಲಿ 17ನೇ ರ‍್ಯಾಂಕ್ ಪಡೆದು ಗೆದ್ದು ಬೀಗಿದೆ.

ಪಿಯುಸಿ ಸಾಧನೆ ಬಗ್ಗೆ ಡಿಸಿ ಹೇಳಿದ್ದೇನು?
ಕರ್ನಾಟಕ ರಾಜ್ಯದ ಪಿಯುಸಿ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆಯ ಶೈಕ್ಷಣಿಕ ಸುಧಾರಣೆಯ ಬಗ್ಗೆ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಸಂತಸ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯಕ್ಕೆ ಕಲಾ ವಿಭಾಗದಲ್ಲಿ 2, ವಾಣಿಜ್ಯ ವಿಭಾಗದಲ್ಲಿ 2 ಹಾಗೂ ವಿಜ್ಞಾನ ವಿಭಾಗದಲ್ಲಿ ಒಟ್ಟು 5 ರ‍್ಯಾಂಕ್ ಪಡೆಯುವ ಮೂಲಕ 9 ರ‍್ಯಾಂಕ್‌ನ ಜಿಲ್ಲೆ ತನ್ನದಾಗಿಸಿಕೊಂಡಿದೆ. ಈ ಮೂಲಕ ಮಹತ್ವದ ಗುರಿಯನ್ನು ತಲುಪಲಾಗಿದೆ ಎಂದು ಮಿಷನ್ ವಿದ್ಯಾಕಾಶಿ ಯೋಜನೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಅವರು ಸಂತಸ ಹಂಚಿಕೊಂಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಿಹಿ ಹಂಚಿದ ಡಿಸಿ
ಜಿಲ್ಲಾಧಿಕಾರಿ ದಿವ್ಯಾ ಪ್ರಭು ಇಂದು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಕಲಾ ವಿಭಾಗದಲ್ಲಿ ಶೇಕಡಾ 53 ರಷ್ಟು ಇತ್ತು, ಪ್ರಸಕ್ತ ವರ್ಷ ಶೇ. 55.21ಕ್ಕೆ ಏರಿಕೆ ಕಂಡಿದೆ. ಹಾಗೇ ವಾಣಿಜ್ಯ ವಿಭಾಗದಲ್ಲಿ ಈ ವರ್ಷ ಫಲಿತಾಂಶ ಶೇಕಡಾ 65.44 ರಷ್ಟು ಆಗಿದೆ. ವಿಜ್ಞಾನ ವಿಭಾಗದಲ್ಲಿ ಈ ವರ್ಷ ಶೇಕಡಾ 84.29 ರಷ್ಟು ಫಲಿತಾಂಶವು ಬಂದಿದೆ ಎಂದು ತಿಳಿಸಿದ್ದಾರೆ.
ಇನ್ನು ಧಾರವಾಡ ಜಿಲ್ಲೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವುದಕ್ಕೆ ಜಿಲ್ಲಾಡಳಿತ ಸಂತಸಗೊಂಡಿದ್ದು, ಮುಂದಿನ ವರ್ಷ ಮತ್ತಷ್ಟು ಸುಧಾರಣೆ ಕಾಣಲು ಬೇಕಿರುವ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ಹಾಗೂ ಸುದ್ದಿಗೋಷ್ಠಿ ವೇಳೆ ಆಗಮಿಸಿದ್ದ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಡಿಸಿ & ಜಿಲ್ಲಾ ಪಂಚಾಯಿತಿ ಸಿಇಒ ಸಿಹಿಯನ್ನು ಹಂಚಿದರು.











Click it and Unblock the Notifications